ದಲಿತರ ಕಡೆಗಣಿಸುವ ಸರಕಾರ
ವಿಕ ಸುದ್ದಿಲೋಕ ಬಾಗಲಕೋಟೆ
‘‘ದಲಿತರ ಬಗ್ಗೆ ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸಿದೆ, ಹುಬ್ಬಳ್ಳಿಯ ಮಾನ್ಯ ಕೊಲೆ ಪ್ರಕರಣದಲ್ಲಿಈವರೆಗೂ ಗೃಹ ಸಚಿವರು ಕುಟುಂಬವನ್ನು ಭೇಟಿ ಮಾಡಿಲ್ಲ’’ ಎಂದು ಆದಿಜಾಂಬವ ಜಾಗೃತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಶಿವಾನಂದ ಟವಳಿ ಆರೋಪಿಸಿದರು.
ನಗರದಲ್ಲಿಬುಧವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು ‘‘ದಲಿತ ಯುವಕನನ್ನು ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ಇನಾಂ ವೀರಾಪುರ ಗ್ರಾಮದ ಮಾನ್ಯಳನ್ನು ಪಾಲಕರು ಕೊಲೆ ಮಾಡಿದ್ದಾರೆ. ಪತಿ ವಿವೇಕಾನಂದ ಹಾಗೂ ಕುಟುಂಬದವರಿಗೆ ತೀವ್ರವಾಗಿ ಗಾಯಗಳಾಗಿವೆ. ಪುತ್ರಿಯನ್ನೇ ಹತ್ಯೆ ಮಾಡಿದ ಘಟನೆ ರಾಕ್ಷಸಿ ಕೃತ್ಯಕ್ಕೆ ಸಮವಾಗಿದೆ. ಈವರೆಗೂ ಗೃಹ ಸಚಿವರು ಕುಟುಂಬಕ್ಕೆ ಸಾಂತ್ವನ ಹೇಳಿಲ್ಲ, ತಕ್ಷಣ ರಾಜೀನಾಮೆ ಕೊಡಬೇಕು. ಕಾಂಗ್ರೆಸ್ ಸರಕಾರದ ಅವಧಿಯಲ್ಲಿದಲಿತರ ಮೇಲೆ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ’’ ಎಂದು ಟೀಕಿಸಿದರು.
‘‘ದಲಿತರಿಗೆ ರಕ್ಷಣೆ ನೀಡುವ ಉದ್ದೇಶದಿಂದ ರಾಜ್ಯ ಸರಕಾರ 33 ಡಿಸಿಆರ್ ಇ ಪೊಲೀಸ್ ಠಾಣೆ ಸ್ಥಾಪಿಸಿದೆ. ಈವರೆಗೆ ಪ್ರಕರಣದ ಬಗ್ಗೆ ವಿಚಾರಣೆ ಮಾಡಲು ಮಾತ್ರ ಈ ಠಾಣೆಯ ಅಧಿಕಾರಿಗಳಿಗೆ ಅವಕಾಶವಿತ್ತು. ಇದೀಗ ಯಾವುದೇ ಠಾಣೆಯಲ್ಲಿದಲಿತರ ಮೇಲೆ ದೌರ್ಜನ್ಯ ಪ್ರಕರಣ ದಾಖಲಾದರೆ ಈ ಠಾಣೆಗೆ ವರ್ಗಾವಣೆಯಾಗುತ್ತದೆ. ವಿಚಿತ್ರವೆಂದರೆ 21 ಠಾಣೆಗಳಿಗೆ ಡಿಎಸ್ ಪಿ ಹುದ್ದೆಯ ಅಧಿಕಾರಿ ನೇಮಕವಾಗಿಲ್ಲ. ಇಡೀ ಪ್ರಕರಣದ ತನಿಖೆ ನಡೆಸಬೇಕಾದ ಅಧಿಕಾರಿ ನೇಮಕ ಮಾಡದ ಸರಕಾರ ಕೇವಲ ಹೇಳಿಕೆಗಳಿಗೆ ಸೀಮಿತವಾಗಿದೆ. ಅಹಿಂದ ಎಂದು ಸಮರ್ಥಿಸಿಕೊಳ್ಳುವ ಮುಖ್ಯಮಂತ್ರಿ ಈ ಠಾಣೆಗಳಿಗೆ ಅಧಿಕಾರಿಗಳ ನೇಮಕದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ’’ ಎಂದರು.
ಜಿಲ್ಲಾಪ್ರಧಾನ ಕಾರ್ಯದರ್ಶಿ ಹಣಮಂತ ಚಿಮ್ಮಲಗಿ ‘‘ಕೊಲೆ ಪ್ರಕರಣ ಖಂಡಿಸಿ ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ದಲಿತ ಸಮುದಾಯದ ಸಚಿವರು, ಶಾಸಕರು ವಿವೇಕಾನಂದ ಕುಟುಂಬ ಭೇಟಿ ಮಾಡಿ ಸಾಂತ್ವನ ಹೇಳಬೇಕು’’ ಎಂದು ಆಗ್ರಹಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಸಿದ್ದಪ್ಪ ದೊಡಮನಿ, ಉಪಾಧ್ಯಕ್ಷ ಕೆ.ಎಸ್ .ಪೂಜಾರ, ವಿಠ್ಠಲ ಹೊಸಮನಿ, ಎಸ್ .ಆರ್ .ಕಟ್ಟಿಮನಿ ಇದ್ದರು.
----

