ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಹೋಬಳಿ ಬರದೂರ ಗ್ರಾಮದಲ್ಲಿಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡ ಕುಟುಂಬಗಳಿಗೆ ಮಂಜೂರಾಗಿದ್ದ 12 ಎಕರೆ 14 ಗುಂಟೆ ಕೃಷಿ ಜಮೀನನ್ನು ಸ್ಥಿತಿವಂತರಿಗೆ ಮಾರಾಟ ಮಾಡಿ ಅನ್ಯಾಯ ಎಸಗಲಾಗಿದೆ ಎಂದು ಆರೋಪಿಸಿ, ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಗದಗ ಜಿಲ್ಲಾ ಘಟಕದ ವತಿಯಿಂದ ಬೆಂಗಳೂರು ಚಲೋ ಚಳವಳಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಬಿಎಸ್ ಪಿ ಗದಗ ಜಿಲ್ಲಾಧ್ಯಕ್ಷ ಬಸವರಾಜ ನವಲಗುಂದ, ಡಾ. ಬಿ.ಆರ್ . ಅಂಬೇಡ್ಕರ್ ಅಭಿವೃದ್ಧಿ ನಿಗಮದ ಗದಗ ಜಿಲ್ಲಾ ವ್ಯವಸ್ಥಾಪಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘‘ಬಾಧಿತ ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುವಂತೆ ಮತ್ತು ಅರ್ಜಿದಾರರಿಗೆ ಸೂಕ್ತ ಮಾಹಿತಿ ನೀಡುವಂತೆ ಕೇಂದ್ರ ಕಚೇರಿಯಿಂದ ಸೂಚನೆ ಬಂದಿದ್ದರೂ, ಜಿಲ್ಲಾ ವ್ಯವಸ್ಥಾಪಕರು ಕ್ರಮ ಕೈಗೊಂಡಿಲ್ಲ. ಡಾ.ಬಿ.ಆರ್ . ಅಂಬೇಡ್ಕರ್ ಅಭಿವೃದ್ಧಿ ನಿಗಮವು ಶೇ. 50:50 ಭೂಮಿಯ ಹಣ ವಸೂಲಿ ಮಾಡುವ ನೆಪದಲ್ಲಿದಲಿತ ಕುಟುಂಬಗಳ ಮೇಲೆ ಒತ್ತಡ ಹೇರಿದೆ. ಅಲ್ಲದೆ ಬಡ ಕುಟುಂಬಗಳ ಜಮೀನನ್ನು ಸ್ಥಿತಿವಂತರಿಗೆ ಮಾರಾಟ ಮಾಡಲಾಗಿದೆ,’’ ಎಂದು ಆರೋಪಿಸಿದ್ದಾರೆ.
‘‘ಸಂವಿಧಾನದ ಆಶಯ ಮತ್ತು ಕಾಯಿದೆ ನಿಯಮಾವಳಿ ಪ್ರಕಾರ, ಪರಭಾರೆಯಾಗಿರುವ ಎಸ್ ಸಿ/ಎಸ್ ಟಿ ಭೂಮಿಯನ್ನು ತಕ್ಷಣವೇ ವಶಪಡಿಸಿಕೊಂಡು ಮೂಲ ಮಂಜೂರಾತಿದಾರರಿಗೆ ಅಥವಾ ಅವರ ಉತ್ತರಾಧಿಕಾರಿಗಳಿಗೆ ಕೊಡಬೇಕು ಹಾಗೂ ಬಡ ಕುಟುಂಬಗಳಿಗೆ ಆಗಿರುವ ಅನ್ಯಾಯ ಸರಿಪಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಬೆಂಗಳೂರು ಚಲೋ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ,’’ ಎಂದು ಬಸವರಾಜ ನವಲಗುಂದ ತಿಳಿಸಿದ್ದಾರೆ.