ಪದ್ಯಕಾಲ

Contributed byvidyarashmi.bhat@timesgroup.com|Vijaya Karnataka
poetic time exploring the relationship between mine and yours
ಸರ್ವನಾಮ

--
ನನ್ನನ್ನು ‘ನೀನು’ ಎಂದರೂ,

ನಿನ್ನನ್ನು ‘ನಾನು’ ಎಂದರೂ,

ನಾನು ಮತ್ತು ನೀನು

ನಾವೇ ಆಗಿರುತ್ತೇವೆ.

ಸರ್ವನಾಮಗಳೆಲ್ಲಹಾಗೆಯೇ.

‘ನಾನು’ ಒಂದು ಉಚ್ಚಾರ ಮಾತ್ರವಲ್ಲ,

ಅಹಂ ಕೂಡ.

‘ನೀನು’ ಒಂದು ಸಂಬೋಧನೆಯಷ್ಟೇ ಅಲ್ಲ,

ಇನ್ನೊಂದು ಆತ್ಮ.

‘ಅವನು’, ‘ಅವಳು’, ‘ಅವರು’, ‘ಅದು’ -

ಅಂತರವನ್ನು ಹೇಳಲು

ಕಂಡುಕೊಂಡ ಮಾಪಕಗಳು

ನದಿ ತನ್ನನ್ನು ‘ನಾನು’ ಎನ್ನುವುದಿಲ್ಲ;

ಸಮುದ್ರವನ್ನು ‘ನೀನು’ ಎಂದು ಧಿಕ್ಕರಿಸುವುದಿಲ್ಲ;

ಹರಿಯುವುದೇ ಅದರ ಗುರುತು.

ಮರ ತನ್ನ ನೆರಳನ್ನು

ಯಾರ ಹೆಸರಿಗೂ ಬರೆಯುವುದಿಲ್ಲ;

ಗಾಳಿ ಯಾವ ಸರ್ವನಾಮವನ್ನೂ ಕಡೆಗಣಿಸುವುದಿಲ್ಲ.

ಚಿತೆಯ ಬೆಂಕಿ ಕೇಳುವುದಿಲ್ಲ,

‘ಇವನು ಯಾರು?’ ‘ಅವನು ಯಾರು?’ ಇತ್ಯಾದಿ.

ಅದು ಹೆಸರನ್ನೂ ಸುಡುತ್ತದೆ;

ಸರ್ವನಾಮವನ್ನೂ ಸುಡುತ್ತದೆ;

ಅಹಂಕಾರವನ್ನೂ ಸುಡುತ್ತದೆ,

ಆಗ ಅದು ಸರ್ವರ ನಾಮವಾಗುತ್ತದೆ...

-ರೇವಣಸಿದ್ಧಪ್ಪ ಜಿ.ಆರ್ .