ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯ ಜಂತರ್ ಮಂತರ್ ನಲ್ಲಿಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸುತ್ತಿರುವ ಪ್ರತಿಭಟನೆ ಬುಧವಾರ ರಾತ್ರಿ ಹಿಂಸಾರೂಪ ಪಡೆದಿದೆ. ಜಂತರ್ ಮಂತರ್ ಸನಿಹದ ಕನ್ನಾಟ್ ಪ್ಲೇಸ್ , ಟಾಲ್ ಸ್ಟಾಯ್ ಮಾರ್ಗದಲ್ಲಿರಾತ್ರಿ 8.30ರ ಹೊತ್ತಿಗೆ ಸಂಘರ್ಷ ಭುಗಿಲೆದ್ದಿದೆ.ಉದ್ರಿಕ್ತರು ಪೊಲೀಸರ ಮೇಲೆ ಕಲ್ಲುಮತ್ತು ಬಾಟಲಿಗಳಿಂದ ದಾಳಿ ನಡೆಸಿದ್ದು, ಸಂಘರ್ಷದಲ್ಲಿಕನ್ನಾಟ್ ಪ್ಲೇಸ್ ಎಸಿಪಿ ವಿವೇಕ್ ಭಗತ್ ಸೇರಿದಂತೆ ಐವರು ಪೊಲೀಸರು ಗಾಯಗೊಂಡಿದ್ದಾರೆ. ವಿವೇಕ್ ಭಗತ್ ಅವರನ್ನು ಚಿಕಿತ್ಸೆಗಾಗಿ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹಾಗೂ ಕ್ಷಿಪ್ರ ಕ್ರಿಯಾ ಪಡೆ (ಆರ್ ಎಎಫ್ ) ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗಿಸಿದ್ದಾರೆ. ಜಂತರ್ ಮಂತರ್ ಸುತ್ತಲಿನ ಪ್ರದೇಶದಲ್ಲಿಇಂಟರ್ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ದಿಲ್ಲಿಯ 16 ಮೆಟ್ರೊ ನಿಲ್ದಾಣಗಳನ್ನು ಸುಮಾರು 8 ಗಂಟೆಗಳ ಕಾಲ ಬಂದ್ ಮಾಡಿದ್ದರಿಂದ ಮೆಟ್ರೊ ಪ್ರಯಾಣಿಕರು ತೀವ್ರವಾಗಿ ಪರದಾಡಿದರು.