ವಿಕ ಸುದ್ದಿಲೋಕ ಚಿಂತಾಮಣಿಚಿಂತಾಮಣಿ-ಬೆಂಗಳೂರು ಹೆದ್ದಾರಿಯ ಚಿನ್ನಸಂದ್ರ ಹಾಗೂ ಕೆಂದನಹಳ್ಳಿ ಗ್ರಾಮದ ಸಮೀಪ ಕಾರು ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ,ಕಾರಿನ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಮೂರು ವರ್ಷದ ಮಗು ಸೇರಿದಂತೆ ಐವರು ಗಾಯಗೊಂಡಿರುವ ಘಟನೆ ನಡೆದಿದೆ.
ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ತಂಬಾಳಪಲ್ಲಿತಾಲೂಕಿನ ಕಲಿಚೇರಲು ಗ್ರಾಮದ ಅಬ್ದುಲ್ ರಹಮಾನ್ (23) ಮೃತ ಚಾಲಮ. ಮುಜಾಮಿಲ್ (3), ಬಾಬುಲ್ ಅಕ್ತರ್ (50), ಉನ್ನಿಸಾ,ಗೌಸಿಯಾ ಹಾಗೂ ರಷೀದ್ ಪಾಷಾ ದುರಂತದಲ್ಲಿಗಾಯಗೊಂಡಿದ್ದಾರೆ.
ಆಂಧ್ರಪದೇಶದ ತಂಬಾಳಪಲ್ಲಿಯಿಂದ ಕುವೈತ್ ಗೆ ತೆರಳುತ್ತಿದ್ದ ಚಾಂದ್ ಪಾಷಾ ಅವರನ್ನು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಿಟ್ಟು ವಾಪಸಾಗುತ್ತಿದ್ದ ಕಾರಿಗೆ ಆಂಧ್ರಪ್ರದೇಶದ ಮದನಪಲ್ಲಿಯಿಂದ ಬೆಂಗಳೂರಿನತ್ತ ಬರುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಅದರೊಳಗೆ ಸಿಲುಕಿದ್ದ ಚಾಲಕನನ್ನು ಹೊರತೆಗೆಯಲು ಸ್ಥಳೀಯರು ಹರಸಾಹಸ ಪಟ್ಟರು ಎಂದು ತಿಳಿದು ಬಂದಿದೆ.
ಅಪಘಾತದಲ್ಲಿಗಾಯಗೊಂಡವರನ್ನು ತಕ್ಷಣವೇ ಎಚ್ . ಕ್ರಾಸ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಮೃತ ಚಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಕೈವಾರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಕುಟುಂಬಸ್ಥರ ದೂರಿನ ಮೇರೆಗೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.