ಪೊಲೀಸ್ ಸೇವೆಯಲ್ಲಿಜ್ಞಾನ, ನೈತಿಕತೆ ಮತ್ತು ಮಾನವೀಯತೆ ಪ್ರಮುಖ ಮೌಲ್ಯಗಳಾಗಿವೆ ಎಂದು ಜಿಲ್ಲಾಧಿಕಾರಿ ಕೆ.ಎಸ್ . ಲತಾಕುಮಾರಿ ಹೇಳಿದರು.
ನಗರದ ಜಿಲ್ಲಾಪೊಲೀಸ್ ಕವಾಯತು ಮೈದಾನದಲ್ಲಿನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿಮಾತನಾಡಿ, ‘‘ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಮಣಿಯದೆ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುವುದರ ಜತೆಗೆ, ಸಾರ್ವಜನಿಕರ ಸಮಸ್ಯೆಗಳಿಗೆ ಮಾನವೀಯವಾಗಿ ಸ್ಪಂದಿಸಬೇಕು,’’ ಎಂದು ಸಲಹೆ ನೀಡಿದರು.
‘‘ತಂತ್ರಜ್ಞಾನ ಬೆಳವಣಿಗೆಯೊಂದಿಗೆ ಅಪರಾಧಗಳ ಸ್ವರೂಪವೂ ಬದಲಾಗುತ್ತಿದೆ. ಸೈಬರ್ ಅಪರಾಧ ಸೇರಿದಂತೆ ಹೊಸ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಪೊಲೀಸರು ನಿರಂತರವಾಗಿ ಜ್ಞಾನ ಮತ್ತು ತಾಂತ್ರಿಕ ಕೌಶಲ ವೃದ್ಧಿಸಿಕೊಳ್ಳಬೇಕು,’’ ಎಂದರು.
‘‘ಪೊಲೀಸ್ ಇಲಾಖೆಯಲ್ಲಿಮಹಿಳಾ ಸಿಬ್ಬಂದಿ ಪುರುಷರಿಗೆ ಸಮಾನವಾಗಿ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಅವರ ಸಾಮರ್ಥ್ಯವನ್ನು ಲಿಂಗದ ಆಧಾರದಲ್ಲಿಅಳೆಯದೆ, ಸೇವೆ ಮತ್ತು ಕಾರ್ಯಕ್ಷಮತೆಯ ಆಧಾರದಲ್ಲಿಗುರುತಿಸಬೇಕು,’’ ಎಂದು ಹೇಳಿದರು.
‘‘ಮಹಿಳಾ ಪೊಲೀಸರಿಗೆ ಸ್ವಚ್ಛ ಶೌಚಾಲಯ, ಸ್ಯಾನಿಟರಿ ಪ್ಯಾಡ್ ವಿಲೇವಾರಿ ವ್ಯವಸ್ಥೆ ಹಾಗೂ ಬಟ್ಟೆ ಬದಲಾಯಿಸಲು ಪ್ರತ್ಯೇಕ ಕೊಠಡಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ಮುಖ್ಯವಾಗಿದೆ,’’ ಎಂದು ತಿಳಿಸಿದರು.
‘‘ಹಾಸನಾಂಬ ಜಾತ್ರೆಯಂತಹ ಸೂಕ್ಷ್ಮ ಸಂದರ್ಭಗಳಲ್ಲಿಮಹಿಳಾ ಪೊಲೀಸರು ನಿರ್ವಹಿಸಿದ ಕರ್ತವ್ಯ ಶ್ಲಾಘನೀಯ. ಕೌಟುಂಬಿಕ ಹಿಂಸೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿಸಂತ್ರಸ್ತರಿಗೆ ವಿಶ್ವಾಸದ ವಾತಾವರಣ ಕಲ್ಪಿಸುವಲ್ಲಿಮಹಿಳಾ ಪೊಲೀಸರ ಪಾತ್ರ ಮಹತ್ವದ್ದಾಗಿದೆ,’’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘‘ಹಬ್ಬ, ಜಾತ್ರೆ ಹಾಗೂ ವಿವಿಧ ಸಮಾರಂಭಗಳ ಸಂದರ್ಭದಲ್ಲಿಯೂ ಪೊಲೀಸರು ಸಾರ್ವಜನಿಕರ ಸುರಕ್ಷತೆಗಾಗಿ ಕರ್ತವ್ಯ ನಿರ್ವಹಿಸುತ್ತಾರೆ. ತಮ್ಮ ವೈಯಕ್ತಿಕ ಸಂತೋಷ ಮತ್ತು ಕುಟುಂಬದೊಂದಿಗೆ ಕಳೆಯಬೇಕಾದ ಸಮಯವನ್ನು ತ್ಯಾಗ ಮಾಡುವ ಪೊಲೀಸ್ ಸಿಬ್ಬಂದಿಯ ಸೇವೆಯ ಜತೆಗೆ, ಅವರ ಕುಟುಂಬಗಳ ತ್ಯಾಗವನ್ನೂ ಸಮಾಜ ಗುರುತಿಸಬೇಕು. ಶಾಂತಿಯುತ ಸಮಾಜ ನಿರ್ಮಾಣಕ್ಕೆ ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರವೂ ಅಗತ್ಯ,’’ ಎಂದು ಹೇಳಿದರು.
ಎಸ್ ಪಿ ಶುಭಾನ್ವಿತಾ ಮಾತನಾಡಿ, ‘‘1959ರ ಅ.21ರಂದು ಲಡಾಖ್ ನ ಹಾಟ್ ಸ್ಟ್ರಿಂಗ್ಸ್ ಪ್ರದೇಶದಲ್ಲಿಕರ್ತವ್ಯ ನಿರ್ವಹಿಸುವಾಗ ಪ್ರಾಣತ್ಯಾಗ ಮಾಡಿದ 10 ವೀರ ಪೊಲೀಸ್ ಸಿಬ್ಬಂದಿಯ ಸ್ಮರಣಾರ್ಥ ಪ್ರತಿವರ್ಷ ಅ.21ರಂದು ಪೊಲೀಸ್ ಹುತಾತ್ಮರ ದಿನ ಆಚರಿಸಲಾಗುತ್ತದೆ,’’ ಎಂದು ತಿಳಿಸಿದರು.
‘‘ದೇಶದ ರಕ್ಷಣೆ ಹಾಗೂ ಜನರ ಸುರಕ್ಷತೆಗಾಗಿ ಕರ್ತವ್ಯದ ಹಾದಿಯಲ್ಲಿಪ್ರಾಣ ಅರ್ಪಿಸಿದ ಪೊಲೀಸ್ ಸಿಬ್ಬಂದಿಯ ತ್ಯಾಗವನ್ನು ಸ್ಮರಿಸುವುದು ಈ ದಿನದ ಉದ್ದೇಶವಾಗಿದೆ. ಜನರು ಹಬ್ಬ ಆಚರಿಸುವಾಗ, ಕುಟುಂಬದೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುವಾಗ ಹಾಗೂ ರಾತ್ರಿ ನೆಮ್ಮದಿಯಿಂದ ನಿದ್ರಿಸುವಾಗಲೂ ಪೊಲೀಸರು ತಮ್ಮ ಕರ್ತವ್ಯದಲ್ಲಿನಿರತರಾಗಿರುತ್ತಾರೆ,’’ ಎಂದರು.
ಜಿಪಂ ಸಿಇಒ ಶುಭಂ ಶುಕ್ಲಾಮಾತನಾಡಿ, ‘‘ಸಾರ್ವಜನಿಕರ ರಕ್ಷಣೆಗಾಗಿ ಪೊಲೀಸರು ತಮ್ಮ ವೈಯಕ್ತಿಕ ಸಂತಸದ ಕ್ಷಣಗಳನ್ನೂ ತ್ಯಾಗ ಮಾಡುತ್ತಾರೆ. ಅವರ ಕುಟುಂಬಗಳ ಸಹನೆ, ತ್ಯಾಗ ಮತ್ತು ಸಮರ್ಪಣೆಯೂ ಗೌರವಕ್ಕೆ ಅರ್ಹವಾಗಿವೆ. ಕರ್ತವ್ಯದ ವೇಳೆ ಪ್ರಾಣ ಕಳೆದುಕೊಂಡ ಪೊಲೀಸ್ ಸಿಬ್ಬಂದಿಯ ಕುಟುಂಬಗಳಿಗೆ ಪೊಲೀಸ್ ಇಲಾಖೆ ಸದಾ ಬೆಂಬಲವಾಗಿ ನಿಲ್ಲಬೇಕು. ಅವರಿಗೆ ಸಾಧ್ಯವಿರುವ ಎಲ್ಲಾನೆರವು ಒದಗಿಸುವುದು ಇಲಾಖೆಯ ನೈತಿಕ ಹೊಣೆಗಾರಿಕೆಯಾಗಿದೆ,’’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿಗಣ್ಯರು ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಗೌರವಾರ್ಥ ಮೂರು ಸುತ್ತು ಗುಂಡು ಹಾರಿಸಲಾಯಿತು. ಹುತಾತ್ಮರ ಪಟ್ಟಿ ಓದಿ, ಪೊಲೀಸ್ ಧ್ವಜವನ್ನು ಅರ್ಧಮಟ್ಟದಲ್ಲಿಹಾರಿಸಿ ಎರಡು ನಿಮಿಷ ಮೌನ ಆಚರಿಸಲಾಯಿತು.
ಎಎಸ್ ಪಿ ಎನ್ . ಶ್ರೀನಿಧಿ ಸೇರಿದಂತೆ ಇತರರು ಹಾಜರಿದ್ದರು.