ನಮ್ಮ ಪ್ರತಿದಿನದ ಭಾಷಾರೂಢಿಯ ಕಾರಣದಿಂದ ನಮ್ಮ ಮನಸ್ಸಿಗೆ ‘ಪುರುಷ’ ಎಂದೊಡನೆಯೇ ಸ್ತ್ರೀಯಲ್ಲದ, ಸ್ತ್ರೀಯಿಂದ ಬೇರೆಯಾದ, ಸಾಮಾನ್ಯಮನುಷ್ಯ, ‘ಗಂಡು’ ಎಂಬ ಅರ್ಥವೇ ಹೊಳೆಯುತ್ತದೆ. ಆದರೆ ಪ್ರಕೃತ- ‘ಪುರುಷ’ ಎಂದರೆ ಕೇವಲ ಗಂಡಲ್ಲ. ಅದು ಗಂಡೂ ಹೌದು; ಹೆಣ್ಣೂ ಹೌದು. ಪುರುಷ ಎಂದರೆ ಶರೀರದಲ್ಲಿಬದ್ಧವಾದ ಜೀವ ಅಂತ ಅರ್ಥ. ಗಂಡು ಹೇಗೋ ಹೆಣ್ಣೂ ಕೂಡಾ ಶರೀರದಲ್ಲಿಬದ್ಧವಾಗಿದೆ. ಆದ್ದರಿಂದ ಶಾಸ್ತ್ರೀಯ ಪರಿಭಾಷೆಯಲ್ಲಿಗಂಡೂ ಪುರುಷ; ಹೆಣ್ಣೂ ಪುರುಷ. ಇಲ್ಲಿಜೀವ ಎಂಬ ಪದ ಪುಲ್ಲಿಂಗದಲ್ಲಿಇದೆ. ಸಂಸ್ಕೃತದಲ್ಲಿವಿಶೇಷ್ಯ ಯಾವ ಲಿಂಗಲ್ಲಿರುತ್ತದೆಯೋ ಅದೇ ಲಿಂಗದಲ್ಲಿವಿಶೇಷಣವೂ ಇರಬೇಕು ಎಂಬ ನಿಯಮವಿದೆ. ಇಲ್ಲಿಜೀವವೇ ವಿಶೇಷ್ಯ. ಆದ್ದರಿಂದ ಅದಕ್ಕೆ ವಿಶೇಷಣವಾದ ‘ಪುರುಷ’ ಕೂಡಾ ಪುಲ್ಲಿಂಗದಲ್ಲಿಬಂದಿದೆ.
‘ಪುರುಷ’ ಶಬ್ದಕ್ಕೆ ಇನ್ನೂ ಎರಡು ಅರ್ಥಗಳಿವೆ. ಮೊದಲ ಅರ್ಥ-ಜಗನ್ಮೂಲ ವಸ್ತುವಾದ ಪರಬ್ರಹ್ಮದ ವ್ಯಕ್ತಸ್ವರೂಪ-ಎಂದರೆ ಪರಮಾತ್ಮ, ಭಗವಂತ, ಪರಮೇಶ್ವರ, ನಾರಾಯಣ, ದೇವರು ಅಂತ ಅರ್ಥ. ಪುರುಷಸೂಕ್ತದಲ್ಲಿವರ್ಣಿಸಲ್ಪಟ್ಟ ಪುರುಷ ಈ ಭಗವಂತನೇ ಆಗಿದ್ದಾನೆ. ಪುರುಷ ಶಬ್ದವು ಸಂಸ್ಕೃತದ ‘ಪೂ’ ಧಾತುವಿನಿಂದ ಬಂದಿದೆ. ಆ ಧಾತುವಿಗೆ ‘ಭರ್ತಿಮಾಡುವುದು’, ‘ಪೂರೈಸುವುದು’, ‘ತುಂಬುವುದು’ ಎಂಬ ಅರ್ಥಗಳಿವೆ. ಯಾವ ಒಂದು ಸತ್ತ್ವವು ಎಲ್ಲರಲ್ಲಿಯೂ ತುಂಬಿಕೊಂಡಿರುತ್ತದೆಯೋ ಅದು ಆ ದಶೆಯಲ್ಲಿ‘ಪುರುಷ’ ಎನ್ನಿಸಿಕೊಳ್ಳುತ್ತದೆ.
ಎರಡನೆಯ ಅರ್ಥ-‘ಪುರ’ ಎಂದರೆ ದೇಹ ಅಂತ. ದೇಹ ಧರಿಸಿದವನು ಪುರುಷ. ಆ ನೆಲೆಯಲ್ಲಿಪುರುಷ ಎಂದರೆ ದೇಹ ಧರಿಸಿದವ ಎಂದಾಗುತ್ತದೆ. ತತ್ತ್ವಾರ್ಥದಲ್ಲಿಪುರುಷನಿಗೆ ಆಕಾರ, ವರ್ಣ, ಶಬ್ದ, ಮೊದಲಾದ ಯಾವ ಗುರುತೂ ಇಲ್ಲ. ಅವನು ಯಾವ ಅಳತೆಗೂ ಪರೀಕ್ಷೆಗೂ ಸಿಗುವುದಿಲ್ಲ. ಅವನಲ್ಲಿಅಂದರೆ- ಆ ಜೀವದಲ್ಲಿಅಪಾರ ಶಕ್ತಿ ಅಡಗಿಕೊಂಡಿರುತ್ತದೆ. ಆ ಶಕ್ತಿಯ ಒಂದಂಶ ‘ನಾನು’, ‘ನಾನು’ ಎಂದುಕೊಂಡು ಈ ಪ್ರಪಂಚದೊಡನೆ ಬೆಸೆಯುತ್ತದೆ. ಅದೇ ಜೀವ- ಜೀವಾತ್ಮ. ಪರಬ್ರಹ್ಮದ ವ್ಯಕ್ತರೂಪ.
ಪುರಿ ಶೇತೇ ಯತಸ್ತಸ್ಮಾತ್ಪುರುಷೋ ಜೀವ ಉಚ್ಯತೇ |
ಸರ್ವಂ ಪೂರಯತೀತ್ಯೇವಂ ಪುರುಷೋ ಬ್ರಹ್ಮ ಭಣ್ಯತೇ || ಅನುಭೂತಿಪ್ರಕಾಶ
‘ಯಂ ಹಿ ನ ವ್ಯಥಯಂತ್ಯೇತೇ’ ಎಂಬ ಶ್ಲೋಕದಲ್ಲಿ‘ಪುರುಷ’ ಎಂಬ ಪದವು ಭಗವಂತ ಎಂಬ ಅರ್ಥದಲ್ಲೇ ಬಂದಿದೆ. ವಿಷಯ ಪ್ರಪಂಚದಿಂದ ಕಂಗೆಡದ ವ್ಯಕ್ತಿ ಭಗವಂತನನ್ನು ಕಾಣುತ್ತಾನೆ. ಭಗವಂತನನ್ನು ಅರಿತವನೇ ಅಮೃತತ್ತ್ವವನ್ನು ಪಡೆಯುತ್ತಾನೆ ಎಂದು ಕೃಷ್ಣ ಹೇಳಿದ.
ಇಲ್ಲಿಭಗವಂತ ಅರ್ಜುನನ್ನು ‘ಪುರುಷರ್ಷಭ’ ಎಂದು ಕರೆದಿದ್ದಾನೆ. ಇದು ಬಹಳ ಮುಖ್ಯವಾದ ಸಂಬೋಧನೆ. ಋುಷಭ ಎಂದರೆ ತಿಳಿದವನು ಅಂತ ಅರ್ಥ. ಋುಷತೀತಿ ಋುಷಭಃ. ಬಳಕೆಯಲ್ಲಿಇದರ ಅರ್ಥ ಶ್ರೇಷ್ಠ ಅಂತ. ಗೂಳಿಯಂತೆ ಹೋರಬಲ್ಲಸಾಹಸಿ ಎನ್ನುವುದು ಇದರ ಧ್ವನಿತಾರ್ಥ. ಅರ್ಜುನ ಎಂದರೆ ರಣಕಣದಲ್ಲಿಎಂತಹ ವೀರರ ಜೊತೆಗೂ ಹೋರಾಡಬಲ್ಲಸಾಹಸಿ. ಇಂತಹ ನೀನು ಕಂಗೆಟ್ಟರೆ ಹೇಗೆ? ಎಂಬುದು ಭಗವಂತನ ಚುಚ್ಚು ಮಾತು. ಇನ್ನೂ ಆಳಕ್ಕೆ ಇಳಿದು ಯೋಚಿಸುವುದಾದರೆ-ಇಂತಹ ದೇಹದಲ್ಲಿದ್ದೂ ವಿಷಯಗಳ ದ್ವಂದ್ವಾನುಭವಕ್ಕೆ ಒಳಗಾಗದ ಶ್ರೇಷ್ಠ ಪುರುಷ ಅರ್ಜುನ ಎಂದಾಗುತ್ತದೆ. ಅಂತಹ ಯೋಗ್ಯತೆ ಅರ್ಜುನನಿಗಿದೆ. ‘ಆದ್ದರಿಂದ ಈ ಬಂಧುಶೋಕದ ಮುಖವಾಡ ಕಳಚಿ ನಿಜವಾದ ಅರ್ಜುನನಾಗು’ ಎಂಬುದು ಭಗವಂತನ ಮಾತಿನ ತಾತ್ಪರ್ಯ.