ಗುಳ್ಳವ್ವ ಪು.11

Contributed byShridevi Ambekallu|Vijaya Karnataka
gullavva festival a tribute to mother earth
ಗುಳ್ಳವ್ವ ಆಷಾಢ ಮಾಸದ ಆಚರಣೆ

---
ಡಾ. ಪ್ರಕಾಶ ಗ. ಖಾಡೆ ಬಾಗಲಕೋಟೆ

------

ಗುಳ್ಳವ್ವನನ್ನು ಪೂಜಿಸುವ ಮೂಲಕ ಭೂಮಿ ತಾಯಿಗೆ ನಮಿಸುವ ಹಬ್ಬ ಆಷಾಢ ಮಾಸದಲ್ಲಿನಡೆಯುತ್ತದೆ.

-----

ಉತ್ತರ ಕರ್ನಾಟಕದ ಹಳ್ಳಿಗಳ ಬದುಕು ಪ್ರಕೃತಿಯೊಂದಿಗೆ ಬೆಸೆದುಕೊಂಡಿದೆ. ಇಲ್ಲಿಹಬ್ಬಗಳು ಕೇವಲ ಧಾರ್ಮಿಕ ಆಚರಣೆಗಳಲ್ಲ; ಅವು ಬದುಕಿನ ಸಂಸ್ಕೃತಿ, ಕೃಷಿಯ ನಂಬಿಕೆ ಮತ್ತು ಪ್ರಕೃತಿಯೊಂದಿಗಿನ ಮಾನವ ಸಂಬಂಧದ ಸಂಕೇತಗಳಾಗಿವೆ. ಇಂತಹ ವಿಶಿಷ್ಟ ಜನಪದ ಆಚರಣೆಗಳಲ್ಲಿ‘ಗುಳ್ಳವ್ವ’ ಹಬ್ಬವು ಪ್ರಮುಖವಾದದ್ದು. ಆಷಾಢ ಮಾಸದ ಮಂಗಳವಾರ ಹಾಗೂ ಬುಧವಾರಗಳಲ್ಲಿಆಚರಿಸಲ್ಪಡುವ ಈ ಹಬ್ಬ ಭೂಮಿತಾಯಿಯ ಆರಾಧನೆಯ ಪ್ರತೀಕವಾಗಿದೆ.

ಕಾರ ಹುಣ್ಣಿಮೆ ಮತ್ತು ಮಣ್ಣೆತ್ತಿನ ಅಮಾವಾಸ್ಯೆ ಮುಗಿದ ನಂತರ ಬರುವ ಮೊದಲ ಮಂಗಳವಾರದಿಂದ ಗುಳ್ಳವ್ವನ ಆಚರಣೆ ಆರಂಭವಾಗುತ್ತದೆ. ಆಷಾಢ ಮಾಸದ ಎಲ್ಲಮಂಗಳವಾರಗಳಲ್ಲಿಯೂ ಈ ಸಂಪ್ರದಾಯ ಮುಂದುವರಿಯುತ್ತದೆ. ಈ ಹಬ್ಬದಲ್ಲಿಮುಖ್ಯ ಪಾತ್ರ ವಹಿಸುವವರು ಹಳ್ಳಿಯ ಮಹಿಳೆಯರು.

ಆಚರಣೆ ಹೇಗೆ?

ಮಂಗಳವಾರದ ಬೆಳಗ್ಗೆ ಅವರು ಗುಂಪು ಗುಂಪಾಗಿ ಸೇರಿ ಹಾಡುಗಳನ್ನು ಹಾಡುತ್ತಾ ಊರ ಹೊರಗಿನ ಹೊಲಗಳಿಗೆ ತೆರಳುತ್ತಾರೆ. ಅಲ್ಲಿಎರೆಮಣ್ಣು ಮತ್ತು ಜಿಗುಟು ಮಣ್ಣನ್ನು ಸಂಗ್ರಹಿಸಿ ತರುತ್ತಾರೆ. ಈ ಮಣ್ಣು ಕೇವಲ ಮಣ್ಣಲ್ಲ; ಅದು ಭೂಮಿತಾಯಿಯ ಪ್ರತಿರೂಪ ಎಂಬ ಭಾವನೆ ಅವರಲ್ಲಿರುತ್ತದೆ. ತಂದ ಮಣ್ಣನ್ನು ಚೆನ್ನಾಗಿ ಹದ ಮಾಡಿ ಚೌಕಾಕಾರದ ಮಣೆಯ ಮೇಲೆ ಗುಳ್ಳವ್ವನ ಸುಂದರ ಮೂರ್ತಿಯನ್ನು ತಯಾರಿಸಲಾಗುತ್ತದೆ. ಕೆಲವು ಕಡೆಗಳಲ್ಲಿಕುಂಬಾರರು ಕಲಾತ್ಮಕವಾಗಿ ರೂಪಿಸಿದ ಗುಳ್ಳವ್ವನ ಮೂರ್ತಿಗಳನ್ನು ಬಳಸುವ ಸಂಪ್ರದಾಯವೂ ಇದೆ. ಗುಲಗಂಜಿ ಬೀಜಗಳು, ಬಣ್ಣ ಬಣ್ಣದ ಕುಸುಬಿ ಬೀಜಗಳು ಹಾಗೂ ವಿವಿಧ ಅಲಂಕಾರಿಕ ವಸ್ತುಗಳಿಂದ ಗುಳ್ಳವ್ವನನ್ನು ಸಿಂಗರಿಸಲಾಗುತ್ತದೆ. ಪ್ರತಿಯೊಂದು ಓಣಿಯಲ್ಲಿಯೂ ಗುಳ್ಳವ್ವನನ್ನು ಕಟ್ಟೆಯ ಮೇಲೆ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.

ಉತ್ತಮ ಬೆಳೆಯ ಆಶಯ

ಗುಳ್ಳವ್ವನ ಪೂಜೆಯಲ್ಲಿಕೃಷಿ ಜೀವನದ ಸಂಕೇತಗಳು ಸ್ಪಷ್ಟವಾಗಿ ಕಾಣುತ್ತವೆ. ಗುಳ್ಳವ್ವನ ಮುಂದೆ ಮಣ್ಣಿನಿಂದಲೇ ಕೋಣ ಮತ್ತು ಕತ್ತಿಯನ್ನು ತಯಾರಿಸಲಾಗುತ್ತದೆ. ಸಂಜೆ ವೇಳೆಗೆ ಆ ಮಣ್ಣಿನ ಕತ್ತಿಯಿಂದ ಮಣ್ಣಿನ ಕೋಣವನ್ನು ಕಡಿದು ಬಲಿ ನೀಡುವ ಪ್ರತೀಕಾತ್ಮಕ ಆಚರಣೆ ನಡೆಯುತ್ತದೆ. ಇದು ಹೊಲಗಳಲ್ಲಿಬೆಳೆಗಳಿಗೆ ಹಾನಿ ಮಾಡುವ ರೋಗ, ಕೀಟ ಹಾಗೂ ಕ್ರಿಮಿಕೀಟಗಳ ನಾಶವನ್ನು ಸಂಕೇತಿಸುತ್ತದೆ. ರೈತನ ಜೀವನದಲ್ಲಿಉತ್ತಮ ಬೆಳೆಯ ಆಶಯವನ್ನು ವ್ಯಕ್ತಪಡಿಸುವ ಜನಪದರ ನಂಬಿಕೆಯಿದು. ಮಂಗಳವಾರ ಸಂಜೆ ವೇಳೆಗೆ ಊರಿನ ಯುವತಿಯರು ಮತ್ತು ಹೆಣ್ಣುಮಕ್ಕಳು ಸೇರಿ ಗುಳ್ಳವ್ವನಿಗೆ ಆರತಿ ಬೆಳಗುತ್ತಾರೆ. ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತಾ ಸಂಭ್ರಮಿಸುತ್ತಾರೆ. ನಂತರ ಮನೆ ಮನೆಗಳಿಗೆ ತೆರಳಿ ಪ್ರತಿಯೊಂದು ಮನೆಯ ಗುಳ್ಳವ್ವನಿಗೂ ಆರತಿ ಬೆಳಗುವುದು ಈ ಆಚರಣೆಯ ವಿಶೇಷ. ಹೀಗೆ ಇಡೀ ಊರು ಒಂದು ಕುಟುಂಬದಂತೆ ಒಂದಾಗುತ್ತದೆ.

ಮರುದಿನ ಬುಧವಾರದ ಆಚರಣೆ ಮತ್ತಷ್ಟು ವೈಭವಯುತವಾಗಿರುತ್ತದೆ. ಮನೆಗಳಲ್ಲಿವಿಶೇಷ ಸಿಹಿ ತಿನಿಸುಗಳು ಮತ್ತು ವಿವಿಧ ಬಗೆಯ ಅಡುಗೆಗಳನ್ನು ಸಿದ್ಧಪಡಿಸಲಾಗುತ್ತದೆ. ಹೋಳಿಗೆ, ಸಜ್ಜಕ, ಶೇಂಗಾದೊಳಿಗೆ, ಕಡಬು, ರೊಟ್ಟಿ, ಚಪಾತಿ ಸೇರಿದಂತೆ ಅನೇಕ ಬಗೆಯ ಭಕ್ಷ್ಯಗಳನ್ನು ತಯಾರಿಸಿ ನೈವೇದ್ಯಕ್ಕೆ ಇಡಲಾಗುತ್ತದೆ. ಮಹಿಳೆಯರು ಗುಳ್ಳವ್ವನನ್ನು ತಲೆಯ ಮೇಲೆ ಹೊತ್ತುಕೊಂಡು ಊರ ಹೊರಗಿನ ಗುಡಿಗಳು, ಹೊಲಗಳು, ಮಠಗಳು ಹಾಗೂ ಗುಡ್ಡಗಳ ಕಡೆಗೆ ತೆರಳುತ್ತಾರೆ. ಅಲ್ಲಿಗುಳ್ಳವ್ವನನ್ನು ಪೂಜಿಸಿ ತಂದಿರುವ ಮೃಷ್ಟಾನ್ನಗಳನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ನಂತರ ಎಲ್ಲರೂ ಸೇರಿ ಊಟ ಮಾಡುತ್ತಾರೆ.

ಈ ಸಂದರ್ಭದಲ್ಲಿಪ್ರಕೃತಿಯ ಮಡಿಲಿನಲ್ಲಿಹಾಡು, ಒಗಟು, ಆಟ ಮತ್ತು ಸಂಭ್ರಮದ ವಾತಾವರಣ ಮೂಡುತ್ತದೆ. ಮೋಡ ಕವಿದ ಆಷಾಢದ ವಾತಾವರಣದಲ್ಲಿಜನಪದ ಗೀತೆಗಳು ಮೊಳಗುತ್ತವೆ. ಒಡಪುಗಳನ್ನು ಹೇಳುತ್ತಾ, ಒಗಟುಗಳನ್ನು ಬಿಡಿಸುತ್ತಾ, ನಗು ಹಂಚಿಕೊಳ್ಳುತ್ತಾ ಹೆಣ್ಣುಮಕ್ಕಳು ದಿನವಿಡೀ ಸಂತೋಷದಿಂದ ಕಾಲ ಕಳೆಯುತ್ತಾರೆ. ಸಂಜೆ ವೇಳೆಗೆ ಗುಳ್ಳವ್ವನನ್ನು ಹೊಳೆ, ಹಳ್ಳ ಅಥವಾ ಬಾವಿಗಳಲ್ಲಿವಿಸರ್ಜಿಸಿ ಮನೆಗಳಿಗೆ ಮರಳುತ್ತಾರೆ. ಗುಳ್ಳವ್ವ ಹಬ್ಬದ ಮತ್ತೊಂದು ವಿಶೇಷವೆಂದರೆ ಪ್ರತಿ ವಾರವೂ ವಿಭಿನ್ನ ರೂಪದ ಗುಳ್ಳವ್ವನ ಮೂರ್ತಿಯನ್ನು ತಯಾರಿಸುವುದು. ಕಂಬದ ಗುಳ್ಳವ್ವ, ಕಟ್ಟಿಗುಳ್ಳವ್ವ, ಪಡಕದ ಗುಳ್ಳವ್ವ ಮತ್ತು ತಿಗರಿ ಗುಳ್ಳವ್ವ ಎಂಬ ವಿವಿಧ ರೂಪಗಳಲ್ಲಿಆಕೆಯನ್ನು ಆರಾಧಿಸಲಾಗುತ್ತದೆ. ಇದು ಜನಪದ ಕಲ್ಪನಾಶಕ್ತಿ ಮತ್ತು ಸೃಜನಶೀಲತೆಯ ಪ್ರತೀಕವಾಗಿದೆ.

ಜನಪದ ಆಚರಣೆಯ ಹಿಂದಿನ ಭಾವ

ಗುಳ್ಳವ್ವ ಹಬ್ಬವನ್ನು ಆಳವಾಗಿ ಗಮನಿಸಿದರೆ ಇದು ಕೇವಲ ದೇವತೆಯ ಪೂಜೆಯಲ್ಲಎಂಬುದು ಸ್ಪಷ್ಟವಾಗುತ್ತದೆ. ಮಣ್ಣಿನಿಂದ ಹುಟ್ಟಿ ಮಣ್ಣಿನಲ್ಲೇ ಲೀನವಾಗುವ ಮೂರ್ತಿಯ ಮೂಲಕ ಭೂಮಿಯ ಪಾವಿತ್ರ್ಯವನ್ನು ಗೌರವಿಸುವ ಆಚರಣೆಯಿದು. ಕೃಷಿಕರ ಪಾಲಿಗೆ ಭೂಮಿ ತಾಯಿ, ನೀರು ಜೀವ, ಗಾಳಿ ಉಸಿರು. ಈ ಮೂರು ಅಂಶಗಳ ಮೇಲಿನ ಕೃತಜ್ಞತೆಯನ್ನು ವ್ಯಕ್ತಪಡಿಸುವುದೇ ಗುಳ್ಳವ್ವ ಹಬ್ಬದ ಮೂಲ ಆಶಯವಾಗಿದೆ. ಗುಳ್ಳವ್ವ ಆಚರಣೆಯ ನಂತರ ನಾಗರಪಂಚಮಿ ಹಬ್ಬ ಬರುತ್ತದೆ. ಆಗ ಪ್ರಕೃತಿಯು ಹಚ್ಚ ಹಸಿರಿನ ಸೌಂದರ್ಯದಿಂದ ಮೈದುಂಬಿಕೊಂಡಿರುತ್ತದೆ. ಮಳೆಗಾಲದ ಹೊಲಗಳು ಜೀವಂತಿಕೆಯಿಂದ ಕಂಗೊಳಿಸುತ್ತವೆ. ಒಕ್ಕಲು ಮಕ್ಕಳ ಬದುಕು ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧವನ್ನು ಸಾರುತ್ತದೆ. ಮಣ್ಣು, ನೀರು ಮತ್ತು ಗಾಳಿಯನ್ನು ದೇವರಂತೆ ಕಾಣುವ ಅವರ ಭಕ್ತಿ ಭಾವವೇ ಇಂತಹ ಜನಪದ ಆಚರಣೆಗಳಲ್ಲಿವ್ಯಕ್ತವಾಗುತ್ತದೆ.

ಇಂದು ಆಧುನಿಕತೆಯ ಭರಾಟೆಯಲ್ಲಿಅನೇಕ ಜನಪದ ಆಚರಣೆಗಳು ಮರೆಯಾಗುತ್ತಿರುವ ಸಂದರ್ಭದಲ್ಲಿಗುಳ್ಳವ್ವ ಹಬ್ಬದಂತಹ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವುದು ಅಗತ್ಯವಾಗಿದೆ. ನಮ್ಮ ಪೂರ್ವಜರ ಪರಿಸರ ಪ್ರಜ್ಞೆ, ಕೃಷಿ ಸಂಸ್ಕೃತಿ, ಸಮುದಾಯ ಜೀವನ ಮತ್ತು ಪ್ರಕೃತಿಯ ಮೇಲಿನ ಗೌರವದ ಜೀವಂತ ದಾಖಲೆಗಳಾಗಿವೆ. ಗುಳ್ಳವ್ವ ಹಬ್ಬವು ಭೂಮಿತಾಯಿಗೆ ಸಲ್ಲಿಸುವ ಕೃತಜ್ಞತೆಯ ಒಂದು ಭಾಗವಾಗಿದೆ. ಈ ಮೂಲಕ ನಮ್ಮ ಹೆಣ್ಣುಮಕ್ಕಳ ಸಂಭ್ರಮಕ್ಕೆ ಗುಳ್ಳವ್ವ ಆಚರಣೆ ಒಂದು ಜನಪದರ ಆಡೊಂಬಲವಾಗಿದೆ.