ಪರಮಹಂಸ ಶತಕ -49

Contributed byShridevi Ambekallu|Vijaya Karnataka
nature and distortion emotions of the mind
ಪ್ರಕೃತಿ ಮತ್ತು ವಿಕೃತಿ

ಅದು ಮನಸಿನ ಭಾವ
--------

ವಿಕೃತಿಗೆಂತಹದೋ ಪ್ರಕೃತಿ

ವಿಕಾರಗೆಂತಹದೋ ಆಕೃತಿ

ರೋಷಗೆಂತಹದೋ ದ್ವೇಷ

ಕಾಲಗೆಟ್ಟಾಗ ರಾಕ್ಷಸರೇ ದೇವರಾದರಂತೆ-ಪರಮಹಂಸ ||49||

ಯಾವುದು ಹೇಗೆ ಇದೆಯೋ ಅದನ್ನು ಹಾಗೆಯೇ ನೋಡುವುದನ್ನು ಪ್ರಕೃತಿ ಎನ್ನುತ್ತಾರೆ. ವಾಸ್ತವ ದ ಸ್ಥಿತಿಯನ್ನು ಅರಿತು ಬದುಕುವುದೇ ಜೀವನದ ಪ್ರಕೃತಿ. ಯಾವುದು ಇಲ್ಲವೋ ಅದನ್ನು ಇದ್ದಂತೆ ಭಾವಿಸುವುದು, ಇಲ್ಲದಿರುವುದರಲ್ಲಿಇದ್ದಂತೆ ಬದುಕುವುದೇ ವಿಕೃತಿ. ಯಾವುದು ವಾಸ್ತವ ಅದು ಪ್ರಕೃತಿ, ಯಾವುದು ಅವಾಸ್ತವ ಅದೇ ವಿಕೃತಿ. ಯಾವುದು ಕಾಣುತ್ತಿದೆ ಅದು ಪ್ರಕೃತಿ, ಯಾವುದು ಭ್ರಮೆ ಸೃಷ್ಟಿಸುತ್ತಿದೆ ಅದೇ ವಿಕೃತಿ. ವಿವೇಕದಿಂದ ಯೋಚಿಸಿದಾಗ ಸಿಗುವ ಉತ್ತರವೇ ಪ್ರಕೃತಿ. ವಿವೇಕಹೀನನಾಗಿ ವರ್ತಿಸುವುದೇ ವಿಕೃತಿ. ನಿನ್ನ ವಿವೇಕವೆಲ್ಲವೂ ನಿನ್ನ ಪ್ರಕೃತಿಯೇ, ನಿನ್ನ ಅವಿವೇಕವೆಲ್ಲವೂ ನಿನ್ನ ವಿಕೃತಿಯೇ!

ವಿವೇಕಹೀನನಾದ ಮನುಷ್ಯ ಯೋಚಿಸುವುದು, ನಡೆದುಕೊಳ್ಳುವುದು ಕೊನೆಗೆ ಇತರರೊಂದಿಗೆ ವ್ಯವಹರಿಸುವುದು ಎಲ್ಲವೂ ಕೂಡ ವಿಕೃತವಾಗಿರುತ್ತದೆ. ನಿನ್ನೊಳಗೆ ಒಳ್ಳೆಯ ವಿಚಾರಗಳಿಲ್ಲದ ಕಾಲಕ್ಕೆ, ಹೊರಗಿನ ಪ್ರಕೃತಿಯಲ್ಲಿನ ಪ್ರತಿಯೊಂದು ಸಂಗತಿಯೂ, ವ್ಯಕ್ತಿಯೂ ಕೂಡ ವಿಕಾರವಾಗಿಯೇ ಕಾಣುತ್ತದೆ. ಮನಸ್ಸಿನಲ್ಲಿವಿಷಯದ ವಿಕಾರತೆ ಯಾವ ಆಕೃತಿಯಲ್ಲಿರುತ್ತದೋ ಹೊರಗೂ ಕೂಡ ಅದು ಅದೇ ವಿಕೃತಿಯಲ್ಲಿನಿನಗೆ ಕಾಣಸಿಗುತ್ತದೆ. ಹೊರಗಿನ ಆಕೃತಿಗಳು ಕೂಡ ಅದೇ ವಿಕಾರದಲ್ಲಿಒಳಗೆ ಪ್ರವೇಶಿಸುತ್ತವೆ. ನಿನ್ನ ವಿಕಾರವಾದ ಆಲೋಚನೆಗಳಿಗಿರುವುದೆಲ್ಲಒಂದೇ ರೂಪ, ಅದು ವಿಕಾರವಾದ ರೂಪ. ಅದರ ವಿಕಾರತೆ ನೀನು ಅದನ್ನು ಎಷ್ಟು ಯೋಚಿಸಿವೆಯೋ ಅಷ್ಟು ವಿಕೃತವಾಗುತ್ತದೆ.

ನಿನ್ನೊಳಗೆ ವಿಕಾರ ಮತ್ತು ವಿಕೃತಿಗಳಿರುವಾಗ ನಿನ್ನ ಪ್ರಕೃತಿಯು ಸಹ ದ್ವೇಷ, ಅಸೂಯೆ, ಅಸಹನೆಯಿಂದ ಕೂಡಿರುತ್ತದೆ. ನಿನ್ನೊಳಗೆ ಎಲ್ಲವೂ ಕೂಡ ವಿಕೃತವಾಗಿರುವಾಗ ದ್ವೇಷವು ಕೂಡ ನಿನ್ನೊಳಗೆ ಹಿಮಾಲಯದಷ್ಟು ಎತ್ತರದಲ್ಲಿಕೂತಿರುತ್ತದೆ. ನಿನ್ನ ಬಗ್ಗೆ ಯಾರಾದರೂ ಒಂದು ಸಣ್ಣ ಮಾತು ಆಡಿದರೂ ನಿನಗೆ ಅವರ ಮೇಲೆ ಎಲ್ಲಿಲ್ಲದ ಕೋಪ ಬರುತ್ತದೆ. ಯಾರಾದರೂ ನಿನ್ನ ತಪ್ಪುಗಳನ್ನು ಎತ್ತಿ ತೋರಿಸಿದರೆ ಅವರನ್ನು ನೀನು ದ್ವೇಷಿಸಲು ಮೊದಲುಗೊಳಿಸುವೆ. ನಿನಗೆ ಒಳ್ಳೆಯವರು ಕೆಟ್ಟವರಾಗಿಯೂ, ಕೆಟ್ಟವರು ಒಳ್ಳೆಯವರಾಗಿಯೂ ಕಾಣುತ್ತಾರೆ.