Festivities Of New Year 2026 Joyful Celebrations In Davanagere With Cake Cutting
2025ಕ್ಕೆ ವಿದಾಯ 2026ಕ್ಕೆ ಸಂಭ್ರಮದ ಸ್ವಾಗತ
Contributed by: Vinayaka Naik P|Vijaya Karnataka•
ಹೊಸ ವರ್ಷ 2026ರ ಸಂಭ್ರಮ ಜಿಲ್ಲೆಯಾದ್ಯಂತ ಮನೆ ಮಾಡಿತ್ತು. ಜನರು ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ಪರಸ್ಪರ ಶುಭಾಶಯ ಕೋರಿದರು. ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಮದ್ಯ ಪ್ರಿಯರು ಗೆಳೆಯರೊಂದಿಗೆ ಸಂಭ್ರಮಿಸಿದರು. ರೆಸ್ಟೋರೆಂಟ್, ಬಾರ್‌ಗಳು ಗ್ರಾಹಕರಿಂದ ತುಂಬಿದ್ದವು. ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು. ಗಾನಸುಧೆ, ಓಪನ್ ಏರ್ ಪಾರ್ಟಿಗಳು ನಡೆದವು.
ದಾವಣಗೆರೆ ಜನತೆ 2025ಕ್ಕೆ ಕಹಿ ನೆನಪುಗಳನ್ನು ಮರೆತು, ಹೊಸ ಸಂಕಲ್ಪಗಳೊಂದಿಗೆ 2026ರ ಹೊಸ ವರ್ಷವನ್ನು ಬುಧವಾರ ರಾತ್ರಿ 12 ಗಂಟೆಗೆ ಸಂಭ್ರಮದಿಂದ ಸ್ವಾಗತಿಸಿದರು. ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ಸಿಳ್ಳೆ ಹೊಡೆದು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಹೊಸ ವರ್ಷವನ್ನು ಬರಮಾಡಿಕೊಂಡರು. ರಾತ್ರಿ ಆಕಾಶದಲ್ಲಿ ಬಣ್ಣ ಬಣ್ಣದ ಪಟಾಕಿಗಳು ಕಣ್ಣು ಕೋರೈಸುವಂತೆ ಹೊಮ್ಮಿದವು.
ಹೊಸ ವರ್ಷದ ಸಂಭ್ರಮವನ್ನು ಹೆಚ್ಚಿಸಲು ಸಂಜೆಯಾಗುತ್ತಿದ್ದಂತೆ ಬೇಕರಿಗಳಲ್ಲಿ ಜನಸಂದಣಿ ಹೆಚ್ಚಾಗಿತ್ತು. ಮುಂಗಡ ಹಣ ಪಾವತಿಸಿ ತಮ್ಮಿಷ್ಟದ ಕೇಕ್‌ಗಳನ್ನು ಆರ್ಡರ್ ಮಾಡಿದ್ದವರು ಸಂಜೆಯ ವೇಳೆ ಖರೀದಿಸಿದರು. ಅನೇಕರು ಕುಟುಂಬ ಸಮೇತ ದೇವಸ್ಥಾನಗಳಿಗೆ ತೆರಳಿ, ಮುಂದಿನ ವರ್ಷ ಸುಖ, ಸಂತೋಷದಿಂದ ಇರಲು ದೇವರಲ್ಲಿ ಪ್ರಾರ್ಥಿಸಿದರು.ಮದ್ಯಪ್ರಿಯರು ಎಂಎಸ್‌ಐಎಲ್, ಎಂಆರ್‌ಪಿ ಮಳಿಗೆಗಳಿಂದ ಮದ್ಯ ಖರೀದಿಸಿ, ಸ್ನೇಹಿತರೊಂದಿಗೆ ಲಾಡ್ಜ್‌ಗಳಲ್ಲಿ ಅಥವಾ ತಮ್ಮ ಮನೆಗಳಲ್ಲಿ ಸೇರಿಕೊಂಡು ಬಿಯರ್, ವಿಸ್ಕಿ, ಬ್ರಾಂಡಿ, ರಮ್, ವೊಡ್ಕಾ ಸೇವಿಸುತ್ತಾ 2025ರ ಘಟನೆಗಳನ್ನು ನೆನಪಿಸಿಕೊಂಡರು. ರೆಸ್ಟೋರೆಂಟ್, ಬಾರ್, ಹೋಟೆಲ್‌ಗಳು ತಡರಾತ್ರಿಯವರೆಗೂ ಗ್ರಾಹಕರಿಂದ ತುಂಬಿ ತುಳುಕುತ್ತಿದ್ದವು. ಹೊಸ ವರ್ಷದ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.
ದಾವಣಗೆರೆ ಕ್ಲಬ್‌ನಲ್ಲಿ ನಡೆದ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಬೆಂಗಳೂರಿನ ಗಾಯಕರು, ಮನೋವಜಂ ಅತ್ತ್ರೇಯಾ, ಸಾಕ್ಷಿ ಕಲ್ಲೂರ, ಚಿನ್ಮಯ್, ಅರುಂಧತಿ ಹೆಗಡೆ ಅವರು ಸಂಗೀತ ಕಾರ್ಯಕ್ರಮ ನೀಡಿದರು. ನಗರದ ಖಾಸಗಿ ಹೋಟೆಲ್‌ಗಳ ಪಾರ್ಟಿ ಹಾಲ್‌ಗಳಲ್ಲಿ ಓಪನ್ ಏರ್ ಪಾರ್ಟಿಗಳು ನಡೆದವು. ಕೆಲ ಯುವಕರು ಕೇಕ್ ಕತ್ತರಿಸುವಾಗ 2026 ಎಂದು ಬರೆಸಿ ಸಂಭ್ರಮಿಸಿದರು. ಇನ್ನು ಕೆಲವರು ರಸ್ತೆಯಲ್ಲಿ 2026 ಎಂದು ಬಣ್ಣಗಳಲ್ಲಿ ಬರೆದು, ಹಾಡು ಹಾಕಿಕೊಂಡು ಕುಣಿದು ಕುಪ್ಪಳಿಸಿದರು.