ಮತದಾರರ ಪಟ್ಟಿಯಲ್ಲಿಹೆಸರು ಇರದಿದ್ದರೆ ದಾಖಲೆ ಎಂದು ನೀಡಲು ಜಾತಿ ಪ್ರಮಾಣ ಪತ್ರ ನೆರವಾಗಲಿದ್ದು, ಈ ಕಾಸ್ಟ್ ಸರ್ಟಿಫಿಕೇಟ್ ಹಂಚಿಕೆ ಪ್ರಕ್ರಿಯ ಹೇಗೆ ನಡೆದಿದೆ? ಈ ಕುರಿತು ಮಾಹಿತಿ ನೀಡುವ ಸರಣಿ ಇಂದಿನಿಂದ.ಲೋಗೊ
ಜಾತಿ ಸರ್ಟಿಫಿಕೇಟ್ ಏನು? ಎತ್ತ?
ಭಾಗ -1
ಎಸ್ ಐಆರ್ ಗಾಗಿ ಮನೆ ಮನೆಗೆ ಜಾತಿ ಪ್ರಮಾಣ ಪತ್ರ ವಿತರಣೆ
ಜಿಲ್ಲೆಯಲ್ಲಿಶೇ.68 ಪ್ರಗತಿ
-ಕರಡು ಪಟ್ಟಿಯಲ್ಲಿಹೆಸರು ಬಿಟ್ಟಿದ್ದರೆ ಜಾತಿ ಪ್ರಮಾಣ ಪತ್ರ ಸಹಕಾರಿ
-ಸವಾಲಾದ ಜಾತಿ ಸರ್ಟಿಫಿಕೇಟ್ ವಿತರಣೆ
ಕಾಶಪ್ಪ ಕರದಿನ ಹುಬ್ಬಳ್ಳಿ
ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿಹಮ್ಮಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್ ) ಪ್ರಕ್ರಿಯೆ ಬಹುತೇಕ ಪೂರ್ಣ ಹಂತಕ್ಕೆ ಬಂದು ತಲುಪಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಸಮುದಾಯದ ಜಾತಿ ಪ್ರಮಾಣ ಪತ್ರಗಳನ್ನು ಮನೆ ಮನೆಗೆ ವಿತರಿಸುವ ಕಾರ್ಯದಲ್ಲಿಜಿಲ್ಲಾಡಳಿತ ಶೇ.68ರಷ್ಟು ಪ್ರಗತಿ ಸಾಧಿಸಿದೆ.
ಎಸ್ ಐಆರ್ ಪ್ರಕ್ರಿಯೆಯಲ್ಲಿಕರಡು ಪಟ್ಟಿಯಿಂದ ಬಿಟ್ಟು ಹೋದರೆ ಏನು ಮಾಡುವುದು? ದಾಖಲೆಗಳನ್ನು ಹೊಂದಿಸಿಕೊಳ್ಳುವುದು ಹೇಗೆ? ಎಲ್ಲಿಂದ ತರುವುದು? ಎಂಬ ತೊಳಲಾಟದಲ್ಲಿದ್ದ ಅರ್ಹ ಮತದಾರರಿಗೆ, ರಾಜ್ಯ ಸರಕಾರವೇ ಪೂರಕ ದಾಖಲೆ ಒದಗಿಸುವ ಮೂಲಕ ನೈತಿಕ ಬಲ ತುಂಬುವ ಉದ್ದೇಶದಿಂದ ಸರಕಾರ ಈ ಜಾತಿ ಪ್ರಮಾಣ ಪತ್ರ ನೀಡಲು ಉದ್ದೇಶಿಸಿತ್ತು.
ಮತದಾರರ ಕರಡು ಪಟ್ಟಿಯಿಂದ ಹೆಸರು ಬಿಟ್ಟು ಹೋದರೂ, ಸೂಕ್ತ ದಾಖಲೆ ಸಲ್ಲಿಸಿ ಪಟ್ಟಿಯಲ್ಲಿಹೆಸರು ಸೇರ್ಪಡೆಗೆ ಅವಕಾಶವಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿರಾಜ್ಯ ಸರಕಾರ ಎಸ್ ಸಿ, ಎಸ್ ಟಿ ಮತ್ತು ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಜಾತಿ ಸರ್ಟಿಫಿಕೇಟ್ ನೀಡಲು ಮಹತ್ವದ ನಿರ್ಧಾರ ತೆಗೆದುಕೊಂಡು, ತ್ವರಿತವಾಗಿ ಪೂರೈಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ ಹಿನ್ನೆಲೆಯಲ್ಲಿಧಾರವಾಡ ಜಿಲ್ಲಾಡಳಿತವು 11,31,754 ಜನರಿಗೆ ಜಾತಿ ಸರ್ಟಿಫಿಕೇಟ್ ಒದಗಿಸಲು ಉದ್ದೇಶಿಸಿದೆ. ಇದರಲ್ಲಿಈವರೆಗೆ (ಆಗಸ್ಟ್ 12) 7,79,960 ಜನರಿಗೆ ಅಂದರೆ ಶೇ.68ರಷ್ಟು ಸರ್ಟಿಫಿಕೇಟ್ ಪೂರೈಸಿದೆ.
ಸಿಬ್ಬಂದಿ ನಿಯೋಜನೆ
ಎಸ್ ಐಆರ್ ಗಣತಿ ನಮೂನೆ ವಿತರಣೆಯಂತೆ ಲಕ್ಷಾಂತರ ಜನರಿಗೆ ಜಾತಿ ಸರ್ಟಿಫಿಕೇಟ್ ವಿತರಿಸುವುದು ದೊಡ್ಡ ಸವಾಲಾಗಿದೆ. ಆದರೂ ಕಂದಾಯ ಇಲಾಖೆ ಶೇ.68ರಷ್ಟು ಮನೆ ಮನೆಗಳಿಗೆ ಸರ್ಟಿಫಿಕೇಟ್ ವಿತರಿಸಿರುವುದು ಅಚ್ಚರಿ ಮೂಡಿಸಿದೆ. ಇದಕ್ಕಾಗಿ ಗ್ರಾಮ ಆಡಳಿತಾಧಿಕಾರಿ(ತಲಾಟಿ), ಗ್ರಾಮ ಸಹಾಯಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ದತ್ತಾಂಶ ಹೇಗೆ?
ಶಿಕ್ಷಣ, ಉದ್ಯೋಗ, ಔದ್ಯೋಗಿಕ ಸೇರಿದಂತೆ ಸರಕಾರದ ಯೋಜನೆಗಳನ್ನು ಪಡೆಯಲು ಜಾತಿ ಸರ್ಟಿಫಿಕೇಟ್ ಕೋರಿ ಅರ್ಜಿ ಸಲ್ಲಿಸಲಾಗಿರುತ್ತದೆ. ಅವುಗಳ ದತ್ತಾಂಶಗಳನ್ನು ಸಂಗ್ರಹಿಸಿ ಸರ್ಟಿಫಿಕೇಟ್ ಗಳನ್ನು ಹುಡುಕಿ, ಅವುಗಳನ್ನು ಪ್ರಿಂಟ್ ಪಡೆದು ಆಯಾ ಏರಿಯಾದ ಮನೆ ವಿಳಾಸಕ್ಕೆ ತಲುಪಿಸಲಾಗುತ್ತಿದೆ. ಎಸ್ ಐಆರ್ ಕುರಿತಾಗಿ ಸಿಎಂ ಸಂದೇಶ ನೀಡಿದ್ದು, ಅದರ ಮುದ್ರಣ ಪ್ರತಿಯನ್ನು ಜಾತಿ ಸರ್ಟಿಫಿಕೇಟ್ ಜತೆಗೆ ಹಂಚಿಕೆ ಮಾಡುತ್ತಿರುವುದು ವಿಶೇಷ.
ಬಾಕ್ಸ್
ಮುಖ್ಯಮಂತ್ರಿ ಸಂದೇಶ ಏನು?
ಕರಡು ಮತದಾರರ ಪಟ್ಟಿಯಲ್ಲಿಸೇರ್ಪಡೆಯಾಗಿ, ಮತದಾನದ ಹಕ್ಕು ಉಳಿಯುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಮತದಾರರ ಪಟ್ಟಿ ಪ್ರಕಟವಾದ ನಂತರ, ಅಗತ್ಯವೆಂದು ಕಂಡು ಬಂದರೆ ಚುನಾವಣಾ ಆಯೋಗವು ಬಿಎಲ್ ಒ ಮೂಲಕ ನೋಟಿಸ್ ನೀಡಿ ಹೆಚ್ಚುವರಿ ಮಾಹಿತಿ ಕೇಳಬಹುದು. ಅಂತಹ ಸಂದರ್ಭದಲ್ಲಿಆಯೋಗ ಸೂಚಿಸಿರುವ 11 ದಾಖಲೆಗಳಲ್ಲಿಯಾವುದಾದರೂ ಒಂದು ದಾಖಲೆ ಅನ್ವಯಿಸುವಲ್ಲಿಜಾತಿ ಪ್ರಮಾಣ ಪತ್ರ ಸೇರಿದಂತೆ, ದಾಖಲೆಗಳನ್ನು ಸಲ್ಲಿಸಿ ತಮ್ಮ ಅರ್ಹತೆಯನ್ನು ದೃಢೀಕರಿಸಬಹುದು. ಈ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಲು ಜಾತಿ ಪ್ರಮಾಣ ಪತ್ರವನ್ನು ಮನೆ ಮನೆಗೆ ತಲುಪಿಸಲಾಗುತ್ತಿದೆ. ಆಯೋಗದಿಂದ ನೋಟಿಸ್ ಬಂದರೆ ಈ ಜಾತಿ ಪ್ರಮಾಣ ಪತ್ರವನ್ನು ಬಳಸಿಕೊಳ್ಳಿ, ಯಾವುದೇ ಸಹಾಯ ಅಥವಾ ಸ್ಪಷ್ಟೀಕರಣಕ್ಕಾಗಿ ತಮ್ಮ ಬಿಎಲ್ ಒ ಅವರನ್ನು ಸಂಪರ್ಕಿಸಬಹುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೋರಿದ್ದಾರೆ.
ಬಾಕ್ಸ್
ಜಿಲ್ಲೆಯ ತಾಲೂಕುವಾರು ಜಾತಿ ಪ್ರಮಾಣ ವಿವರ
ತಾಲೂಕು ಒಟ್ಟು ಸರ್ಟಿಫಿಕೇಟ್ ವಿತರಣೆ
ಅಣ್ಣಿಗೇರಿ 44,541 32,958
ಧಾರವಾಡ 2,98,496 2,24,861
ಹುಬ್ಬಳ್ಳಿ(ನಗರ) 3,05,674 2,39,286
ಹುಬ್ಬಳ್ಳಿ(ಗ್ರಾಮೀಣ)96,609 58,618
ಕಲಘಟಗಿ 1,10,248 83,920
ಕುಂದಗೋಳ 1,10,561 86,618
ನವಲಗುಂದ 90,059 34,424
ಅಳ್ನಾವರ 75,566 19,275
ಒಟ್ಟು 11,31,754 7,79,960
ಕೋಟ್
ರಾಜ್ಯ ಸರಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿಜಾತಿ ಪ್ರಮಾಣ ಪತ್ರಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಪ್ರಗತಿಯಲ್ಲಿದೆ. ಇಲ್ಲಿಯವರೆಗೆ ಶೇ.68ರಷ್ಟು ಜನರಿಗೆ ಪ್ರಮಾಣ ಪತ್ರಗಳನ್ನು ಪೂರೈಸಲಾಗಿದೆ. ಉಳಿದವುಗಳನ್ನು ಶೀಘ್ರವೇ ಒದಗಿಸುತ್ತೇವೆ.