ಇರಾನ್‌ನ ಮಧ್ಯಂತರ ನಾಯಕತ್ವ ಮಂಡಳಿ ಮುಖ್ಯಸ್ಥ ಅಯತೊಲ್ಲಾಅಲಿರೆಜಾ ಅರಾಫಿ ಹತ್ಯೆಯಾದ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಹಬ್ಬಿದೆ. ಇಸ್ರೇಲ್-ಅಮೆರಿಕ ನಡೆಸಿದ ವಾಯುದಾಳಿಯಲ್ಲಿ ಅರಾಫಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಇರಾನ್‌ನ ಸರಕಾರಿ ಮಾಧ್ಯಮಗಳು ಇದನ್ನು ದೃಢಪಡಿಸಿಲ್ಲ. ಖಮೇನಿ ಹತ್ಯೆಯಂತೆ ಇಲ್ಲಿಯೂ ಗೊಂದಲ ಮುಂದುವರಿದಿದೆ.
ಅಮೆರಿಕದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಶಪಥ ಮಾಡಿದ್ದ ಇರಾನ್‌ನ ಮಧ್ಯಂತರ ನಾಯಕತ್ವ ಮಂಡಳಿ ಮುಖ್ಯಸ್ಥ ಅಯತೊಲ್ಲಾ ಅಲಿರೆಜಾ ಅರಾಫಿ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಹತ್ಯೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇಸ್ರೇಲ್-ಅಮೆರಿಕ ಜಂಟಿ ವಾಯುದಾಳಿಯಲ್ಲಿ ಅರಾಫಿ ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲವು ಇಸ್ರೇಲಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಇರಾನ್‌ನ ಅಧಿಕೃತ ಸುದ್ದಿ ಸಂಸ್ಥೆಗಳು ಅಥವಾ ಪ್ರಮುಖ ಅಂತಾರಾಷ್ಟ್ರೀಯ ಮಾಧ್ಯಮಗಳು ಈ ಸುದ್ದಿಯನ್ನು ದೃಢಪಡಿಸಿಲ್ಲ.
ಫೆಬ್ರವರಿ 28ರಂದು ಟೆಹ್ರಾನ್ ಮೇಲೆ ನಡೆದ ಅಮೆರಿಕ-ಇಸ್ರೇಲ್ ವಾಯುದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ, ಅರಾಫಿ ಅವರನ್ನು ಮಧ್ಯಂತರ ನಾಯಕತ್ವ ಮಂಡಳಿ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಅಧಿಕಾರ ಸ್ವೀಕರಿಸಿದ ತಕ್ಷಣವೇ ಅರಾಫಿ ಅಮೆರಿಕದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಘೋಷಿಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಅವರ ಹತ್ಯೆಯ ಸುದ್ದಿ ಹೊರಬಿದ್ದಿದ್ದು, ಖಮೇನಿ ಹತ್ಯೆಯ ಸಂದರ್ಭದಲ್ಲಿದ್ದಂತಹ ಗೊಂದಲ ಈಗಲೂ ಮುಂದುವರೆದಿದೆ.