ಶ್ರೀಶೈಲ ಜಗದ್ಗುರು ಅಭಿಮತ | ಅಥೆನ್ಸ್ ನಲ್ಲಿಧಾರ್ಮಿಕ ಪುನರುತ್ಥಾನ ಶೃಂಗಸಭೆ
ವಿಕ ಸುದ್ದಿಲೋಕ ಚಿಕ್ಕೋಡಿ (ಬೆಳಗಾವಿ)
ಹಿಂದೂಯೇತರರು ಹಿಂದೂ ಧರ್ಮ ಪ್ರವೇಶಿಸಬೇಕಾದರೆ ವೀರಶೈವ ಸಿದ್ಧಾಂತ ಅದಕ್ಕೆ ಪ್ರಮುಖ ಪ್ರವೇಶದ್ವಾರ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಗ್ರೀಸ್ ದೇಶದ ರಾಜಧಾನಿ ಅಥೆನ್ಸ್ ನಗರದಲ್ಲಿನಡೆದ ಧಾರ್ಮಿಕ ಪುನರುತ್ಥಾನ ಶೃಂಗ ಸಭೆಯಲ್ಲಿ‘ಶೈವ ಒಂದು ಜಾಗತಿಕ ಪ್ರಜ್ಞೆ’ ವಿಷಯ ಕುರಿತು ಅವರು ಮಾತನಾಡಿದರು.
‘‘ಹಿಂದೂ ಧರ್ಮ ಹಲವಾರು ಸಿದ್ಧಾಂತ, ಸಂಪ್ರದಾಯಗಳ ಸಮೂಹ ಸಂಸ್ಕೃತಿ. ಬಹುತೇಕ ಜನ್ಮದಿಂದಲೇ ಆಯಾ ಸಂಪ್ರದಾಯ ಪ್ರವೇಶಿಸಲು ಅವಕಾಶವಿದೆ. ಆದರೆ ವೀರಶೈವ ಸಿದ್ಧಾಂತವು ಲಿಂಗದೀಕ್ಷೆ ಮೊದಲಾದ ಧರ್ಮ ಸಂಸ್ಕಾರಗಳನ್ನು ನೀಡುವಾಗ ವರ್ಣ, ಬಡವ, ಶ್ರೀಮಂತ, ಕರಿಯ, ಬಿಳಿಯ ಮತ್ತಿತರ ಯಾವುದೇ ಭೇದ ನೋಡದೆ ಸದ್ಗುಣ ಮತ್ತು ಸತ್ಕರ್ಮಗಳ ಆಧಾರದ ಮೇಲೆ ಎಲ್ಲರಿಗೂ ಅಧಿಕಾರ ನೀಡಿ, ಧಾರ್ಮಿಕವಾಗಿ ಸರ್ವರಿಗೂ ಸಾಮಾಜಿಕ ನ್ಯಾಯ ಒದಗಿಸಿದೆ,’’ ಎಂದರು.
ಹರಿಹರಪುರದ ಶ್ರೀ ಜಗದ್ಗುರು ಶಂಕರಾಚಾರ್ಯ ಸ್ವಯಂ ಪ್ರಕಾಶ ಸಚ್ಚಿದಾನಂದ ಸ್ವಾಮೀಜಿ, ಬೆಂಗಳೂರು ಕೈಲಾಸಾಶ್ರಮದ ಮಹಾಮಂಡಲೇಶ್ವರ ಶ್ರೀ ಜಯೇಂದ್ರಪುರಿ ಸ್ವಾಮೀಜಿ, ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ದಿಲ್ಲಿಅಕ್ಷರ ಧಾಮದ ಶ್ರೀ ಮಹಾಮಹೋಪಾಧ್ಯಾಯ ಭದ್ರೇಶದಾಸ ಸ್ವಾಮೀಜಿ, ಆಚಾರ್ಯ ಡಾ. ಲೋಕೇಶ ಮುನಿಜಿ, ಪ್ರಯಾಗರಾಜ್ ನಿರ್ಮಲ ಅಖಾಡಾದ ಶ್ರೀ ಜ್ಞಾನಸಿಂಗ್ ಮಹಾರಾಜರು, ಅಮೃತಸರದ ಸಹಜದೀಪ್ ಸಿಂಗ್ ಮಹಾರಾಜರು, ಬೌದ್ಧ ಸಂಪ್ರದಾಯದ ಖೇಮಚಾರ ಭಿಕ್ಕುಜಿ ನಾನಾ ವಿಷಯಗಳ ಮೇಲೆ ವಿಚಾರ ಮಂಡಿಸಿದರು.
ತಿರುಚ್ಚಿ ಶ್ರೀಗಳು ಸೇರಿದಂತೆ ಭಾರತದ 10 ಕ್ಕೂ ಹೆಚ್ಚಿನ ನಾನಾ ಸಂಪ್ರದಾಯಗಳ ಮಠಾಧೀಶರು ಪಾಲ್ಗೊಂಡಿದ್ದರು. ‘ದೇವಿ ಮಹಾತ್ಮೆ’ ಚಿತ್ರ ನಿರ್ಮಾಪಕ, ನಿರ್ದೇಶಕ, ತಂಡದ ಮುಖ್ಯಸ್ಥ ಮನು ಕುಮಾರ, ಶಶಾಂಕ ಆಚಾರ್ಯ, ಅಭಿಷೇಕ ರುದ್ರಮೂರ್ತಿ, ಆಕಾಶ ವಿಶ್ವಾಮಿತ್ರ, ಮತ್ತಿತರರಿದ್ದರು.
* ಬಾಕ್ಸ್
ಚಿತ್ರ ನಿರ್ಮಾಣಕ್ಕೆ 120 ಕೋಟಿ ನೆರವು
‘‘ತತ್ವಜ್ಞಾನದ ತವರು ಎನಿಸಿಕೊಂಡಿರುವ ಗ್ರೀಸ್ ನೆಲದಲ್ಲಿ, ವಿಶ್ವಗುರುವಾಗಿರುವ ಭಾರತೀಯ ತತ್ವಜ್ಞಾನದ ಕುರಿತು ಚಿಂತನ- ಮಂಥನ ನಡೆಸುತ್ತಿರುವುದು ಒಂದು ಅಪರೂಪದ ಸಂದರ್ಭ. ಭೌಗೋಳಿಕವಾಗಿ ಗ್ರೀಕ್ ಮತ್ತು ಭಾರತ ಬಹಳ ದೂರದ ದೇಶಗಳಾದರೂ, ತತ್ವಜ್ಞಾನದ ದೃಷ್ಟಿಯಿಂದ ಬಹಳಷ್ಟು ಹತ್ತಿರದಲ್ಲಿವೆ. ಆಧ್ಯಾತ್ಮದಲ್ಲಿಶಿವನಷ್ಟೇ ಶಕ್ತಿಗೂ ಪ್ರಾಧಾನ್ಯತೆ ಇದೆ. ಇಂಥ ಆದಿಶಕ್ತಿಯ ಮಹಿಮೆ ವಿಶ್ವದಾದ್ಯಂತ ಸಾರಲು ಗ್ರೀಸ್ ಸರಕಾರ ಚಿತ್ರ ನಿರ್ಮಾಣಕ್ಕೆ 120 ಕೋಟಿ ರೂ. ನೀಡಲು ಮುಂದಾಗಿದೆ,’’ ಎಂದು ಶ್ರೀಶೈಲ ಜಗದ್ಗುರುಗಳು ತಿಳಿಸಿದರು.
ಫೋಟೊ- - 30ಸಿಕೆಡಿ01
ಗ್ರೀಸ್ ರಾಜಧಾನಿ ಅಥೆನ್ಸ್ ನಲ್ಲಿನಡೆದ ಧಾರ್ಮಿಕ ಪುನರುತ್ಥಾನ ಜಾಗತಿಕ ಶೃಂಗ ಸಮ್ಮೇಳನದಲ್ಲಿಶ್ರೀಶೈಲ ಜಗದ್ಗುರುಗಳು ಸೇರಿದಂತೆ ನಾನಾ ಧಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು.

