ಮನುಷ್ಯರ ದೇಹದ ಸರಿ ಸುಮಾರು ಶೇ. 60ರಷ್ಟು ಉದಕಾಂಶವಿದೆ. ಈ ಜಲಾಂಶ ಸರಿದೂಗಿಸಿಕೊಂಡಾಗಲಷ್ಟೆ ದೇಹಾರೋಗ್ಯ ಸ್ಥಿರ. ಇದು ಕುಸಿದರೆ ನಿರ್ಜಲತ್ವ. ಒಂದು ಸ್ಥೂಲ ಅಂಕಿ ಅಂಶ ಗಮನಿಸಿರಿ. ಪೃಥ್ವಿಯ ಜಲ ತತ್ತ್ವದ ಶೇ. 71ರಷ್ಟು. ಉಳಿದುದು ಮಾತ್ರ ಭೂಮಿ! ಆಯುರ್ವೇದದ ಒಂದು ಮಾತು ಉಲ್ಲೇಖಾರ್ಹ. ಭೂಮಿ ದೇಶ ಮತ್ತು ದೇಹ ದೇಶ. ಹೊರಗಿನ ಪರಿಸರವೆಲ್ಲದೇಹದೊಳಡಗಿದೆ.
ಇಂದು ಊಟಿ ಎಂದು ಕರೆಯಲ್ಪಡುವ ಸ್ಥಳಕ್ಕೆ ತಲೆಮಾರಿನ ಹಿಂದೆ ಉದಕಮಂಡಲವೆಂಬ ಹೆಸರಿತ್ತು. ಬ್ರಿಟಿಷರು ಇದನ್ನು ಊಟಿ ಎಂದು ಕರೆದರು. ಸುತ್ತಣ ಗಿರಿ-ಕಂದರಗಳ ನಡುವೆ ಹರಿಯುವ ಊಟಿಯ ಪೈಕಾರ ನದಿಯು ಸರೋವರಕ್ಕೆ ಹರಿಯುವಂತೆ, ನಮ್ಮ ದೇಹದೊಳಗಿನ ವಿಭಿನ್ನ ಅಂಗ ಅವಯವಗಳಿಂದ ನೀರಿನಂಶವು ಮೂತ್ರಾಶಯಕ್ಕೆ ಹರಿದು ಸೇರಿಕೊಳ್ಳುತ್ತದೆ.
ನೀರು ಕುಡಿಯುವ ವಿಧಾನ
ಜಠರವನ್ನು್ನ ನಾಲ್ಕು ಭಾಗವಾಗಿ ಪರಿಗಣಿಸುವುದಾದರೆ ಅರೆ ಹೊಟ್ಟೆ ಘನಾಹಾರವಿರಲಿ, ಕಾಲು ಹೊಟ್ಟೆ ದ್ರವಾಹಾರ, ಉಳಿದ ಕಾಲು ಭಾಗ ಖಾಲಿ ಬಿಡಬೇಕು. ಅತಿಯಾದ ಜಲ ಸೇವನೆಯಿಂದ ಅನ್ನವು ಪಚನವಾಗಲು ಕಷ್ಟ. ನೀರೇ ಕುಡಿಯದಿರುವುದು ಸಹ ದೋಷ. ಹಾಗಾಗಿ ಪದೇ ಪದೆ ಅಲ್ಪ ಪ್ರಮಾಣದಲ್ಲಿನೀರು ಸೇವನೆ ಹಿತ. ದ್ರವಾಹಾರಗಳು ಸಹ ಕನಿಷ್ಠ ಮೂರು ತಾಸಿನ ಅಂತರದಲ್ಲಿಸೇವಿಸಿದರೆ ಒಳಿತು. ಮಜ್ಜಿಗೆ, ಹಣ್ಣಿನ ರಸ, ಸಾರು ಇವೆಲ್ಲವೂ ಉದಕ ಭೂಯಿಷ್ಠವೇ. ಹಾಗೆಂದು ಉತ್ತೇಜಕ ಪಾನೀಯ ಕಾಫಿ ಮತ್ತು ಚಹ ಸೇವನೆ ಒಳ್ಳೆಯದಲ್ಲ. ಪಾಚಕ ರಸ (ಎನ್ಝಾಯಿಮ್ ) ದುರ್ಬಲ. ಅರಗದ ಆಹಾರದಿಂದ ಹಲವು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.
ವಾಗ್ಭಟರ ಒಂದು ಕಿರು ಬರಹದಲ್ಲಿಬಹಳ ಸೊಗಸಾಗಿ ಜಲ ಸೇವನಾ ವಿಧಿಯಿದೆ. ಸಮಸ್ಥೂಲ ಕೃಶಶ್ಚೈವ ಮಧ್ಯಾಂತ ಪ್ರಥಮಾಂಬುಪಾಃ/ ದೇಹದ ಗಾತ್ರ ಸಮವಿರಲು ಉಣ್ಣುವ ನಡು ನಡುವೆ ಅಲ್ಪ ಪ್ರಮಾಣದ ಉದಕ ಸೇವನೆ ಸರಿಯಾದ ವಿಧಾನ. ಸಮಾರಂಭಗಳಲ್ಲಿಭೋಜನ ವೇಳೆ ಇಂದಿಗೂ ಬಿಸಿ ಮತ್ತು ತಣ್ಣೀರು ಬಡಿಸುವ ವಿಧಾನ ಗಮನಿಸಿರಿ. ಉಂಡ ಅನಂತರ ಧಾರಾಳ ನೀರು ಸೇವಿಸಿದರೆ ದೇಹದ ಗಾತ್ರ ಹೆಚ್ಚಳಕ್ಕೆ ಅನುಕೂಲ. ಉಣ್ಣುವ ಮೊದಲೇ ಚೆಂಬು ನೀರು ಕುಡಿದು ಅನಂತರ ಉಂಡರೆ ದೇಹದ ಉತ್ತರೋತ್ತರ ರಸ ರಕ್ತಾದಿ ಧಾತು ಹೆಚ್ಚದು. ದೇಹವು ಕೃಶವಾಗುವುದು ಎಂಬ ಆಭಿಪ್ರಾಯ ವಾಗ್ಭಟರದು.
ವಾಡಿಕೆಯ ಮಾತಿದೆ. ತಣ್ಣೀರನ್ನಾದರೂ ಆರಿಸಿ ಕುಡಿಯಿರಿ. ಯಾವುದಕ್ಕೂ ಧಾವಂತ ಬೇಡ ಎಂಬ ಸಜ್ಜನಿಕೆಯ ನುಡಿ ಇದು. ನಮ್ಮ ಜೀವನಶೈಲಿಗೆ ಬಹಳ ಒಗ್ಗುವಂತಹ ಮಾತು. ಊಟ ತಿಂಡಿ ಮಾತ್ರವಲ್ಲ. ತಿಂದುಣ್ಣುವ ವೇಳೆ ಕುಡಿಯುವ ನೀರು ಕನಿಷ್ಠ ಇಪ್ಪತ್ತು ಸೆಕೆಂಡ್ ಕಾಲ ಬಾಯಲ್ಲಿರಿಸಿ ಕುಡಿಯಬೇಕು. ಅಂದರೆ ಪಾಚಕ ರಸದೊಂದಿಗೆ ಮಿಳಿತವಾದ ನೀರು ದೇಹದ ಇನ್ಸುಲಿನ್ ಅಂಶದ ಸರಿಯಾದ ಸ್ರಾವಕ್ಕೆ ಸಹಕಾರಿ. ಎಲ್ಲರಿಗೂ ಸುಲಭ ವಿಧಾನ ಅದು. ತರಾತುರಿಯ ಊಟ ಬೇಡ. ಸಾವಕಾಶವಾಗಿ ಉಣ್ಣುವಾ. ದೇವರು ಮೂವತ್ತೆರಡು ಹಲ್ಲುಕೊಟ್ಟದ್ದು ಏಕೆ ಗೊತ್ತೆ? ನಾವುಣ್ಣುವ ಆಹಾರ ಮೂವತ್ತೆರಡು ಬಾರಿ ಜಗಿದು ತಿನ್ನಲು! ‘ಅಪೋ ಹಿ ಯಾಚಾಮಿ ಭೇಷಜಂ/ ಅಪ್ಸು ಮೇ ಸೋಮಂ’ ಎಂಬ ಋುಗ್ವೇದ ಶಾಂತಿ ಮಂತ್ರವಿದೆ. ನೀರಿನಿಂದ ನಾವು ಔಷಧವನ್ನು ಯಾಚಿಸೋಣವೇ? ಸೋಮ ಎಂಬ ಅಮೃತವನ್ನು ಕೊಡುವುದು ಈ ಜಲ ತತ್ತ್ವ. ಊರ್ಜೇ ಹಿ ದಧಾತನಃ ಅಂದರೆ ಶಕ್ತಿ ಕೊಡುವುದು ಸಹ ಇದೇ ಜಲ ತತ್ತ್ವ!