ವಿಕ ಸುದ್ದಿಲೋಕ ಬೀದರ್ ಯಾದಗಿರಿ ಜಿಲ್ಲೆಯ ಮಹಲ್ ರೋಜಾ ಮಠದ ಪೀಠಾಧಿಪತಿ ಮಲ್ಲಿಕಾರ್ಜುನ ಮುತ್ಯಾ ಅವರ ಮೇಲೆ ದಾಖಲಾಗಿರುವ ಪೋಕ್ಸೊ ಪ್ರಕರಣ ವನ್ನು ತಕ್ಷಣ ಹಿಂಪಡೆಯುವಂತೆ ಬೀದರ್ ಜಿಲ್ಲಾಟೋಕರಿ ಕೋಳಿ ಸಮಾಜ ಸಂಘ ಒತ್ತಾಯಿಸಿದೆ. ರಾಜ್ಯ ಹಾಗೂ ಅಂತರರಾಜ್ಯಗಳಿಂದ ಭಕ್ತರನ್ನು ಹೊಂದಿರುವ ಮಹಲ್ ರೋಜಾ ಮಠಕ್ಕೆ ಅನೇಕರು ಭೇಟಿ ನೀಡಿ ಆಶೀರ್ವಾದ ಪಡೆಯುತ್ತಾರೆ. ಇತ್ತೀಚೆಗೆ ಜಾಲತಾಣದಲ್ಲಿಹರಿದಾಡಿದ ವಿಡಿಯೋ ಆಧರಿಸಿ, ಯಾವುದೇ ಸಮಗ್ರ ತನಿಖೆ ನಡೆಸದೇ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಸ್ವಯಂ ಪ್ರೇರಿತವಾಗಿ ಪೋಕ್ಸೊ ಪ್ರಕರಣ ದಾಖಲಿಸಿರುವುದು ಸರಿಯಲ್ಲಎಂದು ಗೃಹ ಸಚಿವರಿಗೆ ಬರೆದ ಪತ್ರದಲ್ಲಿತಿಳಿಸಲಾಗಿದೆ. ಘಟನೆಯ ಸಂದರ್ಭದಲ್ಲಿಮಗುವಿನ ಕುಟುಂಬದ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರೆಂದು ತಿಳಿಸಿರುವ ಸಂಘ, ಸಾಮಾಜಿಕ ಜಾಲತಾಣದಲ್ಲಿವಿಡಿಯೋವನ್ನು ತಪ್ಪಾಗಿ ಹರಡಲಾಗಿದ್ದು, ಸಂಬಂಧಪಟ್ಟವರಿಂದ ಸಮಗ್ರ ವಿಚಾರಣೆ ನಡೆಸಬೇಕಾಗಿತ್ತು ಎಂದು ಹೇಳಿದೆ. ಸಂಘವು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದ್ದು, ಪ್ರಕರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ರದ್ದುಪಡಿಸಬೇಕು ಹಾಗೂ ತಪ್ಪು ಮಾಹಿತಿ ಹರಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಮಕ್ಕಳ ಹಕ್ಕುಗಳ ಆಯೋಗದ ಕ್ರಮದ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ. ಒಂದು ವೇಳೆ ಸರಕಾರ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿಧರಣಿ, ಸತ್ಯಾಗ್ರಹ ಸೇರಿ ಹೋರಾಟಗಳನ್ನು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಜಿಲ್ಲಾಸಂಘದ ಉಪಾಧ್ಯಕ್ಷ ಸುನೀಲ ಕಾಶಂಪುರ, ಹಿರಿಯ ಮುಖಂಡರಾದ ನಂದಕುಮಾರ ಜಂಬಗಿಕರ್ , ಅಶೋಕ ಜಮಾದರ, ಬಸವರಾಜ ಕಾಶಂಪುರ, ಸುನೀಲ ಭಾವಿಕಟ್ಟಿ, ಮಾರುತಿ ಮಾಸ್ಟರ್ , ಶರಣಪ್ಪ ಕಾಶಂಪುರ, ಅನೀಲ ಐಸಪೂರ, ಪಂಡರಿ ನೇಳಗಿ, ಶಿವಕುಮಾರ ಹಾಲಹಳ್ಳಿ, ರಾಜು ಜಮಾದಾರ, ಸಂಜುಕುಮಾರ ಸಿರ್ಸೆ, ಚಂದು ಅಲಿಯಂಬರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

