ಭಕ್ತಿಯಿಂದ ಮಂತ್ರಗಳನ್ನು ಅನುಷ್ಠಾನ ಮಾಡಿದರೆ ಫಲ ಸಿದ್ಧಿಸುವುದು ಎಂಬುದಕ್ಕೆ ಅನೇಕ ಪೌರಾಣಿಕ ಕಥೆಗಳೇ ಸಾಕ್ಷಿಯಾಗಿವೆ.
---------
‘ಕಲೌ ಮಂತ್ರಾಣಾಂ ವೀರ್ಯಂ ತಿರಸ್ಕೃತಮ್ ’ ವಸ್ತುತಃ ಕಲಿಯುಗದಲ್ಲಿಕಲಿಯ ಪ್ರಭಾವದಿಂದ ಮನುಷ್ಯರು ಮಾಡುವಂತಹ ಅನ್ಯಾಯ ಅಕ್ರಮಗಳಿಂದಾಗಿ ಯಾವುದೇ ಮಂತ್ರಗಳು ಫಲಪ್ರದವಲ್ಲ. ಈ ಹಿನ್ನೆಲೆಯಲ್ಲಿಯೇ ‘ಮಂತ್ರಕ್ಕೆ ಮಾವಿನ ಕಾಯಿ ಉದುರುವುದಿಲ್ಲ’ ಎಂಬ ಮಾತು ಪ್ರಸಿದ್ಧವಾಗಿದೆ. ಆದರೆ ಮಧ್ವಾಚಾರ್ಯರೇ ಮೊದಲಾದ ಮಹನೀಯರು, ತಮ್ಮ ತಂತ್ರಸಾರ ಸಂಗ್ರಹಾದಿ ಗ್ರಂಥಗಳಲ್ಲಿ, ಯಾವ ಮಂತ್ರವು ಫಲಪ್ರದವೋ, ಯಾವುದರ ಅನುಷ್ಠಾನದಿಂದ ಸಿದ್ಧಿಯನ್ನು ಪಡೆಯಬಹುದೋ, ಗುರಿಯನ್ನು ತಲುಪಬಹುದೋ ಅಂತಹ ಮಂತ್ರಗಳನ್ನು ನಮಗೆ ತಿಳಿಸಿದ್ದಾರೆ. ಅಂತಹ ಮಂತ್ರಗಳ ಪಠಣೆ ನಮ್ಮನ್ನು ಗುರಿ ಮುಟ್ಟಿಸುತ್ತದೆ.
ಮಂತ್ರ ಎಂದರೆ ....
‘ಮನನಾತ್ ತ್ರಾಯತೇ ಇತಿ ಮಂತ್ರಃ’ ನಾವು ಯಾವುದೇ ಒಂದು ಶ್ಲೋಕ ಅಥವಾ ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ, ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ... ಇತ್ಯಾದಿ ಯಾವುದೇ ಮಂತ್ರಗಳನ್ನು ನಿರಂತರವಾಗಿ ಪಠಿಸುವುದರಿಂದ ನಮ್ಮ ಸಕಲ ವಿಧವಾದ ಕಷ್ಟಕಾರ್ಪಣ್ಯಗಳು ದೂರವಾಗುವ ಮೂಲಕ ಸಕಲ ಸೌಭಾಗ್ಯವನ್ನು ಪಡೆಯಬಹುದು. ಆದರೆ ಯಾವುದೇ ಮಂತ್ರವನ್ನು ಜಪಿಸುವಾಗ ಯಾಂತ್ರಿಕವಾಗಿ ಬಾಯಿಯಲ್ಲಿಹೇಳಿದರೆ ಫಲ ಸಿಗುವುದಿಲ್ಲ. ಭಕ್ತಿಪೂರ್ವಕವಾಗಿ ನಮ್ಮ ಮನಸ್ಸನ್ನು ನಾವು ಹೇಳುವ ಮಂತ್ರ ಹಾಗೂ ಆ ಮಂತ್ರ ಪ್ರತಿಪಾದ್ಯವಾದ ಭಗವಂತನ ಸ್ವರೂಪದಲ್ಲಿನೆಲೆಗೊಳಿಸಿ ಏಕಾಗ್ರಚಿತ್ತರಾಗಿ ಮಂತ್ರವನ್ನು ಜಪಿಸುವುದರಿಂದ ಆ ಮಂತ್ರವು ಫಲಿಸುತ್ತದೆ.
ಮಂತ್ರಸಿದ್ಧಿಯ ಪ್ರಭಾವ
ಭಾಗವತದ ಕಥೆಯಲ್ಲಿಬರುವ ‘ಶಮಿಕ’ ಋುಷಿಗಳ ಮಗ ‘ಶೃಂಗಿ’ ಬಾಲಬ್ರಹ್ಮಚಾರಿ, ತನ್ನ ತಂದೆಗೆ ಪಾಂಡವ ವಂಶದ ಕುಡಿಯಾದ ಪರೀಕ್ಷಿತ ಮಹಾರಾಜನಿಂದ ಅಪಮಾನವಾಗಿದೆ ಎಂದು ತಿಳಿದ, ‘ಇನ್ನು ಒಂದು ವಾರದಲ್ಲಿತಕ್ಷಕ ಕಚ್ಚಿ ಮರಣ ಬರಬೇಕು’ ಎಂದು ಶಪಿಸಿದನು. ಶೃಂಗಿಯ ಮಂತ್ರಸಿದ್ಧಿಯ ಪ್ರಭಾವದಿಂದ ಪರೀಕ್ಷಿತನಂತಹ ಮಹಾರಾಜನು ಒಂದೇ ವಾರದಲ್ಲಿಸಾವನ್ನಪ್ಪಿದನು.
ಅಡವಿ ಆಚಾರ್ಯರು ಎಂದು ಪ್ರಸಿದ್ಧರಾದ ‘ಶ್ರೀವಿಷ್ಣುತೀರ್ಥರು’ ತಮ್ಮ ಗುರುಗಳಾದ ವ್ಯಾಸತತ್ತ್ವಜ್ಞರ ಮಗನಿಗೆ ಬಂದೊದಗಿದ ಅಪಮೃತ್ಯು ದೋಷವನ್ನು, ತಾವು ಅನುಷ್ಠಾನ ಮಾಡುತ್ತಿದ್ದಂತಹ ಶ್ರೀಲಕ್ಷಿ ್ಮೕನರಸಿಂಹ ಮಂತ್ರದ ಜಪದ ಮೂಲಕವಾಗಿ ಪರಿಹರಿಸಿದ್ದಾರೆ. ಮಂತ್ರಾಲಯ ಪ್ರಭುಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳಂತಹ ಅನೇಕ ಮಹನೀಯರು ನಿರಂತರವಾಗಿ ಪ್ರಣವಮಂತ್ರವೇ ಮೊದಲಾದ ಅನೇಕ ಮಂತ್ರಗಳನ್ನು ಜಪಿಸಿ, ತಮ್ಮ ತಪಃಶಕ್ತಿಯನ್ನು ಸಮಾಜಕ್ಕೆ ಧಾರೆ ಎರೆಯುವ ಮೂಲಕ, ಭಕ್ತರಿಗೆ ಎದುರಾದಂತಹ ಅನೇಕ ರೀತಿಯ ಕಷ್ಟ-ಕಾರ್ಪಣ್ಯಗಳನ್ನು ರೋಗ-ರುಜಿನಗಳನ್ನು ಪರಿಹರಿಸಿ, ಸಂತಾನ, ಸಂಪತ್ತು, ವಿವಾಹಭಾಗ್ಯ, ಸದ್ವಿದ್ಯೆ, ಹೀಗೆ ಹತ್ತು ಹಲವು ರೀತಿಯಲ್ಲಿಅನುಗ್ರಹವನ್ನು ಇಂದಿಗೂ ಮಾಡುತ್ತಿದ್ದಾರೆ. ಅಂದರೆ ಅವರು ಜಪಿಸುವ ಮಂತ್ರದ ಶಕ್ತಿ ಎಷ್ಟೆಂದು ನಾವು ತಿಳಿಯಬಹುದು. ತಾವು ಅನುಷ್ಠಾನ ಮಾಡಿದ ಮಂತ್ರದ ಪ್ರಭಾವದಿಂದ ಸತಿಸಾವಿತ್ರಿಯು ಮೃತ ಪತಿಯನ್ನು ಬದುಕಿಸಿಕೊಂಡರೆ, ಅಲ್ಪಾಯುಷಿಗಳಾದಂತಹ ಮಾರ್ಕಂಡೇಯರು ಸಪ್ತಕಲ್ಪ ಪರ್ಯಂತ ಆಯುಷ್ಯ ಪಡೆದರು, ಪುಟ್ಟ ಬಾಲಕನಾದ ಧ್ರುವನು ಭಗವಂತನನ್ನು ಮಂತ್ರಪ್ರಭಾವದಿಂದ ಸಾಕ್ಷಾತ್ಕರಿಸಿಕೊಂಡಿದ್ದಾನೆ. ಮಂತ್ರಪ್ರಭಾವದಿಂದ ಅಗಸ್ತ್ಯರು ಮಹಾ ಸಮುದ್ರವನ್ನೇ ಆಚಮಾನ ಮಾಡಿದ್ದಾರೆ. ಇಲ್ವಲ-ವಾತಾಪಿಯಂತಹ ರಾಕ್ಷಸ ಸಮುದಾಯವನ್ನೇ ನಿರ್ಮೂಲನೆ ಮಾಡಿದ್ದಾರೆ. ಮಂತ್ರ ಪ್ರಭಾವದಿಂದ ವಸಿಷ್ಠರ ತೇಜಸ್ಸನ್ನು ಕಂಡು ಕ್ಷತ್ರಿಯರಾಗಿದ್ದ ವಿಶ್ವಾಮಿತ್ರರು, ಧಿಗ್ಬಲಂ ಕ್ಷತ್ರಿಯಬಲಂ ಬ್ರಹ್ಮತೇಜೋ ಬಲಂ ಬಲಮ್ | ಬಲಾಬಲಂ ವಿನಿಶ್ಚಿತ್ಯ ತಪ ಏವ ಪರಂ ಬಲಮ್ |
‘ಮಂತ್ರ ಪ್ರಭಾವದಿಂದ ಉಂಟಾದಂತಹ ಬ್ರಹ್ಮತೇಜಸ್ಸಿನ ಮುಂದೆ ಕ್ಷತ್ರಿಯರ ಬಾಹುಬಲ ಅತಿತುಚ್ಛ’ ಎಂದು ಉದ್ಘೋಷಿಸಿ ತಮ್ಮ ಶಾಸ್ತ್ರ ಪಥವನ್ನೇ ಬಿಟ್ಟು ಬ್ರಹ್ಮರ್ಷಿಗಳಾದರು, ಜಗತ್ತಿಗೆ ದಿವ್ಯವಾದ ಗಾಯತ್ರಿಮಂತ್ರವನ್ನು ಕೊಟ್ಟರು ವಿಶ್ವಾಮಿತ್ರರು. ಒಮ್ಮೆ, ಒಬ್ಬ ರಾಜನಿಗೂ ಮಧ್ವಾಚಾರ್ಯರಿಗೂ ವಾದ ನಡೆಯುತ್ತಿದ್ದ ಸಂದರ್ಭದಲ್ಲಿ‘ಮಂತ್ರಗಳೆಲ್ಲವೂ ಕೂಡ ಸುಳ್ಳು, ಅವುಗಳು ಫಲಪ್ರದವಲ್ಲ’ ಎಂಬ ಮಾತನ್ನು ರಾಜನು ಹೇಳಿದಾಗ ಕೂಡಲೇ ಮಧ್ವಾಚಾರ್ಯರು ಹೆಸರು ಕಾಳುಗಳನ್ನು ತಮ್ಮ ಕೈಯಲ್ಲಿಹಿಡಿದು ವೇದಮಂತ್ರವನ್ನು ಜಪಿಸಿ ಬಿತ್ತನೆ ಮಾಡಿ, ಆ ಹೆಸರು ಕಾಳು ಮೊಳಕೆ ಒಡೆದು ಸಸಿಯಾಗುವಂತೆ ತೋರಿಸುವ ಮೂಲಕ, ಮಂತ್ರಶಕ್ತಿ ಎಷ್ಟೆಂದು ಜಗತ್ತಿಗೆ ನಿರೂಪಿಸಿದ್ದಾರೆ. ಹೀಗೆ ಇನ್ನೊಂದು ಸಂದರ್ಭದಲ್ಲಿತಮ್ಮ ಗುರುಗಳ ಮಗನಿಗೆ ಹುಟ್ಟಿನಿಂದಲೂ ಇದ್ದಂತಹ ತೀವ್ರವಾದ ಶಿರೋವೇದನೆಯನ್ನು ಅವನ ಕಿವಿಯಲ್ಲಿಗಾಳಿಯುದುವ ಮೂಲಕ, ಮಂತ್ರ ಪಠಿಸುವ ಮೂಲಕ ಶಾಶ್ವತವಾಗಿ ಪರಿಹರಿಸಿದ್ದಾರೆ.
ಮಂತ್ರದ ಮಹಿಮೆ ಅಪಾರ
ಹೀಗೆ ನಾವು ಪುರಾಣಗಳನ್ನು ಅವಲೋಕಿಸುತ್ತಾ ಹೋದರೆ, ಮಂತ್ರದ ಮಹಿಮೆಯನ್ನು ಸಾಕಷ್ಟು ನೋಡಬಹುದು. ನಾವೇ ನಮ್ಮ ಜೀವನದಲ್ಲಿಅನೇಕ ಸಮಸ್ಯೆಗಳು ಎದುರಾದಾಗ ವಿಷ್ಣುಸಹಸ್ರನಾಮ ಇತ್ಯಾದಿ ಮಂತ್ರಗಳನ್ನು ಪಠಿಸುವ ಮೂಲಕ ಅಥವಾ ಮಂತ್ರಜಪ ಮಾಡುವಂತಹ ಗುರು ಹಿರಿಯರ ಬಳಿಯಲ್ಲಿಹೋಗಿ ಅವರನ್ನು ನಮಸ್ಕರಿಸಿ, ಅವರಿಂದ ಆಶೀರ್ವಾದ, ಫಲ ಮಂತ್ರಾಕ್ಷತೆಗಳನ್ನು ತೆಗೆದುಕೊಂಡು, ನಮ್ಮ ಜೀವನದ ಎಷ್ಟೋ ಕಷ್ಟ-ನಷ್ಟಗಳು ಪರಿಹರಿಸಿಕೊಂಡು, ನಮ್ಮ ಮನಸ್ಸಿನ ಕಾಮನೆಗಳನ್ನು ಪರಿಪೂರ್ಣ ಮಾಡಿಕೊಂಡಿದ್ದು, ನಮ್ಮೆಲ್ಲರಿಗೂ ಇರುವ ಅನುಭವ ಅಲ್ಲವೇ?
‘ಭಕ್ತಾ ್ಯ ತುಷ್ಯತಿ ಕೇಶವಃ’ ನಾವು ಭಕ್ತಿಪೂರ್ವಕವಾಗಿ ಯಾವುದೇ ಮಂತ್ರವನ್ನು ಜಪಿಸಿದರೂ, ಫಲ ಪಡೆಯುವ ಯೋಗ್ಯತೆ ನಮಗೆ ಬಂದೇ ಬರುತ್ತದೆ. ಭಕ್ತಿಯಿಲ್ಲದೆ ಯಾವುದೇ ಮಂತ್ರವನ್ನು ಅನುಷ್ಠಾನ ಮಾಡಿದರೂ ಅದು ವ್ಯರ್ಥವೆ. ‘ಮಂತ್ರಕ್ಕೆ ಮಾವಿನಕಾಯಿ ಉದುರು ಉದುರುವುದಿಲ್ಲ’ ಎಂಬ ಮಾತೇ ಸತ್ಯವಾಗುತ್ತದೆ.
ವಿವಿಧ ಮಂತ್ರಗಳು
ಆರೋಗ್ಯವನ್ನು ಪಡೆಯಲು ಧನ್ವಂತರಿ ಮಂತ್ರ, ಆಯುಷ್ಯಕ್ಕಾಗಿ ಮೃತ್ಯುಂಜಯ ಮಂತ್ರ, ಭೂಸಂಪತ್ತನ್ನು ಪಡೆಯಲು ಭೂವರಹಮಂತ್ರ, ಸುಖದಾಂಪತ್ಯಕ್ಕಾಗಿ ಪಾರ್ವತಿ -ಪರಮೇಶ್ವರರ ಮಂತ್ರ, ವಿದ್ಯೆಗಾಗಿ ವೇದವ್ಯಾಸ ಮಂತ್ರ, ಸಕಲ ದುರಿತಗಳ ನಿವಾರಣೆಗಾಗಿ ಶ್ರೀಲಕ್ಷ್ಮೇ ನರಸಿಂಹ ಮಂತ್ರ ಹೀಗೆ ಹತ್ತಾರು ಮಂತ್ರವೆಂಬ ಮಹಾಶಕ್ತಿಯು ನಮ್ಮ ಗುರುಪರಂಪರೆಯಿಂದ ನಮಗೆ ಪ್ರಾಪ್ತವಾಗಿದೆ. ಆದರೆ ಆ ಮಂತ್ರಗಳನ್ನು ನಾವು ಭಕ್ತಿಯಿಂದ ಅನುಷ್ಠಾನ ಮಾಡಬೇಕು, ಆಗ ಮಾತ್ರ ಮಂತ್ರದ ಫಲವನ್ನು ನಾವು ಪಡೆಯಬಹುದು. ‘ಪಾಪಾತ್ ಅಪೈತಿ ಮನಸಾ ಯದಿ ಭಕ್ತಿನಮ್ರಃ’.
ಲೇಖಕರು: ಅಧ್ಯಾತ್ಮ ಚಿಂತಕರು, ಪೂರ್ಣಪ್ರಜ್ಞ ವಿದ್ಯಾಪೀಠ ಬೆಂಗಳೂರು