ಕರ್ನಾಟಕದ ಕಿರೀಟ ಎಂದೇ ಖ್ಯಾತಿ ಪಡೆದ ಗಡಿ ಜಿಲ್ಲೆಬೀದರ್ ನಲ್ಲಿಪಾದಚಾರಿಗಳ ಹಕ್ಕು ಮತ್ತು ಸುರಕ್ಷತೆ ಇಂದು ಕೇವಲ ಕಾಗದದ ಮೇಲಷ್ಟೇ ಉಳಿದಂತಿದೆ. ಐತಿಹಾಸಿಕ ನಗರಿ ಎಂಬ ಹೆಗ್ಗಳಿಕೆಯಿದ್ದರೂ ಇಲ್ಲಿಯ ಪಾದಚಾರಿ ರಸ್ತೆಗಳ ಸ್ಥಿತಿ ಮಾತ್ರ ನಿಜಕ್ಕೂ ಅಯೋಮಯ. ಲಕ್ಷಾಂತರ ರೂ.ಅನುದಾನದಲ್ಲಿಫುಟ್ ಪಾತ್ ಗಳನ್ನು ಸುಂದರವಾಗಿ ಅಭಿವೃದ್ಧಿಗೊಳಿಸಿದ್ದು, ವಿಚಿತ್ರ ಅಂದರೆ ಅವು ವ್ಯಾಪಾರ ಕೇಂದ್ರವಾಗಿ ಮಾರ್ಪಟ್ಟಿವೆ. ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಸಾರ್ವಜನಿಕರಲ್ಲಿಜಾಗೃತಿ ಮೂಡಿಸುವ ಮತ್ತು ಸರಕಾರ, ಆಡಳಿತದ ಕಣ್ತೆರೆಸುವ ವಿಕ ವಿಶೇಷ ಸರಣಿ ಇಂದಿನಿಂದ.
* ಇದ್ದು ಇಲ್ಲದಂತಾದ ಪಾದಚಾರಿ ರಸ್ತೆಗಳು | ಎಲ್ಲೆಡೆ ಫುಟ್ ಪಾತ್ ಅತಿಕ್ರಮಣ | ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷತ್ರ್ಯ
ಧರಿನಾಡಲ್ಲಿಫುಟ್ ಪಾತ್ ನಾಪತ್ತೆ !
ವಿಜಯಕುಮಾರ ಬೆಲ್ದೆ ಬೀದರ್
ಜಿಲ್ಲಾಮತ್ತು ತಾಲೂಕು ಕೇಂದ್ರಗಳಲ್ಲಿಬಹುತೇಕ ಫುಟ್ ಪಾತ್ ರಸ್ತೆಗಳು ಅತಿಕ್ರಮಣಗೊಂಡಿವೆ. ಬಹುತೇಕ ಕಡೆ ಮುಖ್ಯರಸ್ತೆಗಳಿಗೆ ಪಾದಚಾರಿ ಮಾರ್ಗವೇ ಇಲ್ಲ. ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಪಂ ವ್ಯಾಪ್ತಿಗೆ ಒಳಪಡುವ ಅನೇಕ ರಸ್ತೆಗಳಿದ್ದು, ಅವುಗಳಿಗೆ ಫುಟ್ ಪಾತ್ ತುರ್ತಾಗಿ ಕಲ್ಪಿಸುವ ಜರೂರಿ ಇದೆ.
ನಗರದ ಸುಂದರೀಕರಣಕ್ಕೆ ಒತ್ತು ನೀಡಿ ಸ್ಮಾರ್ಟ್ ಸಿಟಿಗಾಗಿಯೇ ವಿಶೇಷವಾಗಿ ರೂಪುಗೊಂಡಿರುವ ಫುಟ್ ಪಾತ್ ನಲ್ಲಿವ್ಯಾಪಾರ ನಡೆಸುತ್ತಿರುವುದು ನಗರದ ಸೌಂದರ್ಯಕ್ಕೂ ಧಕ್ಕೆಯಾಗುತ್ತಿದೆ. ಫುಟ್ ಪಾತ್ ವ್ಯಾಪಾರದಿಂದಾಗಿ ಸುಗಮ ಸಂಚಾರ, ಪಾರ್ಕಿಂಗ್ ಸಮಸ್ಯೆ, ರಸ್ತೆಯ ಅಲ್ಲಲ್ಲಿತ್ಯಾಜ್ಯಗಳು ಕಂಡು ಬರುತ್ತಿದ್ದು, ಸ್ವಚ್ಛ ಬೀದರ್ ಕಲ್ಪನೆ ಕಣ್ಮರೆಯಾಗುತ್ತಿದೆ.
ಬೀದರ್ ನ ಪ್ರಮುಖ ರಸ್ತೆಗಳಲ್ಲಿಸಂಚರಿಸುವ ಪಾದಚಾರಿಗಳು ಪ್ರತಿದಿನ ಸಾವಿನೊಂದಿಗೆ ಸೆಣಸಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ನಗರದ ರಸ್ತೆಗಳು ವಿಸ್ತರಣೆಯಾಗುತ್ತಿದ್ದರೂ ಪಾದಚಾರಿಗಳಿಗೆ ಮೀಸಲಾದ ಜಾಗ ಮಾತ್ರ ಮಾಯವಾಗುತ್ತಿದೆ. ಬಹುತೇಕ ಕಡೆ ಪಾದಚಾರಿ ಮಾರ್ಗ ಇದ್ದರೂ ಓಡಾಡಲು ಸೂಕ್ತವಿಲ್ಲ. ಒತ್ತುವರಿ ಜಾಗ ತೆರವುಗೊಳಿಸದೇ ಇರುವ ಕಾರಣ ಪಾದಚಾರಿಗಳು ಅನಿವಾರ್ಯವಾಗಿ ರಸ್ತೆ ಮೇಲೆ ಸಂಚರಿಸುವ ದುಸ್ಥಿತಿ ನಿರ್ಮಾಣವಾಗಿದೆ. ನಗರ, ಪಟ್ಟಣಗಳಲ್ಲಿಪಾದಚಾರಿ ಮಾರ್ಗವನ್ನು ಸುಸ್ಥಿತಿಯಲ್ಲಿಡುವುದು ಸರಕಾರ, ಸ್ಥಳೀಯ ಸಂಸ್ಥೆಗಳು ಸೇರಿ ಜಿಲ್ಲಾಡಳಿತದ ಮೊದಲ ಆದ್ಯತೆಯಾಗಬೇಕಿತ್ತು. ಆದರೆ ಇವರೆಲ್ಲರಿಗೂ ಫುಟ್ ಪಾತ್ ಕೊನೆಯ ಆದ್ಯತೆಯಾಗಿರುವುದು ದುರಾದೃಷ್ಟಕರ ಸಂಗತಿ. ರಾಜ್ಯ ಹೈಕೋರ್ಟ್ ಆದೇಶವಿದ್ದರೂ ಯಾವುದೇ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂಇದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
*ಬಾಕ್ಸ್
ವ್ಯಾಪಾರಿಗಳ ಪಾಲಾದ ಫುಟ್ ಪಾತ್
ಜಿಲ್ಲೆಯಲ್ಲಿನಿರ್ಮಾಣವಾದ ಬಹುತೇಕ ಫುಟ್ ಪಾತ್ ಗಳು ವ್ಯಾಪಾರಿಗಳ ಪಾಲಾಗಿವೆ. ಎಲ್ಲೆಡೆ ನಾನಾ ಅಂಗಡಿಗಳ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದು, ಫುಟ್ ಪಾತ್ ಗಳ ಮೇಲೆಯೇ ವ್ಯಾಪಾರ ನಡೆಯುತ್ತಿದ್ದು, ಸುಂದರವಾಗಿ ನಿರ್ಮಾಣಗೊಂಡಿರುವ ಫುಟ್ ಪಾತ್ ಗಳು ಮಾರುಕಟ್ಟೆಯಾಗಿ ಬದಲಾಗಿದೆ. ನಗರದ ಗಾಂಧಿಗಂಜ್ , ಚಿದ್ರಿ, ಗುಂಪಾ, ನೌಬಾದ್ ರಸ್ತೆ, ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ, ಒಲ್ಡ್ ಸಿಟಿ ಪ್ರದೇಶದ ಸುತ್ತಲಿನ ಪಾದಚಾರಿ ರಸ್ತೆಗಳು ಸಂಪೂರ್ಣವಾಗಿ ವ್ಯಾಪಾರಿಗಳ ಪಾಲಾಗಿವೆ. ಇದರಿಂದಾಗಿ ಜನರು ಜೀವ ಕೈಯಲ್ಲಿಹಿಡಿದು ಮುಖ್ಯರಸ್ತೆಯಲ್ಲೇ ನಡೆಯಬೇಕಾದ ಅನಿವಾರ್ಯತೆ ಇದೆ.
*ಬಾಕ್ಸ್
ಪಾರ್ಕಿಂಗ್ ಪ್ರಾಬ್ಲಮ್ !
ನಗರದಲ್ಲಿಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು ಪಾದಚಾರಿಗಳಿಗೆ ಶಾಪವಾಗಿ ಪರಿಣಮಿಸಿದೆ. ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ಪಾದಚಾರಿ ಮಾರ್ಗಗಳಲ್ಲೇ ನಿಲ್ಲಿಸಲಾಗುತ್ತಿದೆ. ವಿಶೇಷವಾಗಿ ಬ್ಯಾಂಕ್ ಗಳು ಮತ್ತು ವಾಣಿಜ್ಯ ಸಂಕೀರ್ಣಗಳ ಮುಂದೆ ಈ ಸಮಸ್ಯೆ ಜಾಸ್ತಿಯಾಗಿದೆ. ಇದ್ದ ಅಲ್ಪಸ್ವಲ್ಪ ಪಾದಚಾರಿ ರಸ್ತೆಗಳು ಸರಿಯಾದ ಸ್ಥಿತಿಯಲ್ಲಿಲ್ಲ. ಅನೇಕ ಕಡೆ ಫುಟ್ ಪಾತ್ ಗಳ ಮೇಲಿನ ಚಪ್ಪಡಿಗಳು ಮುರಿದು ಬಿದ್ದಿದ್ದು, ಚರಂಡಿಗಳು ತೆರೆದುಕೊಂಡಿವೆ. ರಾತ್ರಿ ವೇಳೆಯಂತೂ ಇಲ್ಲಿನಡೆಯುವುದು ಅಪಾಯಕಾರಿಯಾಗಿದೆ. ಪಾದಚಾರಿ ರಸ್ತೆಯ ಮಧ್ಯದಲ್ಲೇ ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್ ಫಾರ್ಮರ್ ಗಳಿರುವುದು ಸಂಚಾರಕ್ಕೆ ಅಡ್ಡಿಯುಂಟು
ಮಾಡುತ್ತಿದೆ.
*ಬಾಕ್ಸ್
ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಲಿ
ಸ್ಥಳೀಯ ಸಂಸ್ಥೆಗಳು ಎಚ್ಚೆತುಕೊಂಡು ಜಿಲ್ಲೆಯಲ್ಲಿಒತ್ತುವರಿಯಾದ ಫುಟ್ ಪಾತ್ ಗಳ ತೆರವು ಕಾರ್ಯಾಚರಣೆಗೆ ಮುಂದಾಗಬೇಕು. ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿಕೊಂಡವರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ವಲಯ (ವೆಂಡಿಂಗ್ ಝೋನ್ ) ನಿರ್ಮಿಸಿಕೊಡಬೇಕು. ಮುರಿದು ಹೋದ ಪಾದಚಾರಿ ರಸ್ತೆಗಳನ್ನು ತಕ್ಷಣ ದುರಸ್ತಿಗೊಳಿಸಬೇಕು. ನಾವು ತೆರಿಗೆ ಕಟ್ಟುತ್ತೇವೆ. ಆದರೆ ನಮಗೆ ಸುರಕ್ಷಿತವಾಗಿ ನಡೆಯಲು ಒಂದು ದಾರಿ ಇಲ್ಲ. ರಸ್ತೆಗಳು ವಾಹನಗಳಿಗಷ್ಟೇ ಸೀಮಿತವೇ? ಎಂಬ ಪ್ರಶ್ನೆ ಜನರದ್ದಾಗಿದೆ.
*ಕೋಟ್
ಚಿತ್ರ:ಮುಕುಲ್
ಸದ್ಯ ಮಹಾನಗರ ಪಾಲಿಕೆಯ ಸಿಬ್ಬಂದಿ ಎಸ್ ಐಆರ್ ಕೆಲಸದಲ್ಲಿನಿರತರಾಗಿದ್ದಾರೆ. ಇದನ್ನು ಮುಗಿದ ನಂತರ ನಗರದೆಲ್ಲೆಡೆ ಒತ್ತುವರಿಯಾದ ಫುಟ್ ಪಾತ್ ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಗುವುದು.
-ಮುಕುಲ್ ಜೈನ್ ಆಯುಕ್ತರು ಮಹಾನಗರ ಪಾಲಿಕೆ ಬೀದರ್
========
ಚಿತ್ರ:ಬಿಜಿ ಶಟಕಾರ
ಸರಕಾರದ ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕು. ಜನರಿಗೆ ನಡೆದಾಡಲು ನಿರ್ಮಿಸಲಾದ ಫುಟ್ ಪಾತ್ ಗಳು ವ್ಯಾಪಾರ ಕೇಂದ್ರಗಳಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತುಕೊಂಡು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಪಾದಚಾರಿಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
-ಬಿ.ಜಿ.ಶಟಕಾರ ಅಧ್ಯಕ್ಷರು ಬೀದರ್ ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಸ್ಥೆ
=========
ಚಿತ್ರ:ಅಶೋಕ
ಫುಟ್ ಪಾತ್ ನಲ್ಲಿವ್ಯಾಪಾರದಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಆದರೆ ಬೀದಿ ವ್ಯಾಪಾರಿಗಳು ಅದನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಹಾಗಾಗಿ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಅಲ್ಲಿಂದ ವ್ಯಾಪಾರಿಗಳನ್ನು ತೆರವುಗೊಳಿಸಬೇಕು.