ಸುತ್ತಮುತ್ತ

Contributed byJaya shree|Vijaya Karnataka
severe opposition to kasturirangan report on west ghat environmental sensitive areas
ಕಸ್ತೂರಿರಂಗನ್ ವರದಿ ವಿರೋಧ

ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿಪಶ್ಚಿಮಘಟ್ಟ ಸಂರಕ್ಷಣೆಗೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿಯ ಅನುಷ್ಠಾನವು ಮತ್ತೊಮ್ಮೆ ತೀವ್ರ ರಾಜಕೀಯ ಮತ್ತು ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗಿದೆ. ಕೇಂದ್ರ ಸರಕಾರವು ಜುಲೈ 27ರಂದು ಈ ವರದಿಯ ಅನುಷ್ಠಾನಕ್ಕಾಗಿ ಹೊಸದಾದ (ಏಳನೇ) ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಇದು ರಾಜ್ಯದಲ್ಲಿವ್ಯಾಪಕ ವಿರೋಧ ಹಾಗೂ ಆತಂಕವನ್ನು ಸೃಷ್ಟಿಸಿದೆ. ಹಾಗಿದ್ದರೆ ಯಾವೆಲ್ಲಾಕಾರಣಗಳಿಗೆ ವಿರೋಧಗಳು ವ್ಯಕ್ತವಾಗುತ್ತಿವೆ, ಪ್ರತಿಭಟನಾಕಾರರ ಬೇಡಿಕೆಗಳೇನು ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಜೀವನೋಪಾಯ ಹಾಗೂ ಕೃಷಿಗೆ ಆತಂಕ: ಈ ವರದಿಯ ಪ್ರಕಾರ ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿಬರುವ ಸಾವಿರಾರು ಹಳ್ಳಿಗಳನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಘೋಷಿಸಲು ಶಿಫಾರಸು ಮಾಡಲಾಗಿದೆ. ಇದರಿಂದ ಸ್ಥಳೀಯವಾಗಿ ತೋಟಗಾರಿಕೆ, ಅಡಿಕೆ-ಕಾಫಿ ಕೃಷಿ ಹಾಗೂ ದೈನಂದಿನ ಕೃಷಿ ಚಟುವಟಿಕೆಗಳಿಗೆ ಕಠಿಣ ಕಾನೂನು ತೊಡಕುಗಳು ಎದುರಾಗುತ್ತವೆ ಎಂಬುದು ರೈತರ ಆತಂಕವಾಗಿದೆ.

ಅಭಿವೃದ್ಧಿ ಕಾರ್ಯಗಳಿಗೆ ತಡೆ: ವರದಿ ಜಾರಿಯಾದರೆ ಈ ಪ್ರದೇಶಗಳಲ್ಲಿರಸ್ತೆ ನಿರ್ಮಾಣ, ಸಣ್ಣಪುಟ್ಟ ಮೂಲಭೂತ ಸೌಕರ್ಯ ಅಭಿವೃದ್ಧಿ, ವಾಣಿಜ್ಯ ಮತ್ತು ಖಾಸಗಿ ಕಟ್ಟಡಗಳ ನಿರ್ಮಾಣ ಕಾಮಗಾರಿಗಳು ಸಂಪೂರ್ಣವಾಗಿ ಸ್ತಬ್ಧಗೊಳ್ಳಲಿವೆ. ಇದು ತಮ್ಮ ಮೂಲಭೂತ ಹಕ್ಕುಗಳು ಮತ್ತು ಸ್ವಂತ ಜಮೀನಿನಲ್ಲಿಮನೆ ನಿರ್ಮಿಸಿಕೊಳ್ಳುವ ಸ್ವಾತಂತ್ರ್ಯವನ್ನೂ ಕಸಿದುಕೊಳ್ಳಲಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಉಪಗ್ರಹ ಸಮೀಕ್ಷೆಯ ದೋಷ: ಈ ವರದಿಯನ್ನು ಸಿದ್ಧಪಡಿಸಲು ಕೇವಲ ಉಪಗ್ರಹ ಆಧರಿತ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆಯೇ ವಿನಃ, ವಾಸ್ತವಿಕ ನೆಲದ ಸತ್ಯಾಸತ್ಯತೆಗಳನ್ನು ಪರಿಗಣಿಸಿಲ್ಲಎಂಬುದು ಜನರ ಮುಖ್ಯ ಆರೋಪವಾಗಿದೆ. ಮಾನವ ವಸತಿ ಪ್ರದೇಶಗಳು ಮತ್ತು ಶತಮಾನಗಳಿಂದ ಕೃಷಿ ಮಾಡುತ್ತಾ ಬಂದಿರುವ ತೋಟಗಳನ್ನೂ ಸಹ ಅರಣ್ಯ ಭೂಮಿ ಎಂದು ತಪ್ಪಾಗಿ ಪರಿಗಣಿಸಲಾಗಿದೆ ಎಂಬ ಭಾವನೆ ಜನರಲ್ಲಿದೆ.

ಆರ್ಥಿಕ ಹಿನ್ನಡೆ ಮತ್ತು ಸ್ಥಳಾಂತರದ ಭೀತಿ: ಗಣಿಗಾರಿಕೆ, ಕ್ವಾರಿ ಹಾಗೂ ಸ್ಥಳೀಯ ಆರ್ಥಿಕತೆಗೆ ಆಧಾರವಾಗಿರುವ ಸಣ್ಣ ಕೈಗಾರಿಕೆಗಳನ್ನು ನಿಷೇಧಿಸುವುದರಿಂದ ಸಾವಿರಾರು ಕಾರ್ಮಿಕರು ಮತ್ತು ಸ್ಥಳೀಯರು ಉದ್ಯೋಗ ಕಳೆದುಕೊಂಡು ಬೀದಿಪಾಲಾಗಲಿದ್ದಾರೆ ಹಾಗೂ ತಮ್ಮೂರುಗಳನ್ನು ತೊರೆಯಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂಬ ಭಯ ಕರಾವಳಿ ಮತ್ತು ಮಲೆನಾಡು ಭಾಗದ ಜನರನ್ನು ಕಾಡುತ್ತಿದೆ.

ಬಾಕ್ಸ್

ಏನಿದು ವರದಿ

ವಿಶ್ವದಲ್ಲೇ ಅತ್ಯಂತ ಪ್ರಮುಖ ಜೀವವೈವಿಧ್ಯ ತಾಣವಾಗಿರುವ ಪಶ್ಚಿಮಘಟ್ಟಗಳು ಅರಣ್ಯನಾಶ ಮತ್ತು ಮಾನವ ಚಟುವಟಿಕೆಗಳಿಂದ ತೀವ್ರ ಪರಿಸರ ಹಾನಿಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿಪ್ರಕೃತಿ ವಿಕೋಪಗಳು, ಭೂಕುಸಿತಗಳು ಮತ್ತು ಪರಿಸರ ಸಮತೋಲನ ಹದಗೆಡುವುದನ್ನು ತಡೆಗಟ್ಟಲು ಇಸ್ರೋದ ಮಾಜಿ ಅಧ್ಯಕ್ಷ ಡಾ. ಕೆ. ಕಸ್ತೂರಿರಂಗನ್ ನೇತೃತ್ವದಲ್ಲಿಸಮಿತಿಯನ್ನು ರಚಿಸಲಾಯಿತು. ಸಮಿತಿಯು ತನ್ನ ವರದಿಯನ್ನು 2013ರ ಏಪ್ರಿಲ್ ನಲ್ಲಿಕೇಂದ್ರ ಸರಕಾರಕ್ಕೆ ಸಲ್ಲಿಸಿತು. ಈ ವರದಿ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲವಾದರೂ, ಕೇಂದ್ರವು ಕಾಲಕಾಲಕ್ಕೆ ಕರಡು ಅಧಿಸೂಚನೆಗಳನ್ನು ಪ್ರಕಟಿಸುತ್ತಿರುವುದು ವಿವಾದಕ್ಕೆ ನಾಂದಿ ಹಾಡಿದೆ.

ಬಾಕ್ಸ್

ವರದಿಯ ಪ್ರಮುಖ ಅಂಶಗಳು

ಕರ್ನಾಟಕದ 10 ಜಿಲ್ಲೆಗಳ ಸುಮಾರು 20,668 ಚದರ ಕಿ.ಮೀ ಪ್ರದೇಶವನ್ನು (ರಾಜ್ಯದ ಒಟ್ಟು 56,825.7 ಚದರ ಕಿ.ಮೀ ಪ್ರದೇಶದ ಭಾಗವಾಗಿ) ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಘೋಷಿಸಲು ಶಿಫಾರಸು ಮಾಡಲಾಗಿದೆ. ಈ ವಲಯಗಳಲ್ಲಿಗಣಿಗಾರಿಕೆ, ಕ್ವಾರಿ ಕೆಲಸಗಳು, ಬೃಹತ್ ಕೈಗಾರಿಕೆಗಳು ಮತ್ತು ಉಷ್ಣ ವಿದ್ಯುತ್ ಸ್ಥಾವರಗಳಂತಹ ಪರಿಸರಕ್ಕೆ ಹಾನಿಕರವಾದ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು ಎಂದು ವರದಿ ಸೂಚಿಸುತ್ತದೆ.