ಮಕ್ಕಳ ಕಥೆ

Contributed byshubha.hegde@timesgroup.com|Vijaya Karnataka
stories that teach lessons to children
ಸೃಷ್ಟಿಯಿಂದ ಕಲಿಯುವ ಬದುಕಿನ ಪಾಠ

ಕಮಲ ಮತ್ತು ಅಶೋಕನ ಮಗ ಮುರಳಿ ಹತ್ತನೇ ತರಗತಿಯಲ್ಲಿರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದ. ಬಂಧುಗಳ ಜೊತೆ ಸಂತೋಷ ಹಂಚಿಕೊಳ್ಳಲು ಮನೆಯಲ್ಲಿಸತ್ಯನಾರಾಯಣ ಪೂಜೆ ಮಾಡಿ ಎಲ್ಲರನ್ನೂ ಊಟಕ್ಕೆ ಆಹ್ವಾನಿಸಿದ್ದರು. ಮುರಳಿಯ ಸ್ನೇಹಿತರು ಬಂದ್ದಿದರು. ಊಟ ಮುಗಿಸಿ ಮಾತನಾಡುತ್ತಾ ಕುಳಿತಿದ್ದರು. ಆಗ ಮುರಳಿಯ ತಾಯಿ, ‘ಒಳ್ಳೆಯ ಫಲಿತಾಂಶ ಪಡೆದು ಎಲ್ಲರಿಗೂ ಸಂತೋಷ ಕೊಟ್ಟಿದೀಯ.ಇಲ್ಲಿಇರುವ ಹಿರಿಯರ ಆಶೀರ್ವಾದ ನಿನಗೆ ಬೇಕು. ಎಲ್ಲರಿಗೂ ನಮಸ್ಕರಿಸು, ಅವರೆಲ್ಲರೂ ನಿನಗೆ ಒಳ್ಳೆಯ ಮಾತುಗಳನ್ನು ಹೇಳುತ್ತಾರೆ’ ಎಂದಾಗ ತಲೆಯಾಡಿಸಿದ.
ಅವರ ಚಿಕ್ಕಮ್ಮ ‘ನೀನು ಒಳ್ಳೆಯ ಡಾಕ್ಟರ್ ಆಗಿ ಜನಸೇವೆ ಮಾಡು’ ಎಂದು ಹರಸಿದರು. ಮುರಳಿಯ ದೊಡ್ಡಪ್ಪ ‘ಹೆಚ್ಚು ವಿದ್ಯಾಭ್ಯಾಸ ಮಾಡಿ ವಿದೇಶಕ್ಕೆ ಹೋಗು’ ಎಂದು ಹರಸಿದರು. ಅವನ ಅತ್ತೆ ‘ಒಳ್ಳೆಯ ಎಂಜಿನಿಯರ್ ಆಗಿ ದೊಡ್ಡ ಸಂಸ್ಥೆ ಕಟ್ಟು’ ಎಂದು ಹರಸಿದರು.

ವೆಂಕಜ್ಜಿ, ‘ಸೂರ್ಯನ ಗುಣಗಳನ್ನು ಅಳವಡಿಸಿಕೊಂಡು, ನೀರಿನಂತೆ ಸರಳತೆ,ಭೂಮಿಯ ಕ್ಷಮೆ,ಗಾಳಿಯಷ್ಟು ಹಗುರತೆ, ಆಕಾಶದಷ್ಟು ವಿಶಾಲತೆ ಗುಣಗಳನ್ನು ಅಳವಡಿಸಿಕೊಂಡು ಬಾಳು’ ಎಂದು ಸಂತೋಷದಿಂದ ಹರಸಿದರು.

ಮುರಳಿಯ ಸ್ನೇಹಿತರು ಇದನ್ನೆಲ್ಲಾನೋಡುತ್ತಾ ಕುಳಿತಿದ್ದರು. ವೆಂಕಜ್ಜಿಯ ಮಾತುಗಳು ಅರ್ಥವಾಗಲಿಲ್ಲ.ಅವರೆಲ್ಲಮುರಳಿ ಬಳಿ ಇದನ್ನು ಹೇಳಿದರು. ‘ಹೌದು ನಮ್ಮ ಅಜ್ಜಿ ಯಾವಾಗಲೂ ಉತ್ತಮವಾಗಿ ಮಾತನಾಡುತ್ತಾರೆ ಎಂದವನು ಅಜ್ಜಿ ಬಳಿ ಹೋಗಿ ‘ಅಜ್ಜಿ ನಿಮ್ಮ ಆಶೀರ್ವಾದ ನನಗೆ ಇಷ್ಟವಾಯಿತು.ಆದರೆ ನನಗೂ, ನನ್ನ ಸ್ನೇಹಿತರಿಗೂ ಅರ್ಥವಾಗುವಂತೆ ಬಿಡಿಸಿ ಹೇಳಿ’ ಎಂದಾಗ ವೆಂಕಜ್ಜಿ ‘ಶಾಲಾ ಪಾಠಕ್ಕಿಂತ ಹೆಚ್ಚಾಗಿ ಪ್ರಕೃತಿ ಪಾಠ ಮುಖ್ಯ. ಪ್ರಕೃತಿ ಎಂದರೆ ಭಗವಂತ. ನೀನು ಶಾಲಾ ಪಾಠದಲ್ಲಿಜಾಣ ಎನ್ನುವುದು ಈ ಫಲಿತಾಂಶದಿಂದ ಅರಿವಾಗಿದೆ. ಹಾಗೆ, ಪ್ರಕೃತಿಯ ಗುಣಸ್ವಭಾವಗಳನ್ನು ನಮ್ಮ ಜೀವನದಲ್ಲಿಅಳವಡಿಸಿಕೊಳ್ಳಬಹುದು. ಅಗ್ನಿ, ವಾಯು, ಭೂಮಿ, ನೀರು ಹಾಗೂ ಆಕಾಶ. ಈ ಪಂಚ ತತ್ವಗಳಿಂದ ಬ್ರಹ್ಮಾಂಡ ಆಗಿದೆ. ಇದೇ ಪಂಚ ತತ್ವಗಳು ನಮ್ಮಲ್ಲಿಯೂ ಇರುವುದರಿಂದ ಆ ಗುಣಗಳನ್ನು ನಾವು ಬೆಳೆಸಿ ಕೊಳ್ಳಬೇಕು’ ಎಂದಾಗ ಹಿರಿಕಿರಿಯರಾದಿಯಾಗಿ ಸಕ್ತಿಯಿಂದ ಅಜಕ್ಜಿಯ ಮಾತು ಕೇಳಿಸಿಕೊಂಡರು.

‘ಅಗ್ನಿಯ ರೂಪ ಈ ಸೂರ್ಯನು ಪ್ರತಿದಿನ ಹೊಸತನದಿಂದ ಉದಯಿಸುತ್ತಾನೆ. ಅದೇ ಸೂರ್ಯ, ಅದೇ ಮೂಡಣ, ಅದೇ ಬಾನು.ಆದರೆ, ಸೂರ್ಯೋದಯದ ಸೊಬಗು ಪ್ರತಿ ದಿನವೂ ಬೇರೆ. ನಾವೂ ಅದೇ ಜೀವನ, ಅದೇ ಕೆಲಸ ಎಂದು ಬೇಸರಿಸದೆ ಪ್ರತಿ ದಿನವೂ ಉಲ್ಲಾಸದಿಂದ ಜೀವಿಸಬೇಕು. ನೀರಿನಂತೆ ಸರಳವಾಗಿರಬೇಕು ನಮ್ಮ ಜೀವನ. ನೀರು ಬಾಯಾರಿಕೆ ತಣಿಸುವಂತೆ ನಮ್ಮ ಮಾತುಕೃತಿಗಳು ಇತರರಿಗೆ ಸಂತೃಪ್ತಿ ನೀಡಬೇಕು. ಮನಸ್ಸು ನೀರಿನಂತೆ ಶುಭ್ರ, ನಿಷ್ಕಲ್ಮಶ ಆಗಿರಬೇಕು. ಭೂಮಿ, ತಾಳ್ಮೆ ಹಾಗೂ ಸಹನೆಯ ಪ್ರತೀಕ. ಭೂಮಿ ಕ್ಷಮಾಗುಣಕ್ಕೆ ಮಾದರಿ. ಇಂದು ನಾವು ಮಾಡುವ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಬೇಕು. ತಾಯಿ ಮಕ್ಕಳಿಗೆ ತೋರುವ ಪ್ರೀತಿಕಾಳಜಿಯನ್ನು ಭೂಮಿ ತಾಯಿ ನಮಗೆ ತೋರುತ್ತಿದ್ದಾಳೆ, ನಾವು ಎಂದೆಂದಿಗೂ ಋುಣಿಯಾಗಿರಬೇಕು. ಪರಿಶುದ್ಧತೆ, ನಿರ್ಮಲತೆ ಹಾಗೂ ಹಗುರತೆ ವಾಯುವಿನ ಗುಣ ವಿಶೇಷ. ನಾವು ಅಹಂಕಾರ ತೊರೆದಾಗ ಹಗುರವಾಗುತ್ತೇವೆ.ಯಾವ ಖರ್ಚಿಲ್ಲದೆ ನಮಗೆ ಶುದ್ಧ ತಂಗಾಳಿ ಪ್ರಕೃತಿ ನೀಡುತ್ತಿದೆ. ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಆಕಾಶ ಅಂದರೆ ಸ್ಥಿರತೆ, ಗಂಭೀರತೆ ಹಾಗೂ ವಿಶಾಲತೆ. ಆಕಾಶದಷ್ಟು ವಿಶಾಲ ಮನೋಭಾವ ಹೊಂದಬೇಕು. ಸ್ವಾರ್ಥ,ಕಪಟ ಸಣ್ಣತನ ತ್ಯಜಿಸಿ ಜೀವನದ ಸುಖದುಃಖಗಳನ್ನು ಸಮಾನವಾಗಿ ಭಾವಿಸಬೇಕು. ಗಾಳಿಮಳೆಗೆ ಆಕಾಶ ಅಂಜುವುದಿಲ್ಲ. ಹಾಗೆ ನಾವು ಕಷ್ಟಸಂಕಷ್ಟಗಳಿಗೆ ಅಂಜದೇ ಧೈರ್ಯದಿಂದ ಎದುರಿಸಿ ಜಯಿಸಬೇಕು’ ಎಂದು ವೆಂಕಟಜ್ಜಿ ಹೇಳಿದಾಗ ಎಲ್ಲರೂ ಸಂತೋಷದಿಂದ ಚಪ್ಪಾಳೆ ತಟ್ಟಿದರು.

ಒಬ್ಬ ಹಿರಿಯರು ‘ನೋಡಿದಿರಾ ಮಕ್ಕಳೇ, ಅಜ್ಜಿ ಹೇಳಿದ ಮಾತುಗಳನ್ನು. ಹಿರಿಕಿರಿಯರೆನ್ನದೆ ಎಲ್ಲರೂ ಈ ವಿಷಯಗಳನ್ನು ಅರಿಯುವಂತೆ ತಿಳಿಸಿದ್ದಾರೆ.ಇಂತಹ ಒಳ್ಳೆಯ ಮಾತುಗಳನ್ನು ನಾವು ಸಾಧ್ಯವಾದಷ್ಟು ಅಳವಡಿಸಿಕೊಳ್ಳೋಣ. ವಿದ್ಯೆ ಎನ್ನುವುದು ಬರೀ ಶಾಲಾಕಾಲೇಜುಗಳಲ್ಲಿಕಲಿಯುವುದಿಲ್ಲ. ಮನೆಯೇ ಮೊದಲ ಪಾಠಶಾಲೆ’ ಎನ್ನುವಂತೆ ನಮ್ಮ ಹಿರಿಯರಿಗೆ ಗೌರವ ಕೊಟ್ಟು ಅವರಿಂದ ಜೀವನ ಪಾಠ ಕಲಿಯೋಣ’ ಎಂದು ಹೇಳಿದರು.

ವೀಣಾ ಶಂಕರ್