ಸಿದ್ದರಾಮ ತಳವಾರ, ದಾಸ್ತಿಕೊಪ್ಪಕಾಡಂಚಿನ ಊರಲ್ಲಿಬಡ ಬ್ರಾಹ್ಮಣ ಬ್ರಹ್ಮಜ್ಞಾನ ಪಡೆಯಲು ಬುತ್ತಿ ಕಟ್ಟಿಕೊಂಡು ಯೋಗ್ಯ ಗುರು ಹುಡುಕುತ್ತ ಕಾಡಿಗೆ ಹೊರಟ. ದಾರಿ ಮಧ್ಯೆ ಸುಸ್ತಾಗಿ ದೊಡ್ಡ ಮರದ ನೆರಳಲ್ಲಿವಿಶ್ರಾಂತಿಗಾಗಿ ಕೂತುಕೊಂಡ. ಆಗ ಆತನಿಗೆ ‘ನಿಲ್ಲುಬ್ರಾಹ್ಮಣ’ ಎಂಬ ಭಯಂಕರ ಧ್ವನಿಯೊಂದು ಕೇಳಿಸಿತು. ಆತ ಭಯಪಟ್ಟು ಓಡಲಾರಂಭಿಸಿದ. ಮತ್ತದೇ ಧ್ವನಿಯಲ್ಲಿ‘ನಿಲ್ಲುಬ್ರಾಹ್ಮಣ ನಾನು ನಿನಗೆ ಏನೂ ಮಾಡಲಾರೆ ದಯವಿಟ್ಟು ಓಡಬೇಡ’ ಎಂಬ ಧ್ವನಿ ಕೇಳಿಸಿತು. ಆಗ ‘ಇಲ್ಲಿನೋಡು ನಾನಿದೀನಿ’ ಎಂದು ಆ ಮರದ ಮೇಲೇರಿ ಕೂತಿರುವ ಬ್ರಹ್ಮರಾಕ್ಷಸ ಕಾಣಿಸಿದ. ಅದನ್ನು ಕಂಡು ಬ್ರಾಹ್ಮಣನಿಗೆ ಭಯದಿಂದಲೇ ‘ಯಾರು ನೀನು?’ ಎಂದು ನಡುಗುತ್ತಲೇ ಕೇಳಿದ.
ಆಗ ಬ್ರಹ್ಮರಾಕ್ಷಸ ‘ನಾನು ಹಿಂದಿನ ಜನ್ಮದಲ್ಲಿನಿನ್ನಂತೆ ಒಬ್ಬ ಬ್ರಾಹ್ಮಣನಾಗಿದ್ದೆ. ಸಂಗೀತದಲ್ಲಿಸಾಕಷ್ಟು ಜ್ಞಾನ ಪಡೆದು ಆ ಜ್ಞಾನವನ್ನು ಯಾರಿಗೂ ಹಂಚದೇ ಅಹಂಕಾರದಿಂದ ವರ್ತಿಸಿದೆ. ಪರಿಣಾಮ ಈ ಜನ್ಮದಲ್ಲಿರಾಕ್ಷಸನಾಗಿ ಜನ್ಮ ತಾಳಿರುವೆ. ಇಲ್ಲೇ ಸಮೀಪದಲ್ಲಿಒಂದು ಮಂದಿರವಿದೆ. ಅಲ್ಲೊಬ್ಬ ದಿನವೂ ಕೊಳಲನ್ನು ಬೇಸೂರಲ್ಲಿಊದುವುದರಿಂದ ನನಗೆ ಹಿಂಸೆ ಆಗುತ್ತಿದೆ. ಅಲ್ಲದೇ ಆತನ ಬೇಸೂರು ಕೊಳಲು ಧ್ವನಿಯಿಂದ ಮೈಗೆಲ್ಲಮುಳ್ಳು ಚುಚ್ಚಿದಂತಾಗುತ್ತಿದೆ. ದೇಹವಿರದ ಕಾರಣ ಬೇರೆಡೆಗೆ ಹೋಗಲಾಗದೇ ಸಂಕಟಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲೂ ಆಗದೇ ಒದ್ದಾಡುತ್ತಿರುವೆ. ದಯವಿಟ್ಟು ನೀನು ನನ್ನನ್ನು ದೂರ ಕರೆದೊಯ್ದು ಈ ಸಂಕಟದಿಂದ ಪಾರು ಮಾಡು’ ಎಂದು ಬೇಡಿದಾಗ ಬ್ರಾಹ್ಮಣ ಒಪ್ಪಿಕೊಂಡ. ‘ಇದರಿಂದ ನನಗೇನು ಲಾಭ?’ ಎಂದು ಕೇಳಿದ. ಅದಕ್ಕೆ ರಾಕ್ಷಸ ‘ನೀನು ನನ್ನ ಇಲ್ಲಿಂದ ಪಾರು ಮಾಡಿದ ನಂತರ ನಾನು ಮೈಸೂರಿನ ಮಹಾರಾಣಿಯ ದೇಹ ಪ್ರವೇಶ ಮಾಡುವೆ. ನೀನು ಅಲ್ಲಿಗೆ ಬಂದು ಆಕೆಯ ದೇಹ ಮುಟ್ಟಿದ ತಕ್ಷಣ ನಾನು ಆ ದೇಹ ಬಿಟ್ಟು ಹೊರಡುವೆ. ಆಗ ಮಹಾರಾಜ ನಿನಗೆ ಸಾಕಷ್ಟು ಬಂಗಾರ, ಧನ, ಧಾನ್ಯ, ವಸ್ತ್ರ ಕೊಡುವನು. ಅದರಿಂದ ನಿನ್ನ ಬಡತನ ದೂರವಾಗಲಿದೆ. ಆದರೆ ಎಂದೂ ನನ್ನೆದುರು ಬರಕೂಡದು. ಬಂದರೆ ಖಂಡಿತ ನಿನ್ನನ್ನು ಕೊಂದು ಹಾಕುವೆ’ ಎಂದು ಹೇಳಿ ಆತನ ಬೆನ್ನೇರಿ ಕೂತಾಗ ಬ್ರಾಹ್ಮಣ ದಾರಿ ಕಾಣದೆ ನಿರ್ಭಯವಾಗಿ ದೂರದ ಪಟ್ಟಣದವರೆಗೆ ಆ ಬ್ರಹ್ಮರಾಕ್ಷಸ ಹೊತ್ತು ಇಳಿಸಿದ.
ಬ್ರಾಹ್ಮಣ ಮೈಸೂರು ಪಟ್ಟಣ ಸೇರಿ ಒಂಟಿ ಮುದುಕಿ ಇರುವ ಸಣ್ಣ ಗುಡಿಸಲೊಂದರಲ್ಲಿಭಿಕ್ಷೆ ಪಡೆದು ಹಸಿವು ನೀಗಿಸಿಕೊಂಡ. ಮುದುಕಿ ಬೇಸರದಿಂದ ‘ಈ ಮಹಾರಾಜನ ಏಕೈಕ ಪುತ್ರಿಗೆ ರಾಕ್ಷಸ ಬಾಧೆ ಕಾಡುತ್ತಿದೆ. ಈ ಸಮಸ್ಯೆ ಪರಿಹಾರ ಮಾಡಿದವರಿಗೆ ಯೋಗ್ಯ ಬಹುಮಾನ ನೀಡುವುದಾಗಿ ಡಂಗೂರ ಸಾರಿದ್ದಾರೆ’ ಎಂದು ಮುದುಕಿ ಹೇಳಿದಳು. ಬ್ರಾಹ್ಮಣ ಅರಮನೆಯತ್ತ ಧಾವಿಸಿ ‘ಮಹಾರಾಣಿಯ ರಾಕ್ಷಸ ಬಾಧೆ ಪರಿಹರಿಸುವೆ’ ಎಂದು ಮಹಾರಾಜರಿಗೆ ವಿನಂತಿಸಿದ.
ಮಹಾರಾಣಿ ಅಂತಃಪುರ ಪ್ರವೇಶಿಸಿದ ಬ್ರಾಹ್ಮಣನನ್ನು ಉದ್ದೇಶಿಸಿ ‘ಬಾ ನಾನು ನಿನ್ನ ದಾರಿಯನ್ನೇ ಕಾಯುತ್ತಿದ್ದೆ’ ಎಂದು ಹಿಂದೆ ಕೊಟ್ಟ ಮಾತು ನೆನಪಿಸಿ ರಾಕ್ಷಸ ಹೊರಟಿದ್ದು ನೋಡಿ ರಾಜ ಬ್ರಾಹ್ಮಣನಿಗೆ ಅಪಾರ ಧನ ಧಾನ್ಯ ವಸ್ತಾ್ರದಿಗಳನ್ನು ಕೊಟ್ಟು ಗೌರವಿಸಿ ಬೀಳ್ಕೊಟ್ಟನು. ಸ್ವಲ್ಪ ದಿನಗಳ ನಂತರ ಅಲ್ಲಿಯೇ ಉಳಿದ ಬ್ರಾಹ್ಮಣ ಅದೇ ಊರಿನ ಕನ್ಯೆಯೊಂದಿಗೆ ವಿವಾಹವಾಗಿ ಸುಖ ಜೀವನ ನಡೆಸುತ್ತಿದ್ದ.
ಇತ್ತ ಅಲ್ಲಿಂದ ಹೊರಟ ರಾಕ್ಷಸ ಪಕ್ಕದ ರಾಜ್ಯದಲ್ಲಿನ ಮಹಾರಾಣಿಯ ದೇಹ ಪ್ರವೇಶ ಮಾಡಿ ಕಾಟ ಕೊಡಲಾರಂಭಿಸಿತು. ಆಗ ಇದೇ ಮೈಸೂರಿನ ಬ್ರಾಹ್ಮಣನ ವಿಷಯ ತಿಳಿದು ಮೈಸೂರು ರಾಜನಿಗೆ ಓಲೆ ಕಳಿಸಿ ಪರಿಹಾರಕ್ಕಾಗಿ ಆತನನ್ನು ಬರಮಾಡುವಂತೆ ಮನವಿ ಮಾಡಿದನು. ಆಗ ಮಹಾರಾಜ ‘ಈ ಕೂಡಲೇ ಅಲ್ಲಿಗೆ ಹೊರಡು’ ಎಂದು ಆಜ್ಞೆ ಮಾಡಿದನು.
ಹೋಗಲೂ ಆಗದೇ ರಾಜಾಜ್ಞೆ ಮೀರಲೂ ಆಗದೇ ಧರ್ಮ ಸಂಕಟದಿಂದ ಕೊನೆಗೆ ಹೆಂಡತಿ ಮಕ್ಕಳಿಗೆ ವಿಷಯ ತಿಳಿಸಿ ಹೊರಟ. ಪಕ್ಕದ ರಾಜ್ಯಕ್ಕೆ ಹೋಗಿ ಅಂತಃಪುರ ಪ್ರವೇಶಿಸಿದ ಕೂಡಲೇ ಈತನನ್ನು ನೋಡಿದ ರಾಕ್ಷಸ ‘ನಿನಗೆ ಈ ಮೊದಲೇ ಹೇಳಿದ್ದು ನೆನಪಿಲ್ಲವೇ? ನನ್ನ ಮಾತು ಮೀರಿದ ಕಾರಣ ಈವತ್ತೇ ನಿನ್ನ ಸಾವು’ ಎಂದು ಆಕ್ರೋಶದಿಂದ ಘರ್ಜಿಸಿತು. ‘ನೋಡು ಇಲ್ಲೇ ಪಕ್ಕದ ದೇವಸ್ಥಾನದಲ್ಲೊಬ್ಬ ದಿನರಾತ್ರಿ ಕರ್ಕಶವಾಗಿ ಬೇಸೂರಲ್ಲಿಸಾರಂಗ ವಾದನ ನುಡಿಸುತ್ತಾನೆ. ನೀನು ಈಕೆಯ ದೇಹ ಬಿಟ್ಟು ಹೋದರೆ ಒಳಿತು, ಇಲ್ಲವಾದಲ್ಲಿಆ ಬೇಸೂರ ಸಾರಂಗ ವಾದಕನನ್ನು ನಾನು ಇಲ್ಲಿಯೇ ಕರೆಸುತ್ತೇನೆ’ ಎಂದು ಹೇಳಿದ. ರಾಕ್ಷಸ ಹೆದರಿ ಮಹಾರಾಣಿಯ ದೇಹ ಬಿಟ್ಟು ಹೊರಟು ಹೋದ.