ಹರೀಶ್ ನ್ಯೂ ಪು. 3 ಬಾಟಂ

Contributed byShridevi Ambekallu|Vijaya Karnataka
spiritual secrets and abundance of serpent worship
ನಾಗಾರಾಧನೆಯ ಆಧ್ಯಾತ್ಮಿಕ ರಹಸ್ಯ

----------------------
ದೈವಜ್ಞ ಹರೀಶ್ ಕಾಶ್ಯಪ

-------------

ನಾಗಾರಾಧನೆ ಎಂದರೆ ಕೇವಲ ನಾಗನನ್ನು ಪೂಜಿಸುವ ಆಚರಣೆಯಲ್ಲ. ನಮ್ಮ ಧಾರ್ಮಿಕ ಪರಂಪರೆಯಲ್ಲಿನಾಗಶಕ್ತಿಗೆ ವಿಶಿಷ್ಟವಾದ ಆಧ್ಯಾತ್ಮಿಕ ಹಾಗೂ ಸಾಂಕೇತಿಕ ಸ್ಥಾನವಿದೆ. ಜೀವಸೃಷ್ಟಿಯಲ್ಲಿರುವ ಶಕ್ತಿಯ ವಿವಿಧ ರೂಪಗಳಲ್ಲಿನಾಗಶಕ್ತಿಯನ್ನೂ ಪರಿಗಣಿಸಲಾಗಿದೆ.

----

ನಮೋ ಅಸ್ತು ಸರ್ಪೇಭ್ಯೋ ಯೇ ಕೇ ಚ ಪೃಥಿವೀಮನು |

ಯೇ ಅಂತರಿಕ್ಷೇ ಯೇ ದಿವಿ ತೇಭ್ಯಃ ಸರ್ಪೇಭ್ಯೋ ನಮಃ ||

ಭೂಮಂಡಲದಲ್ಲಿರುವ ಸರ್ಪಗಳಿಗೆ, ವಾಯುಮಂಡಲದಲ್ಲಿರುವ ಸರ್ಪಗಳಿಗೆ , ನಭೋಮಂಡಲದಲ್ಲಿರುವ ಸರ್ಪಗಳಿಗೆ ನಮಸ್ಕಾರ... ಎಂಬ ಅರ್ಥವನ್ನು ನೀಡುವ ಈ ಮಂತ್ರವು ನಾಗಾರಾಧನೆಯ ಪ್ರಾಚೀನತೆಯನ್ನು ಸಾರುತ್ತದೆ. ವೇದಕಾಲದಲ್ಲಿಯೇ ಸರ್ಪಗಳ ಆರಾಧನೆಗೆ ಮಹತ್ವವಿತ್ತು ಎಂಬುದಕ್ಕೆ ಈ ಮಂತ್ರವು ಸಾಕ್ಷಿಯಾಗಿದೆ.

ನಾಗಾರಾಧನೆಯ ಹಿನ್ನೆಲೆ

ದೇವ, ದಾನವ, ಮನುಷ್ಯ ಮೊದಲಾದ ಎಂಟು ವಿಧದ ಜೀವಸೃಷ್ಟಿಗಳಲ್ಲಿನಾಗರೂ ಒಂದು ಪ್ರಭೇದವೆಂದು ಪುರಾಣಗಳು ವಿವರಿಸುತ್ತವೆ. ಶ್ರೀಮನ್ನಾರಾಯಣನ ಪ್ರದ್ಯುಮ್ನ ಮತ್ತು ಸಂಕರ್ಷಣ ರೂಪಗಳಿಗೆ ಸಂಬಂಧಿಸಿದ ನಾಗದೇವತೆಗಳ ಸೃಷ್ಟಿಯ ಉಲ್ಲೇಖವೂ ಧಾರ್ಮಿಕ ಗ್ರಂಥಗಳಲ್ಲಿಕಂಡುಬರುತ್ತದೆ. ಆದ್ದರಿಂದ ನಾಗಾರಾಧನೆಯನ್ನು ಸರ್ಪಪೂಜೆಯೆಂದು ಮಾತ್ರ ಪರಿಗಣಿಸದೆ, ಶ್ರೀವಿಷ್ಣು, ಮಹಾದೇವ ಅಥವಾ ಸುಬ್ರಹ್ಮಣ್ಯ ದೇವರ ಸಾನ್ನಿಧ್ಯ ಹಾಗೂ ಅವರ ಪರಿವಾರದ ದೇವತೆಗಳೊಂದಿಗೆ ಸಂಬಂಧಿಸಿದ ಆರಾಧನಾ ಪರಂಪರೆಯಾಗಿ ನೋಡುವುದು ಶಾಸ್ತ್ರ ಸಮ್ಮತವೆಂದು ಪರಿಗಣಿಸಲಾಗಿದೆ.

ನಾಗಶಕ್ತಿ ಮತ್ತು ದೇಹದ ಪ್ರಾಣಶಕ್ತಿ

ಭಾರತೀಯ ಯೋಗ ಮತ್ತು ಆಯುರ್ವೇದ ಪರಂಪರೆಯಲ್ಲಿಮಾನವ ದೇಹವನ್ನು ಕೇವಲ ಸ್ಥೂಲ ಶರೀರವೆಂದು ಪರಿಗಣಿಸಲಾಗುವುದಿಲ್ಲ. ದೇಹದಲ್ಲಿಕಾರ್ಯನಿರ್ವಹಿಸುವ ಪ್ರಾಣಶಕ್ತಿಗೂ ಮಹತ್ವ ನೀಡಲಾಗಿದೆ. ಪಂಚಪ್ರಾಣಗಳ ಜೊತೆಗೆ ಪಂಚ ಉಪಪ್ರಾಣಗಳನ್ನೂ ಶಾಸ್ತ್ರಗಳು ವಿವರಿಸುತ್ತವೆ. ಅವುಗಳಲ್ಲಿನಾಗ, ಕೂರ್ಮ, ದೇವದತ್ತ, ಕೃಕರ ಮತ್ತು ಧನಂಜಯ ಎಂಬ ಉಪಪ್ರಾಣಗಳ ಉಲ್ಲೇಖವಿದೆ.

ಇವು ದೇಹದ ವಿವಿಧ ಕ್ರಿಯೆಗಳಿಗೆ ಸಂಬಂಧಿಸಿದ ಸೂಕ್ಷ್ಮ ಶಕ್ತಿಗಳೆಂದು ಪರಿಗಣಿಸಲಾಗಿದೆ. ಈ ದೃಷ್ಟಿಯಿಂದ ‘ನಾಗ’ ಎಂಬುದು ಕೇವಲ ಒಂದು ಜೀವಿಯ ಹೆಸರಲ್ಲ; ದೇಹ ಮತ್ತು ಚೈತನ್ಯದಲ್ಲಿಕಾರ್ಯನಿರ್ವಹಿಸುವ ಒಂದು ಸೂಕ್ಷ್ಮ ಶಕ್ತಿಯ ಪ್ರತೀಕವೂ ಆಗಿದೆ.

ರಾಹುಧಿ ಕೇತು ಮತ್ತು ನಾಗಶಕ್ತಿ

ಜ್ಯೋತಿಷ ಶಾಸ್ತ್ರದಲ್ಲಿರಾಹು ಮತ್ತು ಕೇತುಗಳನ್ನು ಛಾಯಾಗ್ರಹಗಳೆಂದು ಕರೆಯಲಾಗುತ್ತದೆ. ನಾಗಶಕ್ತಿಯೊಂದಿಗೆ ಅವುಗಳಿಗೆ ಸಾಂಕೇತಿಕ ಸಂಬಂಧವನ್ನು ಕಲ್ಪಿಸಲಾಗಿದೆ.

ಜಾತಕದಲ್ಲಿರಾಹುಧಿಧಿ-ಕೇತುಗಳ ಸ್ಥಾನ, ಅವುಗಳ ಮೇಲೆ ಬೀರುವ ಗ್ರಹದೃಷ್ಟಿ ಹಾಗೂ ಶನಿ, ಕುಜ ಮೊದಲಾದ ಗ್ರಹಗಳ ಸ್ಥಿತಿಗತಿಗಳನ್ನು ಆಧರಿಸಿ ಜ್ಯೋತಿಷಿಗಳು ವ್ಯಕ್ತಿಯ ಜಾತಕದಲ್ಲಿನ ಫಲ-ದೋಷಗಳನ್ನು ನಿರ್ಧರಿಸುತ್ತಾರೆ. ಇವುಗಳಲ್ಲಿದೈಹಿಕ ಶಕ್ತಿ, ಜೀರ್ಣಕ್ರಿಯೆ, ಮನಸ್ಸಿನ ಚಂಚಲತೆ, ಅತಿಯಾದ ಚಿಂತನೆ, ಹಠ, ಕಾಮನೆ, ಮದ- ಮತ್ಸರ ಮುಂತಾದ ಪ್ರವೃತ್ತಿಗಳ ಜೊತೆಗೆ ಜ್ಞಾನ, ಆಧ್ಯಾತ್ಮಿಕ ಆಸಕ್ತಿ, ಯೋಗಸಾಧನೆ, ನಾಯಕತ್ವ ಮತ್ತು ಸಾಧನಾ ಮನೋಭಾವಗಳನ್ನೂ ಒಳಗೊಂಡಂತೆ ವಿವಿಧ ಫಲಗಳನ್ನು ಪರಿಗಣಿಸಲಾಗುತ್ತದೆ.

ನಾಗದರ್ಶನ ಮತ್ತು ಸರ್ಪಸಂಬಂಧಿ ಸಂಕೇತಗಳು

ಭಾರತೀಯ ಸಂಪ್ರದಾಯದಲ್ಲಿಸರ್ಪಕ್ಕೆ ಆಧ್ಯಾತ್ಮಿಕ ಹಾಗೂ ಸಾಂಕೇತಿಕ ಅರ್ಥಗಳಿವೆ. ಆದ್ದರಿಂದ ಸರ್ಪದರ್ಶನ, ಕನಸಿನಲ್ಲಿಸರ್ಪ ಕಾಣಿಸಿಕೊಳ್ಳುವುದು ಮೊದಲಾದ ಅನುಭವಗಳನ್ನು ಜನಪದ ಮತ್ತು ಜ್ಯೋತಿಷ ಪರಂಪರೆಯಲ್ಲಿಹಲವು ರೀತಿಯಲ್ಲಿವ್ಯಾಖ್ಯಾನಿಸಲಾಗಿದೆ.

ಪ್ರತ್ಯಕ್ಷವಾಗಿ ಸರ್ಪ ಕಾಣಿಸಿಕೊಳ್ಳುವುದು

ಪದೇಪದೆ ಸರ್ಪಗಳು ಕಾಣಿಸಿಕೊಳ್ಳುವುದನ್ನು ಕೆಲವು ಜ್ಯೋತಿಷ ಪರಂಪರೆಗಳು ವ್ಯಕ್ತಿಯೊಳಗಿನ ಅತಿಯಾದ ಆಸಕ್ತಿ, ಉದ್ವೇಗ, ಹಠ, ದರ್ಪ ಇವೇ ಮೊದಲಾ ಪ್ರವೃತ್ತಿಗಳೊಂದಿಗೆ ಸಂಕೇತಿಸುತ್ತದೆ ಎಂದು ಹೇಳುತ್ತಾರೆ. ಆದರೆ ಇಂತಹ ಅನುಭವಗಳನ್ನು ಕೇವಲ ಒಂದು ಕಾರಣಕ್ಕೆ ಸೀಮಿತಗೊಳಿಸದೆ, ವ್ಯಕ್ತಿಯ ಜೀವನ ಪರಿಸ್ಥಿತಿ ಮತ್ತು ಜಾತಕದ ಒಟ್ಟಾರೆ ಸ್ಥಿತಿಯನ್ನು ಪರಿಗಣಿಸಿಯೇ ಅರ್ಥೈಸಬೇಕು.

ಕನಸಿನಲ್ಲಿಸರ್ಪದರ್ಶನ

ಇದು ಅತಿಯಾದ ಚಿಂತನೆ, ಮನಸ್ಸಿನ ಒತ್ತಡ, ಒಳಗೊಳಗಿನ ಭಯವನ್ನು ಸೂಚಿಸುತ್ತದೆ. ಆದರೆ ಕನಸಿನ ಆಧಾರದ ಮೇಲೆ ಯಾವುದೇ ದೈಹಿಕ ಅಥವಾ ಮಾನಸಿಕ ಸಮಸ್ಯೆಗೆ ನೇರ ಕಾರಣ ಎಂದು ಹೇಳುವುದು ಸೂಕ್ತವಲ್ಲ.

ನಾಗಶಕ್ತಿಯ ಸಕಾರಾತ್ಮಕ ಆಯಾಮ

ನಾಗ, ರಾಹು-ಕೇತುಗಳಿಗೆ ಸಂಬಂಧಿಸಿದಂತೆ ದೋಷಗಳಷ್ಟೇ ಅಲ್ಲ, ಹಲವು ಸಕಾರಾತ್ಮಕ ಗುಣಗಳನ್ನೂ ಉಲ್ಲೇಖಿಸಲಾಗಿದೆ. ದೃಢವಾದ ಶರೀರ, ಉತ್ತಮ ವಾಕ್ಚಾತುರ್ಯ, ಕಲೆ ಮತ್ತು ಕಲ್ಪನಾಶಕ್ತಿ, ದೇವರು ಮತ್ತು ಗುರುಗಳ ಮೇಲಿನ ನಿಷ್ಠೆ, ಯೋಗಸಾಧನೆ, ಆಧ್ಯಾತ್ಮಿಕ ಪ್ರವೃತ್ತಿ, ಕಠಿಣ ವ್ರತ, ಉಪವಾಸಗಳನ್ನು ಪಾಲಿಸುವ ಸಾಮರ್ಥ್ಯ, ಏಕಾಗ್ರತೆ, ನಾಯಕತ್ವ ಗುಣ, ಸಾಧನಾ ಮನೋಭಾವ ಹಾಗೂ ಮೋಕ್ಷ ಮಾರ್ಗದತ್ತ ಆಸಕ್ತಿ ಮೊದಲಾದ ಗುಣಗಳನ್ನೂ ನಾಗಶಕ್ತಿಯ ಸಾಂಕೇತಿಕ ಅಭಿವ್ಯಕ್ತಿಗಳೆಂದು ಪರಿಗಣಿಸಲಾಗಿದೆ.

ಹೀಗಾಗಿ ನಾಗಾರಾಧನೆಯ ಉದ್ದೇಶ ಕೇವಲ ‘ದೋಷ ಪರಿಹಾರ’ವಲ್ಲ. ನಮ್ಮೊಳಗಿನ ಶಕ್ತಿ, ಸಂಯಮ, ಆಧ್ಯಾತ್ಮಿಕ ಚೈತನ್ಯ ಮತ್ತು ಪ್ರಕೃತಿಯೊಂದಿಗೆ ಇರುವ ಸಂಬಂಧವನ್ನು ಅರಿತುಕೊಳ್ಳುವುದೂ ನಾಗಾರಾಧನೆಯ ಒಂದು ಮಹತ್ವದ ಸಂದೇಶವಾಗಿದೆ.

ನಾಗದೋಷ ಪರಿಹಾರ ಹೇಗೆ?

ಜ್ಯೋತಿಷ ಪರಂಪರೆಯಲ್ಲಿನಾಗದೋಷ ಅಥವಾ ಸರ್ಪದೋಷವಿದೆ ಎಂದು ತಿಳಿದುಬಂದಲ್ಲಿ, ಆತುರದಿಂದ ಯಾವುದೇ ಆಚರಣೆಗಳನ್ನು ಕೈಗೊಳ್ಳುವುದಕ್ಕಿಂತ ಮೊದಲು ಶಾಸ್ತ್ರಜ್ಞರ ಸಲಹೆ ಪಡೆಯುವುದು ಸೂಕ್ತ. ಬಾಲ್ಯದಲ್ಲಿಯೇ ಅಥವಾ ಸೂಕ್ತ ಸಮಯದಲ್ಲಿಜಾತಕವನ್ನು ಶಾಸ್ತ್ರಜ್ಞರಿಂದ ಪರಿಶೀಲಿಸಿ, ಅಗತ್ಯವಿದ್ದರೆ ನಾಗಸಂಬಂಧಿ ಪೂಜೆ, ಪ್ರಾಯಶ್ಚಿತ್ತ, ರಕ್ಷೆ ಹಾಗೂ ವಾರ್ಷಿಕ ಆರಾಧನೆಗಳನ್ನು ಕುಟುಂಬದ ಸಂಪ್ರದಾಯ ಮತ್ತು ಶಾಸ್ತಾ್ರನುಸಾರವಾಗಿ ನೆರವೇರಿಸಬಹುದು.