- ರೈತರ ಹೋರಾಟಕ್ಕೆ ಕರವೇ ಸಂಪೂರ್ಣ ಬೆಂಬಲವಾರಾಬಂದಿ ಪದ್ಧತಿ ರದ್ದುಪಡಿಸಿ
ವಿಕ ಸುದ್ದಿಲೋಕ ಹುಣಸಗಿ
ಭತ್ತದ ಬೆಳೆ ಕಾಳು ಕಟ್ಟುವ ನಿರ್ಣಾಯಕ ಹಂತದಲ್ಲಿರುವಾಗ ಜಾರಿಗೊಳಿಸಿರುವ ವಾರಾಬಂದಿ ಪದ್ಧತಿ ಅವೈಜ್ಞಾನಿಕವಾಗಿದೆ. ಇದರಿಂದ ರೈತರಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಯಾದಗಿರಿ ಜಿಲ್ಲಾಧ್ಯಕ್ಷ ಟಿ.ಎನ್ .ಭೀಮುನಾಯಕ ತಿಳಿಸಿದ್ದಾರೆ.
ರೈತರ ಬೆಳೆಗಳಿಗೆ ಸಮರ್ಪಕವಾಗಿ ನೀರು ದೊರೆಯದಿದ್ದರೆ ಭತ್ತದ ಇಳುವರಿ ಕುಂಠಿತವಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಆತಂಕವಿದೆ. ಆದ್ದರಿಂದ ಸರಕಾರ ಕೂಡಲೇ ವಾರಾಬಂದಿ ಪದ್ಧತಿ ರದ್ದುಪಡಿಸಿ, ನವೆಂಬರ್ 15ರವರೆಗೆ ನಾರಾಯಣಪುರ ಎಡ ಮತ್ತು ಬಲ ದಂಡೆ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಬೇಡಿಕೆಗಳ ಈಡೇರಿಕೆಗಾಗಿ ಅ.24ರಂದು ದೇವಾಪುರ ಕ್ರಾಸ್ ನಲ್ಲಿರಾಜ್ಯ ಹೆದ್ದಾರಿ ತಡೆದು ನಡೆಯಲಿರುವ ರೈತರ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರೈತರ ಹಿತದೃಷ್ಟಿಯಿಂದ ಹೋರಾಟದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಹುಣಸಗಿ ಮತ್ತು ಸುರಪುರ ತಾಲೂಕು ಅಧ್ಯಕ್ಷರುಗಳು, ವಿವಿಧ ಘಟಕಗಳ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ನೀರಿನ ಹಕ್ಕಿಗಾಗಿ ನಡೆಯುವ ಹೋರಾಟದಲ್ಲಿ ಸಾರ್ವಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.