ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ
ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ರಾಷ್ಟ್ರೀಯ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಮಾನ್ಯತಾ ಮಂಡಳಿ(ಎನ್ ಎಬಿಹೆಚ್ ) ಆರಂಭಿಕ ಹಂತದ ಮಾನ್ಯತೆ ನೀಡಿದ್ದು, ಇದರೊಂದಿಗೆ ಗ್ರಾಮೀಣ ಆರೋಗ್ಯ ಸೇವೆಗೆ ಹೊಸ ಬಲ ಸಿಕ್ಕಿದೆ.
ಈ ಪ್ರತಿಷ್ಠಿತ ಮಾನ್ಯತೆಯಿಂದಾಗಿ ಸಂಸ್ಥೆಯು ರೋಗಿಯ ಸುರಕ್ಷತೆ, ಗುಣಮಟ್ಟದ ಚಿಕಿತ್ಸೆ ಹಾಗೂ ಆಸ್ಪತ್ರೆ ನಿರ್ವಹಣೆಯ ರಾಷ್ಟ್ರೀಯ ಮಾನದಂಡಗಳನ್ನು ಸಮರ್ಥವಾಗಿ ಪಾಲಿಸುತ್ತಿದೆ ಎಂಬುದು ದೃಢಪಟ್ಟಿದೆ. ಸಂಪೂರ್ಣ ಉಚಿತ ಸೇವೆಗಳನ್ನು ನೀಡುವ ದೇಶದ ವಿರಳ ಗ್ರಾಮೀಣ ವೈದ್ಯಕೀಯ ಕಾಲೇಜುಗಳಲ್ಲಿಒಂದಾದ ಈ ಸಂಸ್ಥೆಗೆ ಹೊಸ ಗರಿಮೆ ಸಿಕ್ಕಿದಂತಾಗಿದೆ.
ಒಂದು ವರ್ಷದ ನಿರಂತರ ಪರಿಶ್ರಮ: ಸದ್ಗುರು ಶ್ರೀ ಮಧುಸೂದನ ಸಾಯಿ ಮಾರ್ಗದರ್ಶನದಲ್ಲಿ2025 ಜನವರಿಯಲ್ಲಿಆರಂಭವಾದ ಗುಣಮಟ್ಟ ಸುಧಾರಣಾ ಪ್ರಕ್ರಿಯೆ, ಒಂದು ವರ್ಷದ ನಿರಂತರ ಪರಿಶ್ರಮ, ಶಿಸ್ತು ಮತ್ತು ತಂಡದ ಪ್ರಯತ್ನದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿ ವರ್ಗದ ಪ್ರಯತ್ನಗಳಿಂದ ಕ್ಲಿನಿಕಲ್ ಮತ್ತು ಆಡಳಿತಾತ್ಮಕ ವ್ಯವಸ್ಥೆಗಳು ರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ರೂಪುಗೊಂಡು ಜಾರಿಯಾಗಿವೆ.
ಆರಂಭಿಕ ಹಂತದ ಮಾನ್ಯತೆ: ಈ ಅವಧಿಯಲ್ಲಿಆಂತರಿಕ ಹಾಗೂ ಬಾಹ್ಯ ಲೆಕ್ಕ ಪರಿಶೋಧನೆಗಳನ್ನು ಹಲವು ಹಂತಗಳಲ್ಲಿನಡೆಸಿ, ಕಾರ್ಯವಿಧಾನಗಳನ್ನು ಪರಿಶೀಲಿಸಿ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. 2026 ಜನವರಿ 12ರಂದು ನಡೆದ ಎನ್ ಎಬಿಹೆಚ್ ಪರಿಶೀಲನೆಯಲ್ಲಿಸಂಸ್ಥೆ ಯಶಸ್ವಿಯಾಗಿ ಉತ್ತೀರ್ಣವಾಗಿದೆ.
ದೇಶದಲ್ಲಿರುವ ಸುಮಾರು 80,000ದಿಂದ 90,000 ಆಸ್ಪತ್ರೆಗಳ ಪೈಕಿ ಕೇವಲ 1.4 ಶೇಕಡ ಆಸ್ಪತ್ರೆಗಳು ಮಾತ್ರ ಸಂಪೂರ್ಣ ಮಾನ್ಯತೆ ಪಡೆದಿವೆ. ಸುಮಾರು 3 ಶೇಕಡ ಆಸ್ಪತ್ರೆಗಳು ಮಾತ್ರ ಆರಂಭಿಕ ಹಂತದ ಮಾನ್ಯತೆ ಹೊಂದಿವೆ. ಸಂಪೂರ್ಣ ಉಚಿತ ವೈದ್ಯಕೀಯ ಸೇವೆಗಳನ್ನು ನೀಡುವ ಆಸ್ಪತ್ರೆಗಳ ಸಂಖ್ಯೆ ತೀರಾ ಕಡಿಮೆ. ನಮ್ಮ ಸಂಸ್ಥೆಗೆ ಮಾನ್ಯತೆ ದೊರಕಿರುವುದು ಮೊದಲ ಹೆಜ್ಜೆಯಾಗಿದೆ. ಶೀಘ್ರದಲ್ಲೇ ಸಂಪೂರ್ಣ ಎನ್ ಎಬಿಹೆಚ್ ಮಾನ್ಯತೆ ಪಡೆಯುವ ವಿಶ್ವಾಸವೂ ನಮಗಿದೆ ಎಂದು ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮೆಡಿಕಲ್ ಅಧೀಕ್ಷಕಿ ಡಾ. ಪದ್ಮಶ್ರೀ ಹೇಳಿದರು.
ಈ ಸಾಧನೆಯೊಂದಿಗೆ ಎಸ್ ಎಂಎಸ್ ಎಂಎಸ್ ಆರ್ ಸಂಪೂರ್ಣ ಉಚಿತ ಸೇವೆಗಳನ್ನು ನೀಡುವ ಖಾಸಗಿ ಗ್ರಾಮೀಣ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಪೈಕಿ ಒಂದಾಗಿ ಗುರುತಿಸಿಕೊಂಡಿದೆ. ಗ್ರಾಮೀಣ ಪ್ರದೇಶದಲ್ಲೇ ಉಚಿತ ಸೇವೆಗಳೊಂದಿಗೆ ಗುಣಮಟ್ಟದ ಚಿಕಿತ್ಸೆ ನೀಡಬಹುದು ಎಂಬುದನ್ನು ಈ ಸಂಸ್ಥೆ ಸಾಬೀತುಪಡಿಸಿದೆ.
ಉಚಿತ ಗ್ರಾಮೀಣ ಆರೋಗ್ಯ ಸೇವೆಗೆ ಹೊಸ ದಿಕ್ಕು: ಆರೋಗ್ಯ ಸೇವೆ ತಲುಪದ ಜನರಿಗೆ ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಸಂಸ್ಥೆ ಆರೋಗ್ಯ ಕ್ಷೇತ್ರದಲ್ಲಿಮಾದರಿಯಾಗಿದೆ. ಎನ್ ಎಬಿಹೆಚ್ ಮಾನ್ಯತೆಯೊಂದಿಗೆ ಸುರಕ್ಷಿತ, ಕ್ರಮಬದ್ಧ ಹಾಗೂ ಪಾರದರ್ಶಕ ಸೇವೆಗಳನ್ನು ಒದಗಿಸುವ ಸಂಸ್ಥೆಗಳ ಪಟ್ಟಿಯಲ್ಲಿಇದು ಸ್ಥಾನ ಪಡೆದಿದೆ.
ಸಾಮಾನ್ಯವಾಗಿ ಗ್ರಾಮೀಣ ಆಸ್ಪತ್ರೆಗಳಲ್ಲಿಗುಣಮಟ್ಟದ ಚಿಕಿತ್ಸೆ ಕನಸಿನ ಮಾತು. ಆದರೆ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ಸಂಸ್ಥೆ ಇದಕ್ಕೆ ಅಪವಾದವಾಗಿದ್ದು, ಉಚಿತ ಚಿಕಿತ್ಸೆ, ಉತ್ತಮ ಆರೈಕೆ ಹಾಗೂ ಗುಣಮಟ್ಟದ ಚಿಕಿತ್ಸೆ ಗಳನ್ನು ಏಕಕಾಲಕ್ಕೆ ನೀಡಬಹುದು ಎಂಬುದನ್ನು ಸಾಬೀತುಪಡಿಸಿದೆ.
ಮಾನ್ಯತೆ ಪಡೆಯಲು ಕಾರಣವಾದ ಅಂಶಗಳು: ರೋಗಿಯ ಸುರಕ್ಷತೆಗೆ ಆದ್ಯತೆ, ಪರಿಣಾಮಕಾರಿ ಸೋಂಕು ನಿಯಂತ್ರಣ, ಪ್ರಮಾಣಿತ ವೈದ್ಯಕೀಯ ಹಾಗೂ ಆಡಳಿತಾತ್ಮಕ ಕ್ರಮಗಳು, ನೈತಿಕ ಮತ್ತು ಪಾರದರ್ಶಕ ಚಿಕಿತ್ಸಾ ವಿಧಾನಗಳು ಹಾಗೂ ಸಮಗ್ರ ದಾಖಲೆ ನಿರ್ವಹಣೆ ಇವುಗಳ ಸಮರ್ಪಕ ಅನುಷ್ಠಾನದಿಂದ ಈ ಮಾನ್ಯತೆ ಲಭಿಸಿದೆ. ಈ ವ್ಯವಸ್ಥೆಗಳು ಪ್ರತಿಯೊಬ್ಬ ರೋಗಿಗೂ ಸುರಕ್ಷಿತ ಹಾಗೂ ಜವಾಬ್ದಾರಿಯುತ ಚಿಕಿತ್ಸೆ ದೊರಕುವುದನ್ನು ಖಚಿತಪಡಿಸುತ್ತವೆ. ಈ ಮಾನ್ಯತೆಯಿಂದ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಹಾಗೂ ವಿಶ್ವಾಸಾರ್ಹ ಆರೋಗ್ಯ ಸೇವೆ ಲಭ್ಯವಾಗಲಿದೆ.
‘ಒನ್ ವರ್ಲ್ಡ್, ಒನ್ ಫ್ಯಾಮಿಲಿ’ ಧ್ಯೇಯೋದ್ದೇಶಕ್ಕೆ ಬಲ: ಆರ್ಥಿಕ ಸ್ಥಿತಿ ಯಾವುದಾದರೂ ಇರಲಿ, ಎಲ್ಲರಿಗೂ ಸಮಾನ ಆರೋಗ್ಯ ಸೇವೆ ನೀಡಬೇಕು ಎಂಬ ಮಾನವೀಯ ಮೌಲ್ಯವನ್ನು ಈ ಸಾಧನೆ ಪ್ರತಿಬಿಂಬಿಸುತ್ತದೆ. ಉಚಿತ ಸೇವೆಗಳೊಂದಿಗೆ ರಾಷ್ಟ್ರೀಯ ಗುಣಮಟ್ಟ ಕಾಪಾಡಿಕೊಂಡು ಬಂದಿರುವ ಈ ಸಂಸ್ಥೆ ಆರೋಗ್ಯ ಕ್ಷೇತ್ರಕ್ಕೆ ಮಾದರಿಯಾಗಿದೆ.
30 ಸಿಬಿಪಿಪೋಟೋ 2 ಮತ್ತು 3
ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವಿಹಂಗಮ ನೋಟ.

