ಸಿಐಟಿಯುನಿಂದ ಕಾರ್ಮಿಕರ ದಿನಾಚರಣೆ
ದೊಡ್ಡಬಳ್ಳಾಪುರ: ಮೇ 1ರಂದು ಕಾರ್ಮಿಕರ ದಿನಾಚರಣೆಯನ್ನು ಕಾರ್ಮಿಕರ ನಾನಾ ಬೇಡಿಕೆಗಳನ್ನು ಒತ್ತಾಯಿಸುವ ಮೂಲಕ ಆಚರಿಸಲಾಗುತ್ತಿದೆ ಎಂದು ಸಿಐಟಿಯು ಜಿಲ್ಲಾಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ಸಿದ್ದಲಿಂಗಯ್ಯ ವೃತ್ತದ ಬಳಿಯಲ್ಲಿನ ಮುಗವಾಳಪ್ಪ ಪ್ರತಿಮೆ ಮುಂಭಾಗದಲ್ಲಿಶುಕ್ರವಾರ ಬೆಳಗ್ಗೆ 9ಗಂಟೆಗೆ ಸಿಐಟಿಯು ವತಿಯಿಂದ ಮೇ ದಿನೋತ್ಸವ ಆಚರಿಸಲಾಗುತ್ತಿದೆ. ಕಾರ್ಮಿಕರಿಗೆ 8 ಗಂಟೆ ಕೆಲಸ, ಖಾಯಂ ಉದ್ಯೋಗ, ಮಾಸಿಕ ಸರಾಸರಿ 36 ಸಾವಿರ ಕನಿಷ್ಠ ವೇತನ ನಿಗದಿ, ಕೇಂದ್ರ ಸರಕಾರ ಜಾರಿಗೊಳಿಸಿರುವ ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳನ್ನು ಹಿಂಪಡೆಯಬೇಕು, ಕಾರ್ಮಿಕರ ಹಕ್ಕುಗಳ ಉಳಿವಿಗಾಗಿ, ಸ್ಕೀಮ್ ಹಾಗೂ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿ ಮಾಡಬೇಕೆಂದು ಈ ಕಾರ್ಯಕ್ರಮದ ಮೂಲಕ ಆಗ್ರಹಿಸಲಾಗುತ್ತದೆ ಎಂದಿದ್ದಾರೆ.

