ಪ್ರತಿಯೊಬ್ಬರೂ ಪವಿತ್ರ ಮನೋಭಾವದೊಂದಿಗೆ ನಿಷ್ಠೆ, ಭಕ್ತಿ ಮತ್ತು ಸಮಾಜಸೇವೆಗೆ ತನ್ನ ಜೀವನವನ್ನು ಸಮರ್ಪಿಸುವ ಮೂಲಕ ಮುಕ್ತಿ ಮಾರ್ಗ ಕಂಡುಕೊಳ್ಳಬೇಕು ಎಂದು ಗೋಕಾಕ ತಾಲೂಕಿನ ಕರಪಟ್ಟಿ ಆಶ್ರಮದ ಶ್ರೀ ಬಸವರಾಜ ಸ್ವಾಮೀಜಿ ಕರೆ ನೀಡಿದರು.ತಾಲೂಕಿನ ಅಂಕಲಿ ಗ್ರಾಮದಲ್ಲಿಶಿವಾಲಯ ಸಮಿತಿ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ಪ್ರಭಾಕರ ಕೋರೆ ಅವರ ಮಾರ್ಗದರ್ಶನದಲ್ಲಿಆಯೋಜಿಸಿದ್ದ ಶ್ರಾವಣ ಮಾಸದ ಧಾರ್ಮಿಕ ಪ್ರವಚನ ಕಾರ್ಯಕ್ರಮ ‘ಶರಣರ ಚರಿತ್ರಾಮೃತ’ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
‘‘ಲೌಕಿಕ ಪ್ರಪಂಚದ ಮೋಹದಲ್ಲಿಬಿದ್ದು ಆಸ್ತಿ ಹಾಗೂ ಅಧಿಕಾರದ ಬೆನ್ನತ್ತಿದ ಮಾನವನಿಗೆ, ತನ್ನೊಳಗಿನ ಆತ್ಮಾನಂದದ ಅರಿವಾದಾಗ ಮಾತ್ರ ನೈಜ ಶಾಂತಿ ಲಭ್ಯ. ಅಜ್ಞಾನದ ಪರದೆ ಸರಿಸಿ, ಅನಗತ್ಯ ವಿಷಯಗಳನ್ನು ತೊರೆದು, ಸನ್ಮಾರ್ಗದಲ್ಲಿನಡೆದರೆ ಜನ್ಮಾಂತರದ ಸದ್ಗತಿ ಪ್ರಾಪ್ತಿಯಾಗುತ್ತದೆ,’’ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಪಂ ಮಾಜಿ ಸದಸ್ಯ ಸುರೇಶ ಪಾಟೀಲ್ ಮಾತನಾಡಿ, ‘‘ಸನ್ಮಾರ್ಗದಲ್ಲಿಸಾಗಲು ಗುರುವಿನ ಕೃಪೆ ಅಗತ್ಯ. ಇಂದಿನ ಧಾವಂತದ ಜೀವನದಲ್ಲಿಹಳ್ಳಿಗಳಲ್ಲಿಸೌಹಾರ್ದತೆ ಕಡಿಮೆಯಾಗುತ್ತಿದೆ. ಪ್ರಕೃತಿಯಲ್ಲಿಸ್ವಚ್ಛಂದವಾಗಿ ಬಾಳುವ ಹಕ್ಕಿಗಳಿಂದ ಮನುಷ್ಯ ಪರೋಪಕಾರದ ಗುಣ ಕಲಿಯಬೇಕಿದೆ,’’ ಎಂದರು.