Opportunity To Imprison Those Who Provide Vehicles To Minors Davangere Police Alert
ಅಪ್ರಾಪ್ತರಿಗೆ ವಾಹನ ಕೊಟ್ಟವರಿಗೆ ಜೈಲಿಗೆ ಅಟ್ಟಲು ಅವಕಾಶ
Contributed by: Vinayaka Naik P|Vijaya Karnataka•
ಅಪ್ರಾಪ್ತರಿಗೆ ವಾಹನ ನೀಡುವ ಪೋಷಕರಿಗೆ ಕೇವಲ ದಂಡ ಮಾತ್ರವಲ್ಲ, ಜೈಲು ಶಿಕ್ಷೆಯೂ ಕಾದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ರಾಷ್ಟ್ರೀಯ ರಸ್ತೆ ಸಂಚಾರ ಸುರಕ್ಷತಾ ಮಾಸಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಈ ಮಾಹಿತಿ ನೀಡಲಾಗಿದೆ. ಅಪಘಾತ ತಡೆಗಟ್ಟುವುದು ಪೊಲೀಸರ ಮುಖ್ಯ ಉದ್ದೇಶವಾಗಿದೆ. ಮಕ್ಕಳಿಗೆ ವಾಹನ ನೀಡುವ ಮುನ್ನ ಪೋಷಕರು ಎಚ್ಚರ ವಹಿಸಬೇಕು.
ದಾವಣಗೆರೆ: ಅಪ್ರಾಪ್ತರಿಗೆ ವಾಹನಗಳನ್ನು ನೀಡುವ ಪೋಷಕರಿಗೆ ಕೇವಲ ದಂಡ ಮಾತ್ರವಲ್ಲ, ಭಾರತೀಯ ಮೋಟಾರು ವಾಹನ ಕಾಯಿದೆ 181ರ ಅಡಿಯಲ್ಲಿ ಜೈಲು ಶಿಕ್ಷೆ ಕೂಡ ವಿಧಿಸಲು ಅವಕಾಶವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಎಚ್ಚರಿಕೆ ನೀಡಿದ್ದಾರೆ. ರಾಷ್ಟ್ರೀಯ ರಸ್ತೆ ಸಂಚಾರ ಸುರಕ್ಷತಾ ಮಾಸಾಚರಣೆಯ ಅಂಗವಾಗಿ, ಸಂಚಾರಿ ಪೊಲೀಸರ ವಶಕ್ಕೆ ಸಿಕ್ಕ 63 ಅಪ್ರಾಪ್ತರು ಮತ್ತು ಅವರ ಪೋಷಕರಿಗಾಗಿ ಏರ್ಪಡಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಅವರು ಈ ವಿಷಯ ತಿಳಿಸಿದರು. ಸಂಚಾರ ನಿರ್ವಹಣೆ ಮತ್ತು ರಸ್ತೆ ಅಪಘಾತಗಳನ್ನು ತಡೆಗಟ್ಟುವುದು ಪೊಲೀಸರ ಮುಖ್ಯ ಉದ್ದೇಶವಾಗಿದೆ.
18 ವರ್ಷದೊಳಗಿನ ಮಕ್ಕಳಿಗೆ ವಾಹನಗಳನ್ನು ನೀಡುವ ಪೋಷಕರಿಗೆ ಕನಿಷ್ಠ 25,000 ದಿಂದ 40,000 ರೂಪಾಯಿಗಳವರೆಗೆ ದಂಡ ವಿಧಿಸಬಹುದು. ಆದರೆ, ದಂಡ ವಿಧಿಸುವುದಷ್ಟೇ ಪೊಲೀಸರ ಗುರಿಯಲ್ಲ. ಸಂಚಾರ ಸುರಕ್ಷತೆಯನ್ನು ಖಾತ್ರಿಪಡಿಸುವುದು ಮತ್ತು ರಸ್ತೆ ಅಪಘಾತಗಳನ್ನು ತಡೆಯುವುದೇ ಪ್ರಮುಖ ಉದ್ದೇಶವಾಗಿದೆ. ಇಂದು ಹಿಡಿದಿರುವ ಅಪ್ರಾಪ್ತರು ಮತ್ತೆ ವಾಹನ ಚಲಾಯಿಸುವುದು ಕಂಡುಬಂದರೆ, ಸಂಬಂಧಪಟ್ಟವರನ್ನು ನ್ಯಾಯಾಲಯದ ಮೂಲಕ ಜೈಲಿಗೆ ಕಳುಹಿಸಲಾಗುವುದು ಎಂದು ಎಸ್ಪಿ ಉಮಾ ಪ್ರಶಾಂತ್ ಸ್ಪಷ್ಟಪಡಿಸಿದರು.ಮಕ್ಕಳು ವಾಹನ ಚಲಾಯಿಸುವಾಗ ಸಂಭವಿಸುವ ದುರ್ಘಟನೆಗಳಿಗೆ ಯಾರು ಹೊಣೆಗಾರರು? "ನನ್ನ ಮಗ/ಮಗಳು ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಬೈಕ್, ಸ್ಕೂಟಿ, ಕಾರು ಓಡಿಸಲು ಕಲಿತರು" ಎಂಬ ಹೆಮ್ಮೆ ಬೇಡ. ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಐವರು ಅಪ್ರಾಪ್ತರು ಜೀವ ಕಳೆದುಕೊಂಡಿದ್ದಾರೆ. ಜೀವ ಅಮೂಲ್ಯವಾದುದು, ಆದ್ದರಿಂದ ಯಾವುದೇ ಕಾರಣಕ್ಕೂ ಮಕ್ಕಳಿಗೆ ವಾಹನಗಳನ್ನು ನೀಡಬೇಡಿ ಎಂದು ಅವರು ಕಿವಿಮಾತು ಹೇಳಿದರು.
ಎಎಸ್ಪಿ ಪರಮೇಶ್ವರ ಹೆಗಡೆ ಮಾತನಾಡಿ, ಮಕ್ಕಳಿಗೆ ವಾಹನಗಳನ್ನು ನೀಡಿದ್ದಕ್ಕಾಗಿ ಅನೇಕ ಪೋಷಕರು ಜೈಲು ವಾಸ ಅನುಭವಿಸಿದ್ದಾರೆ ಮತ್ತು ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಗಾಯಾಳುಗಳಲ್ಲಿ ಶೇ.35ರಷ್ಟು ಮಂದಿ ತಾವು ಮಾಡದ ತಪ್ಪಿಗೆ ನೋವು ಅನುಭವಿಸುತ್ತಿದ್ದಾರೆ. ದಯವಿಟ್ಟು ಅಜಾಗರೂಕತೆಯಿಂದ, ಅತಿ ವೇಗವಾಗಿ ವಾಹನ ಚಲಾಯಿಸಬೇಡಿ ಮತ್ತು ಮದ್ಯಪಾನ ಮಾಡಿ ವಾಹನ ಓಡಿಸಬೇಡಿ ಎಂದು ಮನವಿ ಮಾಡಿದರು. ಸಂಚಾರಿ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪೋಷಕರ ಅಸಹಾಯಕತೆ:
ಕಾರ್ಯಕ್ರಮದ ವೇಳೆ, ಎಸ್ಪಿ ಉಮಾ ಪ್ರಶಾಂತ್ ಅವರು ಪೋಷಕರೊಂದಿಗೆ ಸಂವಾದ ನಡೆಸಿದರು. ಮಕ್ಕಳಿಗೆ ಏಕೆ ವಾಹನಗಳನ್ನು ನೀಡುತ್ತೀರಿ ಎಂದು ಕೇಳಿದಾಗ, ಕೆಲ ಪೋಷಕರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಎಸ್ಸೆಸ್ಸೆಲ್ಸಿ ಓದಿರುವ ಮಗನಿಗೆ ಬೈಕ್ ಬೇಕೇಬೇಕು, ಇಲ್ಲದಿದ್ದರೆ ಮನೆ ಬಿಟ್ಟು ಹೋಗುವುದಾಗಿ ಹಠ ಹಿಡಿಯುತ್ತಾನೆ. ಹಾಗಾಗಿ ಅನಿವಾರ್ಯವಾಗಿ ವಾಹನ ಕೊಡಬೇಕಾಯಿತು ಎಂದು ಒಬ್ಬ ಪೋಷಕರು ಹೇಳಿದರು.
ಇನ್ನೊಬ್ಬ ಪೋಷಕರು, ತಾವು ಮನೆಯಲ್ಲಿಲ್ಲದ ಸಮಯದಲ್ಲಿ ಮಗನ ಕೈಗೆ ಗಾಯವಾದ ಕಾರಣ, ಪತ್ನಿ ಗಾಡಿಯ ಕೀ ಕೊಟ್ಟು ಕಳುಹಿಸಿದ್ದಾಗಿ ತಿಳಿಸಿದರು. ಇನ್ನು ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಮತ್ತೊಬ್ಬ ತಾಯಿ, ತನಗೂ ರಸ್ತೆ ಅಪಘಾತದ ದುಷ್ಪರಿಣಾಮಗಳ ಅರಿವಿದೆ ಎಂದು ಹೇಳಿದರು. ತನ್ನ ಅಂತಿಮ ವರ್ಷದ ಬಿಇ ಓದುತ್ತಿದ್ದ ನಾದನಿಯ ಮಗಳು ರಸ್ತೆಯಲ್ಲಿ ನಿಂತಿದ್ದಾಗ, ಅಪ್ರಾಪ್ತನೊಬ್ಬ ಬೈಕ್‌ನಲ್ಲಿ ಬಂದು ಗುದ್ದಿದ ಪರಿಣಾಮ ಆಕೆ ಒಂದು ವಾರ ಕೋಮಾದಲ್ಲಿದ್ದಳು ಮತ್ತು ಇತ್ತೀಚೆಗೆ ತಲೆಗೆ ಶಸ್ತ್ರಚಿಕಿತ್ಸೆಯಾಗಿತ್ತು. ಆದರೂ, ತಾನು ತಿರುಗಿ ನೋಡುವಷ್ಟರಲ್ಲಿ ಮಗ ಸಂಕ್ರಾಂತಿ ಕಾಳು ತರಲು ಗಾಡಿ ತಗೊಂಡು ಹೋಗಿದ್ದ. ಇದು ಮರುಕಳಿಸದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.