ಬಹುಮುಖಿಯಿಂದ ಯುದ್ಧದ ಒಳ ಹೊರಗು ಚರ್ಚೆ
ಯುದ್ಧ ಗೆಲ್ಲುತ್ತೇವೆ ಎನ್ನುವುದೆ ಭ್ರಮೆ!
ವಿಕ ಸುದ್ದಿಲೋಕ ಶಿವಮೊಗ್ಗ
ಯುದ್ಧ ಗೆಲ್ಲುತ್ತೇವೆ ಎನ್ನುವುದೆ ಭ್ರಮೆ, ಯುದ್ಧದಿಂದ ಯಾರಿಗೂ ಲಾಭವಿಲ್ಲ, ಯುದ್ಧ ವಿನಾಶಕಾರಿ; ಗೆದ್ದವರು ಮತ್ತು ಸೋತವರಿಗೆ ಅಂತ್ಯದಲ್ಲಿಸಿಗುವುದು ದುಃಖ, ನೋವು, ವಿಷಾದ ಮತ್ತು ಒಂದಿಷ್ಟು ಬರಡು ಭೂಮಿಯೇ ಹೊರತು ಮತ್ತೇನು ಅಲ್ಲ. ಸ್ವಾರ್ಥರಹಿತ ಪ್ರೀತಿ, ಸ್ನೇಹ, ಸಹನೆ ನಮ್ಮ ಆದ್ಯತೆಯಾದಾಗ ಯುದ್ಧ ನಮ್ಮ ಹತ್ತಿರವೂ ಸುಳಿಯುವುದಿಲ್ಲ.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಮಹಾವಿದ್ಯಾಲಯದ ಫ್ರೆಂಡ್ಸ್ ಸೆಂಟರ್ ಸಭಾಂಗಣದಲ್ಲಿಮಂಗಳವಾರ ಬಹುಮುಖಿ ಸಂಘಟನೆಯು ಏರ್ಪಡಿಸಿದ್ದ ‘‘ಯುದ್ಧದ ಒಳ ಹೊರಗು’’ ಕುರಿತ ಚರ್ಚೆಯಲ್ಲಿಕೇಳಿಬಂದ ನುಡಿಗಳು.
ಚರ್ಚೆಯಲ್ಲಿಪಾಲ್ಗೊಂಡವರು ಎಲ್ಲೋ ನಡೆಯುತ್ತಿರುವ ಯುದ್ಧಗಳು ಕೇವಲ ದೇಶಗಳ ಆಡಳಿತದ ನಡುವೆ ಅಲ್ಲದೆ ಜನಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟಗಳನ್ನು ತೆರೆದಿಟ್ಟರು. ಮಹಾಭಾರತ ಕಾಲದಿಂದಲೂ ನಡೆದ ಯುದ್ಧಗಳ ಪರಿಣಾಮಗಳು ಶೋಕವನ್ನೇ ಹೇಳುತ್ತಿದ್ದರೂ ಈಗಲೂ ಯುದ್ಧಕ್ಕೆ ಹಪಹಪಿಸುತ್ತಿರುವ ಸರ್ವಾಧಿಕಾರಿ ಮನೋಭಾವ ಕುರಿತು ಬೇಸರ ವ್ಯಕ್ತವಾಯಿತು.
ಚರ್ಚೆ ಆರಂಭಿಸಿದ ಕುವೆಂಪು ವಿವಿ ವಿಶ್ರಾಂತ ಪ್ರಾಧ್ಯಾಪಕ ಮತ್ತು ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ, ಜಗತ್ತಿನ ಬಹುತೇಕ ಭಾಷೆಗಳ ಶ್ರೇಷ್ಠ ಕಾವ್ಯಗಳು ಯುದ್ಧ ವಿರೋಧಿಗಳೇ ಆಗಿವೆ. ಮಹಾಭಾರತ ಕುರುಕ್ಷೇತ್ರ ಅಥವಾ ಯುದ್ಧವೆಂದು ಹೇಳಿದರೂ ಅದು ಕಡೆಯಲ್ಲಿಯುದ್ಧ ವಿರೋಧಿ, ವಿನಾಶಕಾರಿ ಎಂಬುದನ್ನು ನಿರೂಪಿಸುತ್ತದೆ. ಕುರುಕ್ಷೇತ್ರ ಯುದ್ಧದ ನಂತರ ಕುಂತಿ, ಗಾಂಧಾರಿ, ಪಾಂಚಾಲಿ ಸಮಾನ ದುಃಖಿಗಳಾಗಿರುತ್ತಾರೆ. ಯುದ್ಧದ ಅಂತ್ಯದಲ್ಲಿನಮಗೆ ಸಿಗುವುದು ಶವಗಳು, ವಿನಾಶದ ಕುರುಹುಗಳು ಮತ್ತು ಎಲ್ಲವನು ಕಳೆದುಕೊಂಡ ದುಃಖಿಗಳೆ ಹೊರತು ಮತ್ಯಾವ ಲಾಭವೂ ಇಲ್ಲಎಂದು ಪ್ರತಿಪಾದಿಸಿದರು.
ಕವಯತ್ರಿ ಸವಿತಾ ನಾಗಭೂಷಣ ಮಾತನಾಡಿ, ಲಾಗಾಯ್ತಿನಿಂದಲೂ ಯುದ್ಧಕ್ಕೆ ಅಂತ್ಯವೇ ಇಲ್ಲವೇನೋ ಎನಿಸುತ್ತದೆ. ಯುದ್ಧದ ಭೀಕರತೆ, ಸಾವು, ನೋವುಗಳನ್ನು ನೋಡಿದಾಗ, ಯುದ್ಧದ ಪರಿಣಾಮ ಗೊತ್ತಿದ್ದೆ ಬ್ರಿಟಿಷರ ವಿರುದ್ಧ ಮಹಾತ್ಮ ಗಾಂಧೀಜಿ ಶಾಂತಿ ಹೋರಾಟಕ್ಕೆ ನಮ್ಮನ್ನು ಅಣಿಗೊಳಿಸಿದರು. ಸೂರ್ಯ ಮುಳುಗದ ಸಾಮ್ರಾಜ್ಯದ ವಿರುದ್ಧ ಶಾಂತಿ ಯುದ್ಧ ಸಾರಿ ಕೋಟ್ಯಂತರ ಭಾರತೀಯರನ್ನು ಬದುಕಿಸಿದರು. ಆದರೆ, ಈಗಿನ ಯುದ್ಧ ನಮ್ಮದಲ್ಲದಿದ್ದರೂ ಅದರ ಪರಿಣಾಮಗಳನ್ನು ಪ್ರತಿದಿನವೂ ಎದುರಿಸುತ್ತಿದ್ದೇವೆ ಎಂದರು.
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ವಿದ್ಯಾರ್ಥಿನಿ ವೈ.ಎಚ್ .ಸ್ಪೂರ್ತಿ ಮಾತನಾಡಿ, ನಾವು ನೋಡಿದ ಸಿನಿಮಾಗಳು, ಓದಿದ ಪಠ್ಯಗಳ ಪರಿಣಾಮವಾಗಿ ಯುವಜನರಲ್ಲಿಯುದ್ಧವನ್ನು ಖುಷಿಯಿಂದ ನೋಡುವ ಮನಸ್ಥಿತಿ ಬಂದಿದೆ. ಪುರುಷ ಸಮಾಜದ ಸರ್ವಾಧಿಕಾರಿ ಯುದ್ಧ ಮನೋಭಾವಕ್ಕೆ ಹೆಂಗಸರ ಅನುಮತಿ ಇಲ್ಲ. ಯುದ್ಧ ಮಾಡುವವರು ಪುರುಷರೇ ಆದರೂ ಅದರ ದುಷ್ಪರಿಣಾಮವನ್ನು ಎದುರಿಸುವವರು ಅಜ್ಜಿ, ತಾಯಿ, ಅಕ್ಕ, ತಂಗಿ, ಮಗಳ ರೂಪದಲ್ಲಿಮಹಿಳೆಯರೇ ಆಗಿರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈಗಿನ ಯುದ್ಧದ ಹಿಂದಿನ ಸ್ವಾರ್ಥ ಮತ್ತು ಸರ್ವಾಧಿಕಾರಿ ಮನೋಭಾವದ ಕುರಿತು ವಿಡಿಯೊ ಚಿತ್ರಣಗಳ ವಿಶ್ಲೇಷಿಸಿದ ಸಾಮಾಜಿಕ ಕಾರ್ಯಕರ್ತ ಮುಸ್ತಫ ಬೇಗ್ , ಇವತ್ತಿನ ಯುದ್ಧ ಕೇವಲ ಜನಸಾಮಾನ್ಯರನ್ನು ಗುರಿ ಮಾಡಿಕೊಂಡು ದಾಳಿ ಮಾಡಲಾಗುತ್ತಿದೆ. ಅಮಾಯಕರನ್ನು ಹತ್ಯೆಗೈಯಲಾಗುತ್ತಿದೆ ಎಂದರು.
ವಿಷಯ ಪ್ರಸ್ತುತ ಪಡಿಸಿದ ಬಳಿಕ ಸಾರ್ವಜನಿಕರು ಸಹ ಚರ್ಚೆಯಲ್ಲಿಪಾಲ್ಗೊಂಡಿದ್ದರು.
-----------------
ಫೋಟೊ ಶೀರ್ಷಿಕೆ; 07ಎಸ್ ಎಂಜಿ19
ಶಿವಮೊಗ್ಗ ಎಟಿಎನ್ ಸಿ ಕಾಲೇಜು ಫ್ರೆಂಡ್ಸ್ ಸೆಂಟರ್ ಸಭಾಂಗಣದಲ್ಲಿಮಂಗಳವಾರ ಬಹುಮುಖಿ ಸಂಘಟನೆ ಏರ್ಪಡಿಸಿದ್ದ ‘‘ಯುದ್ಧದ ಒಳ ಹೊರಗು’’ ಕುರಿತ ಚರ್ಚೆಯಲ್ಲಿವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ ಮಾತನಾಡಿದರು.

