ಎಸ್ ಐಆರ್ ಮೇಲೆ ನಿಗಾ ಇಡಿ

Contributed by: manjunathrd59@gmail.com|Vijaya Karnataka•
bjp workers focus on voter list revision process
*ಬಿಜೆಪಿ ಜಿಲ್ಲಾವಿಶೇಷ ಕಾರ್ಯಕಾರಿಣಿ | ಕಾರ್ಯಕರ್ತರಿಗೆ ಬೊಮ್ಮಾಯಿ ಕರೆ

ವಿಕ ಸುದ್ದಿಲೋಕ ಹಾವೇರಿ
ಮತದಾರ ಪಟ್ಟಿ ಪರಿಷ್ಕರಣೆ ಸಂಪೂರ್ಣ ಪ್ರಕ್ರಿಯೆಯು ರಾಜ್ಯ ಸರಕಾರಿ ನೌಕರರ ಕೈಯಲ್ಲಿದೆ. ಅದರಲ್ಲೂಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾದ ಬಳಿಕ ಇದು ಇನ್ನಷ್ಟು ಅಪಾಯಕಾರಿಯಾಗಿದೆ. ಈ ಪ್ರಕ್ರಿಯೆ ಬಹಳ ಗಂಭೀರವಾಗಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರು ತಳಮಟ್ಟದಲ್ಲಿಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

ಇಲ್ಲಿಯ ಬಿಜೆಪಿ ಜಿಲ್ಲಾಕಾರ್ಯಾಲಯದಲ್ಲಿಶನಿವಾರ ಹಮ್ಮಿಕೊಳ್ಳಲಾಗಿದ್ದ ಪಕ್ಷದ ಜಿಲ್ಲಾವಿಶೇಷ ಕಾರ್ಯಕಾರಿಣಿ ಸಭೆಯಲ್ಲಿಮಾತನಾಡಿದ ಅವರು, ‘‘ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಮಗೆ ಹೊಸದಾಗಿದ್ದು, ಪಕ್ಷದ ಕಾರ್ಯಕರ್ತರು ನಿರಂತರವಾಗಿ ಒಂದು ತಿಂಗಳ ಕಾಲ ಮೈಮುರಿದು ಕೆಲಸ ಮಾಡಬೇಕಾದ ಅಗತ್ಯವಿದೆ. ಎಸ್ ಐಆರ್ ನಲ್ಲಿನಡೆಯುತ್ತಿರುವ ‘ಮ್ಯಾಪಿಂಗ್ ’ ಎಂದರೆ ಒಂದೇ ಹೆಸರು ಎರಡು ಬಾರಿ ಇರುವುದನ್ನು ಸಾಫ್ಟ್ ವೇರ್ ಮೂಲಕ ತೆಗೆದುಹಾಕುವುದು. ಇನ್ನು ‘ಪ್ರೊಜನಿ’ ಎಂದರೆ ಹಳೆಯ ದಾಖಲೆಗಳನ್ನು ಪರಿಶೀಲಿಸಿ ಮತದಾರರ ಪಟ್ಟಿಗೆ ಹೆಸರು ಸೇರಿಸುವುದು. ಆದರೆ ಈ ಪ್ರಕ್ರಿಯೆಯು ರಾಜ್ಯ ಸರಕಾರಿ ನೌಕರರ ಕೈಯಲ್ಲಿದೆ. ಅದರಲ್ಲೂಡಿ.ಕೆ.ಶಿವಕುಮಾರ ಅವರು ಮುಖ್ಯಮಂತ್ರಿಯಾದ ಬಳಿಕ ಇದು ಇನ್ನಷ್ಟು ಅಪಾಯಕಾರಿಯಾಗಿದೆ. ಅಧಿಕಾರಿಗಳ ಮೇಲೆ ಯಾವ ರೀತಿಯ ಒತ್ತಡ ಹೇರಲಾಗುತ್ತಿದೆ ಎಂಬುದನ್ನು ನಾವು ಗಮನಿಸುತ್ತಿದ್ದೇವೆ’’ ಎಂದು ಹೇಳಿದರು.

ಅಧಿಕಾರಿಗಳ ನಡೆಗೆ ಆಕ್ಷೇಪ:

‘‘ಬಂಕಾಪುರದ ಮಸೀದಿಯೊಂದರಲ್ಲಿನಡೆದ ಪ್ರಕ್ರಿಯೆ ಕುರಿತು ವಿಡಿಯೊ ಸಾಕ್ಷ್ಯ ನೀಡಿದ್ದರೂ ಜಿಲ್ಲಾಧಿಕಾರಿಗಳು ಅಲ್ಲಿಏನೂ ನಡೆದಿಲ್ಲಎಂದು ಹೇಳುತ್ತಿದ್ದಾರೆ. ದೂರು ನೀಡಿದ ಬಳಿಕವೂ ಅಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸದೆ ಹೇಗೆ ಕ್ಲೀನ್ ಚೀಟ್ ನೀಡುತ್ತಾರೆ?’’ ಎಂದು ಪ್ರಶ್ನಿಸಿದರು.

ಕಾರ್ಯಕರ್ತರಿಗೆ ಎಚ್ಚರಿಕೆ:

‘‘ಎಲ್ಲರೂ ಒಗ್ಗಟ್ಟಾಗಿ ಕೈಜೋಡಿಸಿ ಕೆಲಸ ಮಾಡಿದರೆ ಮಾತ್ರ ನಮ್ಮಲ್ಲಿಒಬ್ಬರು ಎಂಎಲ್ ಎ ಆಗಲು ಸಾಧ್ಯ. ಇಲ್ಲದಿದ್ದರೆ ಬರೀ ಹೆಸರಷ್ಟೇ ಉಳಿಯುತ್ತದೆ. ಕಾರ್ಯಕರ್ತರು ಕೇವಲ ಕಾರ್ಯಕ್ರಮಗಳಲ್ಲಿಭಾಗವಹಿಸುವುದು ಅಥವಾ ಭಾಷಣ ಮಾಡುವುದನ್ನು ಬಿಟ್ಟು, ಕನಿಷ್ಠ ಒಂದು ತಿಂಗಳ ಕಾಲ ಕ್ಷೇತ್ರಗಳ ತಳಮಟ್ಟಕ್ಕೆ ಇಳಿದು ಕೆಲಸ ಮಾಡಬೇಕು. ಪ್ರತಿ ಊರು, ಪ್ರತಿ ಬೂತ್ ಮಟ್ಟದಲ್ಲಿಬಿಎಲ್ ಎ-2 ಜೊತೆಗೆ ಇನ್ನು ಐದಾರು ಜನರನ್ನು ಸೇರಿಸಿಕೊಂಡು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕಾಗಿದೆ’’ ಎಂದರು.

ಮತದಾರರ ಪಟ್ಟಿ ತಾಂತ್ರಿಕ ಪರಿಷ್ಕರಣೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ‘‘ನಮ್ಮ ಮತಗಳು ಹೇಗೆ ಕಟ್ ಆಗುತ್ತಿವೆ ಮತ್ತು ಬೇರೆಯವರ ಮತಗಳು ಹೇಗೆ ಸೇರ್ಪಡೆಯಾಗುತ್ತಿವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಕಳೆದ ಚುನಾವಣೆಗಳಲ್ಲಿನಡೆದ ತಪ್ಪುಗಳನ್ನು ಸರಿಪಡಿಸಿ, ಮುಂಬರುವ ದಿನಗಳಲ್ಲಿಯಾವುದೇ ಲೋಪದೋಷಗಳಾಗದಂತೆ ಎಚ್ಚರಿಕೆ ವಹಿಸಬೇಕು. ಮುಂಬರುವ ಚುನಾವಣೆಗಳಲ್ಲಿಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಮತ್ತು ಪಕ್ಷದ ಗೌರವ ಉಳಿಸಲು ನಾವೆಲ್ಲರೂ ಶ್ರಮಿಸಬೇಕಾಗಿದೆ’’ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ವಿಧಾನ ಪರಿಷತ್ ಸದಸ್ಯರಾದ ಎಸ್ .ವಿ.ಸಂಕನೂರ, ಲಿಂಗರಾಜ ಪಾಟೀಲ್ , ಮಾಜಿ ಶಾಸಕರಾದ ಶಿವರಾಜ ಸಜ್ಜನರ, ಅರುಣಕುಮಾರ ಪೂಜಾರ, ಪ್ರಮುಖರಾದ ದತ್ತಾತ್ರೇಯ, ಭರತ ಬೊಮ್ಮಾಯಿ, ಡಾ. ಬಸವರಾಜ ಕೇಲಗಾರ, ಜಯತೀರ್ಥ ಕಟ್ಟಿ ಡಿ.ಎಸ್ ಮಾಳಗಿ, ಗವಿಸಿದ್ದಪ್ಪ ದ್ಯಾಮಣ್ಣವರ, ಸಿದ್ದರಾಜ ಕಲಕೋಟಿ, ಭೋಜರಾಜ ಕರೂದಿ ಇತರರು ಇದ್ದರು.

-

ಬಾಕ್ಸ್

ಸಂಘಟನೆ ಬಲಪಡಿಸಿ: ಜೋಶಿ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ‘‘ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ ಅಭಿವೃದ್ಧಿ ಕಾರ್ಯಗಳು ಹಾಗೂ ಜನಪರ ಯೋಜನೆಗಳನ್ನು ಪ್ರತಿಯೊಂದು ಮನೆಗೂ ತಲುಪಿಸಬೇಕು. ಸರಕಾರದ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಮುಂಬರುವ ದಿನಗಳಲ್ಲಿಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು. ಕಾರ್ಯಕರ್ತರು ಮನೆ-ಮನೆಗೆ ಭೇಟಿ ನೀಡಿ ಪ್ರತಿಯೊಬ್ಬ ಅರ್ಹ ಮತದಾರರ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು. ಎಸ್ ಐಆರ್ ಪ್ರಕ್ರಿಯೆ ಪಾರದರ್ಶಕ ರೀತಿಯಲ್ಲಿಆಗುವಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು’’ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಪೋಟೋ 11 ಮಂಜು 12

ಹಾವೇರಿಯ ಬಿಜೆಪಿ ಜಿಲ್ಲಾಕಚೇರಿಯಲ್ಲಿನಡೆದ ಕಾರ್ಯಕಾರಿಣಿ ಸಭೆಯಲ್ಲಿಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು.