ಪ್ರಚಲಿತ-ಪುಟ 5

Contributed byPanchami M S|Vijaya Karnataka
brics tourism ministers meeting jaipur declaration announcement in jaipur
ಜೈಪುರ ಘೋಷಣೆ

ಇತ್ತೀಚಿಗೆ ಬ್ರಿಕ್ಸ್ ಪ್ರವಾಸೋದ್ಯಮ ಸಚಿವರ ಸಭೆಯಲ್ಲಿಜೈಪುರ ಘೋಷಣೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ರಾಜಸ್ಥಾನದ ಜೈಪುರದಲ್ಲಿನಡೆದ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಹಿಸಿದ್ದರು. 2026ರಲ್ಲಿಭಾರತದ ಅಧ್ಯಕ್ಷತೆಯಡಿ ನಡೆದ ಬ್ರಿಕ್ಸ್ ಪ್ರವಾಸೋದ್ಯಮ ಚಟುವಟಿಕೆಗಳ ಅಂತಿಮ ಹಂತವಾಗಿ ಈ ಸಭೆ ನಡೆದಿತ್ತು.
ಎಐ ಬಳಕೆ: ‘ಜೈಪುರ ಘೋಷಣೆ’ಯಲ್ಲಿಎಐ ಮತ್ತು ಡಿಜಿಟಲ್ ತಂತ್ರಜ್ಞಾನಗಳ ಜವಾಬ್ದಾರಿಯುತ, ಸುರಕ್ಷಿತ ಹಾಗೂ ಮಾನವಕೇಂದ್ರಿತ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರವಾಸಿ ತಾಣಗಳ ಯೋಜನೆ, ನಿರ್ವಹಣೆ, ಪ್ರವಾಸಿಗರ ಸೇವೆ, ಬಹುಭಾಷಾ ಸಂವಹನ ಮತ್ತು ಪ್ರಯಾಣವನ್ನು ಸುಗಮಗೊಳಿಸುವ ವ್ಯವಸ್ಥೆಗಳಲ್ಲಿಎಐ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವ ಕುರಿತು ಬ್ರಿಕ್ಸ್ ರಾಷ್ಟ್ರಗಳು ಸಹಕಾರ ನೀಡಲಿವೆ. ತಂತ್ರಜ್ಞಾನದ ಬೆಳವಣಿಗೆಯನ್ನು ಪ್ರವಾಸಿಗರಿಗೆ ಉತ್ತಮ ಅನುಭವ ನೀಡಲು ಬಳಸುವುದರ ಜೊತೆಗೆ, ಪ್ರವಾಸೋದ್ಯಮದ ನಿರ್ವಹಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುವ ಉದ್ದೇಶವೂ ಘೋಷಣೆಯಲ್ಲಿದೆ.

ನಾಲ್ಕು ಪ್ರಮುಖ ಆದ್ಯತೆ: ಬ್ರಿಕ್ಸ್ ಪ್ರವಾಸೋದ್ಯಮ ಸಚಿವರ 2026ರ ಸಂವಹನವಾಗಿರುವ ಜೈಪುರ ಘೋಷಣೆಯಲ್ಲಿನಾಲ್ಕು ಪ್ರಮುಖ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ. ಎಐ ಮತ್ತು ಪ್ರವಾಸೋದ್ಯಮ, ಸುಸ್ಥಿರ ಹಾಗೂ ಜವಾಬ್ದಾರಿಯುತ ಪ್ರವಾಸೋದ್ಯಮ, ಪ್ರವಾಸೋದ್ಯಮ ಕೌಶಲಾಭಿವೃದ್ಧಿ ಮತ್ತು ಸಾಮರ್ಥ್ಯ ನಿರ್ಮಾಣ, ಪ್ರವಾಸೋದ್ಯಮ ವಿನಿಮಯ ಹಾಗೂ ಸುಗಮ ಪ್ರಯಾಣ ವ್ಯವಸ್ಥೆ ಪ್ರಮುಖ ಆದ್ಯತೆಗಳಾಗಿವೆ. ಪರಿಸರದ ಮೇಲೆ ಕಡಿಮೆ ಪರಿಣಾಮ ಬೀರುವ ರೀತಿಯಲ್ಲಿಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವುದು, ಪ್ರವಾಸೋದ್ಯಮ ಕ್ಷೇತ್ರದಲ್ಲಿಕೆಲಸ ಮಾಡುವವರಿಗೆ ಅಗತ್ಯ ಕೌಶಲಗಳನ್ನು ನೀಡುವುದಕ್ಕೂ ಒತ್ತು ನೀಡಲಾಗಿದೆ.

ಗ್ರಾಮೀಣ ಭಾಗಕ್ಕೂ ಲಾಭ: ಸಭೆಯಲ್ಲಿಮಾತನಾಡಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್ , 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಪ್ರಯಾಣದಲ್ಲಿಪ್ರವಾಸೋದ್ಯಮ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ. ಪ್ರವಾಸೋದ್ಯಮದ ಆರ್ಥಿಕ ಲಾಭವನ್ನು ದೊಡ್ಡ ನಗರಗಳಿಗೆ ಮಾತ್ರ ಸೀಮಿತಗೊಳಿಸದೆ ಪಟ್ಟಣಗಳು, ಗ್ರಾಮಗಳು ಮತ್ತು ದೂರದ ಪ್ರದೇಶಗಳಿಗೂ ವಿಸ್ತರಿಸುವ ಸಾಮರ್ಥ್ಯವಿದೆ. ಪ್ರವಾಸೋದ್ಯಮದ ಬೆಳವಣಿಗೆಯಿಂದ ಹೋಟೆಲ್ ಗಳು, ಹೋಂಸ್ಟೇಗಳು, ಟ್ಯಾಕ್ಸಿ ಚಾಲಕರು, ಪ್ರವಾಸಿ ಮಾರ್ಗದರ್ಶಕರು, ನೇಕಾರರು, ಉದ್ಯಮಿಗಳು ಸೇರಿದಂತೆ ಪ್ರವಾಸೋದ್ಯಮಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಉದ್ಯೋಗ ಮತ್ತು ಆದಾಯದ ಅವಕಾಶಗಳು ಸೃಷ್ಟಿಯಾಗಲಿವೆ ಎಂದಿದ್ದಾರೆ.

ಪ್ರವಾಸಿಗರ ಸಂಖ್ಯೆ ಏರಿಕೆ: ಕಳೆದ ಒಂದು ದಶಕದಲ್ಲಿಭಾರತಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಜೈಪುರ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೂ ಜೈಪುರ ಘೋಷಣೆಯಡಿ ಹೆಚ್ಚಿನ ಪ್ರಯೋಜನವಾಗುವ ನಿರೀಕ್ಷೆಯಿದೆ. ಸಭೆಯಲ್ಲಿಬ್ರಿಕ್ಸ್ ನ ಒಂಬತ್ತು ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಬ್ರೆಜಿಲ್ , ಇರಾನ್ , ದಕ್ಷಿಣ ಆಫ್ರಿಕಾ ಮತ್ತು ಯುಎಇಯ ಪ್ರವಾಸೋದ್ಯಮ ಸಚಿವರು ಸೇರಿದಂತೆ ಚೀನಾ, ಇಥಿಯೋಪಿಯಾ, ಇಂಡೋನೇಷ್ಯಾ ಮತ್ತು ರಷ್ಯಾದ ನಿಯೋಗಗಳ ಮುಖ್ಯಸ್ಥರು ಸಭೆಯಲ್ಲಿಪಾಲ್ಗೊಂಡಿದ್ದರು.