ಹಯಗ್ರೀವ 1

Contributed byShridevi Ambekallu|Vijaya Karnataka
the temple of all knowledge the glory of lord hayagriva
ಸರ್ವವಿದ್ಯಾ ಪ್ರದಾಯಕ ಶ್ರೀ ಹಯಗ್ರೀವ ದೇವರು

----------------------
ಮನೋಹರ ಜೋಶಿ

----------------

ಜ್ಞಾನಾನಂದಮಯಂ ದೇವಂ ನಿರ್ಮಲಸ್ಫಟಿಕಾಕೃತಿಮ್ |

ಆಧಾರಂ ಸರ್ವವಿದ್ಯಾನಾಂ ಹಯಗ್ರೀವಮುಪಾಸ್ಮಹೇ ||

ಭಾರತ ದೇಶವು ಜ್ಞಾನ ಿಗಳ ಸಮೂಹದಿಂದ ಜ್ಞಾನಭೂಮಿಯೂ, ಅನೇಕ ಮಹಾತ್ಮರ ತಪಸ್ಸಿನ ಫಲದಿಂದ ತಪೋಭೂಮಿಯೂ, ದೇವತೆಗಳ ಅವತಾರಗಳಿಂದ ದೇವಭೂಮಿಯೂ ಆಗಿದೆ. ಈ ಪವಿತ್ರ ಭರತಖಂಡದಲ್ಲಿಭಗವಂತನು ಲೋಕಕಲ್ಯಾಣಕ್ಕಾಗಿ ಕಾಲಕಾಲಕ್ಕೆ ವಿವಿಧ ಅವತಾರಗಳನ್ನು ತಾಳಿ ಧರ್ಮವನ್ನು ಮೇರು ಪರ್ವತದಂತೆ ಎತ್ತಿಹಿಡಿದು, ಲೋಕಕ್ಕೆ ಜ್ಞಾನ ಮತ್ತು ಸನ್ಮಾರ್ಗವನ್ನು ಬೋಧಿಸಿದ್ದಾನೆ.

ಭಗವಂತನ ಅನೇಕ ಅವತಾರಗಳಲ್ಲಿಜ್ಞಾನಮುದ್ರೆಯ ಸ್ವರೂಪವಾದ ಶ್ರೀ ಹಯಗ್ರೀವ ಅವತಾರವು ಅತ್ಯಂತ ಮಹತ್ವಪೂರ್ಣವಾದದ್ದು. ಶ್ರೀ ಹಯಗ್ರೀವ ದೇವರು ಸರ್ವವಿದ್ಯಾ ಪ್ರದಾಯಕರು. ಜ್ಞಾನ, ವಿದ್ಯೆ, ಬುದ್ಧಿ ಮತ್ತು ವಾಕ್ಶಕ್ತಿಯನ್ನು ಅನುಗ್ರಹಿಸುವ ಜ್ಞಾನಾವತಾರವೇ ಶ್ರೀ ಹಯಗ್ರೀವ ದೇವರ ಅವತಾರ.

ಶ್ರಾವಣ ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು ಶ್ರೀ ಹಯಗ್ರೀವ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಪರಮಾತ್ಮನು ಶ್ರೀ ಹಯಗ್ರೀವ ರೂಪದಲ್ಲಿಪ್ರಕಟನಾಗಿ, ತನ್ನ ಉಸಿರಿನಿಂದಲೇ ಸಮಸ್ತ ವೇದ ರಾಶಿಗಳು, ಪುರಾಣಗಳು, ಪಂಚರಾತ್ರಗಳು, ಸ್ತೋತ್ರಗಳು, ಶ್ಲೋಕಗಳು ಮೊದಲಾದ ಜ್ಞಾನಸಂಪತ್ತನ್ನು ಉದ್ಭವಗೊಳಿಸಿದನೆಂದು ಶಾಸ್ತ್ರಗಳಲ್ಲಿವರ್ಣಿಸಲಾಗಿದೆ. ವೇದ-ಉಪನಿಷತ್ತುಗಳು ಭಾರತೀಯ ಸಂಸ್ಕೃತಿಯ ಉಸಿರಿನಂತಿದ್ದು, ಅವು ಸಾರುವ ಸನಾತನ ಜ್ಞಾನಜ್ಯೋತಿ ಇಂದಿಗೂ ಜಗತ್ತಿನಾದ್ಯಂತ ನಿರಂತರವಾಗಿ ಬೆಳಗುತ್ತಲೇ ಇದೆ.

ಚತುರ್ಮುಖ ಬ್ರಹ್ಮದೇವರು ನಿತ್ಯವೂ ಶ್ರೀ ಹಯಗ್ರೀವ ರೂಪವನ್ನು ಸ್ಮರಿಸುತ್ತಾರೆ ಎಂದು ಪುರಾಣಗಳು ತಿಳಿಸುತ್ತವೆ. ಜ್ಞಾನಪ್ರದಾಯಕನಾದ ಶ್ರೀ ಹಯಗ್ರೀವ ದೇವರನ್ನು ಪ್ರತಿಯೊಬ್ಬರೂ ಭಕ್ತಿಯಿಂದ ಆರಾಧಿಸಬೇಕು. ವಿಶ್ವಗುರು ಶ್ರೀ ಮಧ್ವಾಚಾರ್ಯರು ತಮ್ಮ ತಂತ್ರಸಾರಸಂಗ್ರಹ ಗ್ರಂಥದಲ್ಲಿಶ್ರೀ ಹಯಗ್ರೀವ ಮಂತ್ರವನ್ನು ಉಪಾಸಿಸಬೇಕೆಂದು ತಿಳಿಸಿದ್ದಾರೆ.

ಶ್ರೀ ಹಯಗ್ರೀವ ದೇವರ ಮಂಗಳ ರೂಪ

ಶ್ರೀ ಹಯಗ್ರೀವ ದೇವರು ಶುಭ್ರವರ್ಣದ ಕುದುರೆಯ ಮುಖ ಹಾಗೂ ವಿಷ್ಣುವಿನ ದಿವ್ಯ ದೇಹವನ್ನು ಹೊಂದಿರುವ ಜ್ಞಾನಸ್ವರೂಪಿಯಾದ ಪರಮಾತ್ಮನ ರೂಪ. ಹಯಗ್ರೀವ ದೇವರನ್ನು ಭಕ್ತಿಯಿಂದ ಸ್ಮರಿಸುವುದರಿಂದ ಸಕಲ ಸತ್ಕಾಮನೆಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ. ಅವರ ಅನುಗ್ರಹದಿಂದ ಬುದ್ಧಿಶಕ್ತಿ, ವಾಕ್ಶಕ್ತಿ, ಜ್ಞಾನ ಮತ್ತು ಶಿಕ್ಷಣದ ಸಾಮರ್ಥ್ಯ ವೃದ್ಧಿಯಾಗುತ್ತದೆ.

ಶ್ರೀ ಹಯಗ್ರೀವ ದೇವರು ವೇದವಿದ್ಯಾಭಿಮಾನಿ ದೇವತೆ ಹಾಗೂ ಭಗವಂತನ ಜ್ಞಾನಾವತಾರ. ತಮೋಗುಣ ಮತ್ತು ರಜೋಗುಣಗಳನ್ನು ನಿಯಂತ್ರಿಸಿ, ಸಾತ್ವಿಕ ಗುಣಗಳನ್ನು ಶ್ರೀ ಹಯಗ್ರೀವ ದೇವರು ಅನುಗ್ರಹಿಸುತ್ತಾರೆ.

ಆಚರಣೆ ಹೇಗೆ?

ಶ್ರೀ ಹಯಗ್ರೀವ ಜಯಂತಿಯಂದು ಸೂರ್ಯೋದಯದ ಸಂದರ್ಭದಲ್ಲಿಸೂರ್ಯನಿಗೆ ಅಘ್ರ್ಯವನ್ನು ಅರ್ಪಿಸಿ, ಶ್ರೀ ಹಯಗ್ರೀವ ದೇವರನ್ನು ಧ್ಯಾನಿಸಿ ಪೂಜಿಸುವುದು ಶ್ರೇಯಸ್ಕರ. ಈ ದಿನ ಹಯಗ್ರೀವ ದಂಡಕವನ್ನು ಪಠಿಸುವುದು ಹಾಗೂ ಹಯಗ್ರೀವ ಮಂತ್ರವನ್ನು ಸಾವಿರ ಬಾರಿ ಜಪಿಸುವುದು ವಿಶೇಷ ಫಲಪ್ರದವೆಂದು ಶಾಸ್ತ್ರಗಳಲ್ಲಿಉಲ್ಲೇಖಿಸಲಾಗಿದೆ.

ಶ್ರೀ ಹಯಗ್ರೀವ ಜಯಂತಿಯಂದು ಶ್ರೀ ಹಯಗ್ರೀವ ದೇವರನ್ನು ವಿಶೇಷವಾಗಿ ಪೂಜಿಸಿ, ಕಡಲೆಬೇಳೆ ಕೋಸಂಬರಿ, ಕಡಲೆಬೇಳೆ ಹಯಗ್ರೀವ ಪಾಯಸ ಮೊದಲಾದ ನೈವೇದ್ಯಗಳನ್ನು ಭಕ್ತಿಯಿಂದ ಸಮರ್ಪಿಸಿ, ಅಘ್ರ್ಯವನ್ನು ಅರ್ಪಿಸುವ ಸಂಪ್ರದಾಯವಿದೆ. ವಿಶೇಷವಾಗಿ ವಿದ್ಯಾರ್ಥಿಗಳು, ವಿದ್ಯಾಭ್ಯಾಸದಲ್ಲಿತೊಡಗಿರುವವರು ಹಾಗೂ ಜ್ಞಾನವನ್ನು ಬಯಸುವವರು ಶ್ರೀ ಹಯಗ್ರೀವ ದೇವರ ಅನುಗ್ರಹವನ್ನು ಪಡೆದುಕೊಳ್ಳುವುದು ಅತ್ಯಂತ ಶ್ರೇಯಸ್ಕರ.

ಶ್ರೀ ವಾದಿರಾಜ ತೀರ್ಥ ಪೂಜ್ಯ ಚರಣರು ತಮ್ಮ ಕೃತಿಗಳಲ್ಲಿಶ್ರೀ ಹಯಗ್ರೀವ ರೂಪದ ಧ್ಯಾನಕ್ರಮವನ್ನು ಅತ್ಯಂತ ಸುಂದರವಾಗಿ ವಿವರಿಸಿದ್ದಾರೆ. ಶ್ರೀ ವಾದಿರಾಜ ತೀರ್ಥರು ಶ್ರೀ ಹಯಗ್ರೀವ ದೇವರ ಪರಮಭಕ್ತರಾಗಿದ್ದು, ಅವರ ಆರಾಧನಾ ಪರಂಪರೆಯಲ್ಲಿಹಯಗ್ರೀವ ಉಪಾಸನೆಗೆ ವಿಶೇಷ ಸ್ಥಾನವಿದೆ.