ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಯಲುವಳ್ಳಿ ರಮೇಶ್ ಹೇಳಿಕೆ
ವಿಕ ಸುದ್ದಿಲೋಕ ಗೌರಿಬಿದನೂರುರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಮಾಜದ ಎಲ್ಲವರ್ಗದ ಜನರಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸುತ್ತಿದ್ದು, ಪ್ರತಿಯೊಬ್ಬ ಅರ್ಹ ಫಲಾನುಭವಿಯೂ ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾಅಧ್ಯಕ್ಷ ಯಲುವಳ್ಳಿ ರಮೇಶ್ ತಿಳಿಸಿದರು.
ನಗರದ ತಾಪಂನ ಸಾಮರ್ಥ್ಯ ಸೌಧದಲ್ಲಿಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ರಾಜ್ಯ ಸರಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೇ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಈ ಯೋಜನೆಗಳಿಂದ ಲಕ್ಷಾಂತರ ಕುಟುಂಬಗಳಿಗೆ ನೇರವಾಗಿ ಆರ್ಥಿಕ ನೆರವು ದೊರೆಯುತ್ತಿದೆ. ಮಹಿಳೆಯರ ಸ್ವಾವಲಂಬನೆ ಹೆಚ್ಚಿಸಲು, ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಹೊರೆ ಕಡಿಮೆ ಮಾಡಲು ಸರಕಾರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ ಎಂದರು.
ಪಡಿತರ ವಿತರಣೆಯ ಸಂದರ್ಭದಲ್ಲಿಫಲಾನುಭವಿಗಳಿಂದ 10 ರೂ. ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸುದ್ದಿಗಾರರು ಆಹಾರ ಇಲಾಖೆ ಶಿರಸ್ತೆದಾರರನ್ನು ಪ್ರಶ್ನಿಸಿದ ವೇಳೆ ಸ್ಪಷ್ಟ ಉತ್ತರ ನೀಡಲು ಕೆಲಕಾಲ ಅವರು ತಡಬಡಾಯಿಸಿದರ ಪ್ರಸಂಗ ನಡೆಯಿತು. ಸಾರ್ವಜನಿಕರ ಪಡಿತರ ಸಂಬಂಧಿತ ವಿಚಾರಣೆ ವೇಳೆ ಪಡಿತರ ವಿತರಣೆ ವೇಳೆ ಗ್ರಾಹಕರಿಂದ 10 ರೂ. ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಯಲುವಳ್ಳಿ ರಮೇಶ್ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರಿಂದ ಸರಕಾರದ ಯಾವುದೇ ಉಚಿತ ಸೇವೆಗೆ ಹಣ ಪಡೆಯುವುದು ಕಾನೂನು ಬಾಹಿರ. ಪಡಿತರ ಚೀಟಿ ಸಂಬಂಧಿತ ಸೇವೆಗಳನ್ನು ಸರಕಾರದ ನಿಯಮಾನುಸಾರ ಪಾರದರ್ಶಕವಾಗಿ ನೀಡಬೇಕು. ಬಡ ಜನರಿಂದ ಅನಧಿಕೃತವಾಗಿ ಹಣ ವಸೂಲಿ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ರಂಗರಾಜು ಮಾತನಾಡಿ, ಪಡಿತರ ವ್ಯವಸ್ಥೆಯಲ್ಲಿಯಾವುದೇ ರೀತಿಯ ಅಕ್ರಮ, ವಿಳಂಬ ಅಥವಾ ಸಾರ್ವಜನಿಕರಿಗೆ ತೊಂದರೆ ಆಗದಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಸರಕಾರದ ಜನಪರ ಯೋಜನೆಗಳ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಯಾವುದೇ ಹೆಚ್ಚುವರಿ ಹಣದ ಬೇಡಿಕೆ ಇಲ್ಲದೆ ತಲುಪುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಈ ವೇಳೆ ಗ್ಯಾರಂಟಿ ಸಮಿತಿ ನಿರ್ದೇಶಕರಿಂದ ದೂರುಗಳನ್ನು ಆಲಿಸಿದ ಅವರು, ಹಣ ವಸೂಲಿ ಕುರಿತು ಬಂದಿರುವ ದೂರುಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಅವ್ಯವಸ್ಥೆ ಸರಿಪಡಿಸಲು ಆಗ್ರಹ: ನಗರದಲ್ಲಿಸಾರಿಗೆ ವ್ಯವಸ್ಥೆಯ ಅವ್ಯವಸ್ಥೆ ಹಾಗೂ ನಿಗದಿತ ಸಮಯಕ್ಕೆ ಸರಕಾರಿ ಬಸ್ ಗಳು ಸಂಚರಿಸದ ಕಾರಣ ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಸಭೆಯಲ್ಲಿದೂರಲಾಯಿತು.
ಗ್ರಾಮೀಣ ಪ್ರದೇಶಗಳಿಂದ ಶಾಲೆ-ಕಾಲೇಜುಗಳಿಗೆ ಆಗಮಿಸುವ ವಿದ್ಯಾರ್ಥಿಗಳು ಪ್ರತಿ ದಿನ ಬಸ್ ಗಳಿಗಾಗಿ ಗಂಟೆಗಟ್ಟಲೆ ಕಾಯುವಂತಾಗಿದೆ. ಹಲವು ಮಾರ್ಗಗಳಲ್ಲಿಬಸ್ ಗಳ ಕೊರತೆ ಇದ್ದು, ಕೆಲವು ಬಸ್ ಗಳು ನಿಗದಿತ ವೇಳಾಪಟ್ಟಿಯನ್ನು ಪಾಲಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ತರಗತಿಗಳಿಗೆ ತಡವಾಗಿ ಹಾಜರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಗೌರಿಬಿದನೂರು- ಬೆಂಗಳೂರು ಕಡೆಗೆ ಹೋಗುವ ಬಸ್ ಗಳ ಸಂಖ್ಯೆ ಹೆಚ್ಚಳ ಮಾಡುವಂತೆ ಸಾರಿಗೆ ಘಟಕಾಧಿಕಾಗಿಳಿಗೆ ತಿಳಿಸಿದರು.
ಉಚಿತ ಪಾಸ್ ವಿತರಣೆ: ನಗರದ ಸಾರಿಗೆ ನಿಲ್ದಾಣದಲ್ಲಿವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಗಳನ್ನು ಯಲುವಳ್ಳಿ ರಮೇಶ್ ವಿತರಿಸಿ ತಾಲೂಕಿನಲ್ಲಿ1554 ವಿದ್ಯಾರ್ಥಿಗಳಿಗೆ ಬಸ್ ಪಾಸ್ ಗಳನ್ನು ವಿತರಿಸುತ್ತಿರುವುದಾಗಿ ತಿಳಿಸಿದರು.
ಸಭೆಯಲ್ಲಿತಾಪಂ ಇಒ ಜಿ.ಕೆ.ಹೊನ್ನಯ್ಯ, ಗ್ಯಾರಂಟಿ ಸಮಿತಿ ಮಂಚೇನಹಳ್ಳಿ ಅಧ್ಯಕ್ಷ ಮಧುಸೂದನ ರೆಡ್ಡಿ, ಸಾರಿಗೆ ಘಟಕದ ವ್ಯವಸ್ಥಾಪಕ ರವಿಶಂಕರ್ , ಬೆಸ್ಕಾಂ ಎಇಇ ಪರಮೇಶ್ವರಪ್ಪ, ಆಹಾರ ಇಲಾಖೆ ಶಿರಸ್ತೇದಾರ್ ಪುಪ್ಪಲತಾ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಮಿತಿ ನಿರ್ದೇಶಕರು ಭಾಗವಹಿಸಿದ್ದರು.
ಚಿತ್ರ 16ಜಿಬಿಡಿ-2
ಗೌರಿಬಿದನೂರು ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾಅಧ್ಯಕ್ಷ ಯಲುವಳ್ಳಿ ರಮೇಶ್ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಿದರು.