ವಿಜಯೀಂದ್ರ ತೀರ್ಥರು

Contributed by: Shridevi Ambekallu|Vijaya Karnataka•
sri vijayanendra teertha great scholars of philosophy
ಚತುಃಷಷ್ಟಿ ಕಲಾನಿಪುಣರು

ಶ್ರೀ ವಿಜಯೀಂದ್ರತೀರ್ಥರು
-----------

ಸುಬ್ರಹ್ಮಣ್ಯ ಎಂ.ಕೆ.

----

ಶ್ರೀ ವಿಜಯೀಂದ್ರ ತೀರ್ಥರ ಆರಾಧನೆ ಜು. 12ರಂದು. ಅವರ ಬದುಕು ಹಾಗೂ ಮಹಿಮೆ ಕುರಿತ ಕಿರುಪರಿಚಯವಿದು.

---

ಶ್ರೀವ್ಯಾಸರಾಜರು ಒಮ್ಮೆ ಸಂಚಾರದಲ್ಲಿದ್ದಾಗ ಒಂದು ಗ್ರಾಮಕ್ಕೆ ಆಗಮಿಸಿದರು. ಆಗ ಅಲ್ಲಿನ ಗ್ರಾಮಾಧಿಕಾರಿಯ ಪ್ರಾರ್ಥನೆಯಂತೆ ಸ್ವಲ್ಪ ಸಮಯ ಬಿಡಾರ ಮಾಡಿದರು. ವೃದ್ಧನಾಗಿದ್ದ, ಮಕ್ಕಳಿಲ್ಲದ ಗ್ರಾಮಾಧಿಕಾರಿ ಹಾಗೂ ಅವನ ಪತ್ನಿ ಬಹಳ ಶ್ರದ್ಧಾಭಕ್ತಿಗಳಿಂದ ಶ್ರೀ ವ್ಯಾಸರಾಜರನ್ನು ಸೇವಿಸಿದಾಗ, ಸಂತುಷ್ಟರಾದ ಶ್ರೀ ವ್ಯಾಸರಾಜರು ಅವರಿಗೆ ಪುತ್ರ ಸಂತಾನ ಆಗುವಂತೆ ಆಶೀರ್ವದಿಸಿದರು. ಅದರ ಫಲವಾಗಿ ದಂಪತಿಗಳಿಗೆ ಕ್ರಿ.ಶ.1517ನೇ ಇಸವಿಯಲ್ಲಿಇಬ್ಬರು ಗಂಡು ಮಕ್ಕಳು (ವಿಠಲಾಚಾರ್ಯ ಹಾಗೂ ಗುರುಪ್ರಸಾದ) ಜನಿಸಿದರು. ಜೇಷ್ಠ ಪುತ್ರ ವಿಠಲಾಚಾರ್ಯ ಉಪನೀತನಾಗಿ, ಶ್ರೀ ವ್ಯಾಸರಾಜರಿಗೆ, ಅವರ ಕೋರಿಕೆಯಂತೆ ಸಮರ್ಪಿಸಲ್ಪಟ್ಟನು. ಅವರು ತಮ್ಮ ಗುರುಕುಲದಲ್ಲಿಅವನನ್ನು ಪೋಷಿಸಿದರಲ್ಲದೆ, ಎಂಟನೇ ವಯಸ್ಸಿಗೆ ಸನ್ಯಾಸವನ್ನು ಕೊಟ್ಟು ಶ್ರೀ ವಿಷ್ಣುತೀರ್ಥ ಎಂಬ ಆಶ್ರಮನಾಮವನ್ನೂ ನೀಡಿದರು. ಶ್ರೀ ವಿಷ್ಣುತೀರ್ಥರು ಶ್ರೀ ವ್ಯಾಸರಾಜರಿಂದ ಚತುಃಷಷ್ಟಿ (64) ವಿದ್ಯೆಗಳನ್ನು ಕರಗತ ಮಾಡಿಕೊಂಡು ಗುರುಗಳ ಪರಮಾನುಗ್ರಹಕ್ಕೆ ಪಾತ್ರರಾದರು. ವಿದ್ಯಾವಿನಯ ಸಂಪನ್ನರಾಗಿ ಶೋಭಿಸುತ್ತಿದ್ದ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸುವ ಅಪೇಕ್ಷೆ ಶ್ರೀ ವ್ಯಾಸರಾಜರಿಗೆ ಇತ್ತು. ಆದರೆ, ಶ್ರೀ ಸುರೇಂದ್ರತೀರ್ಥರ ಕೋರಿಕೆಯಂತೆ ಅವರ ಮಠಕ್ಕೆ ಶ್ರೀ ವಿಷ್ಣುತೀರ್ಥರನ್ನು ಸಮರ್ಪಿಸಿದರು.

ಕ್ರಿ.ಶ.1530ರ ಶುಭದಿನವೊಂದರಲ್ಲಿವಿಜಯನಗರದ ಅರಸ ಶ್ರೀಕೃಷ್ಣ ದೇವರಾಯ ಮತ್ತು ವಿದ್ವಜ್ಜನರ ಸಮ್ಮುಖದಲ್ಲಿಶ್ರೀ ವಿಷ್ಣುತೀರ್ಥರಿಗೆ, ಶ್ರೀ ಸುರೇಂದ್ರತೀರ್ಥರು ತಮ್ಮ ಮಠದ ಸಂಪ್ರದಾಯದಂತೆ ದಂಡಕಮಂಡಲಗಳನ್ನು ಪಲ್ಲಟ ಮಾಡಿ, ಮುದ್ರಾಂಕಿತ, ಮಂತ್ರೋಪದೇಶವಿತ್ತು ‘ಶ್ರೀ ವಿಜಯೀಂದ್ರ ತೀರ್ಥರು’ ಎಂಬ ನಾಮಕರಣವನ್ನು ಮಾಡಿದರು. ಪುರಂದರದಾಸರು, ಕನಕದಾಸರು, ಶ್ರೀವಾದಿರಾಜರು, ಶ್ರೀನಿವಾಸತೀರ್ಥರು ಶ್ರೀ ವಿಜಯೀಂದ್ರತೀರ್ಥರ ಸಮಕಾಲೀನರು.

ಪಾಂಡಿತ್ಯದಿಂದ ಹೆಸರಾದವರು

ಶ್ರೀ ವಿಜಯೀಂದ್ರರು ನೂರಾರು ಪಂಡಿತರೊಡನೆ ವಿವಿಧ ಶಾಸ್ತ್ರಗಳಲ್ಲಿವಾದ ಮಾಡಿ ಜಯಿಸಿದರಲ್ಲದೆ, ಸಂಗೀತಗಾರರನ್ನು, ವೈದ್ಯರನ್ನು, ಮಾಂತ್ರಿಕರನ್ನು, ಕೊರವಂಜಿಗಳನ್ನು, ನೇಕಾರರನ್ನು, ಕಮ್ಮಾರರನ್ನು, ದೊಂಬರನ್ನು, ಗಾರಡಿಗರನ್ನು, ನಾನಾ ಪ್ರಕಾರದ ಕ್ರೀಡಾಪಟುಗಳನ್ನು ಇನ್ನಿತರರನ್ನೂ ತಮ್ಮ ಪಾಂಡಿತ್ಯದಿಂದ ಜಯಸಿ, ‘ಚತುಃಷಷ್ಟಿಕಲಾಪಾರೀಣಶೇಖರ’ ಎಂಬ ಬಿರುದನ್ನೂ ಪಡೆದರು. ಕಲಿಯುಗದ ಕಾಮಧೇನು, ಕಲ್ಪವೃಕ್ಷ ಎಂದು ಕರೆಯಿಸಿಕೊಳ್ಳುವ ‘ಶ್ರೀ ರಾಘವೇಂದ್ರಸ್ವಾಮಿಗಳು’ ಇವರ ‘ಪರಮಶಿಷ್ಯರು’ (ಶಿಷ್ಯರ ಶಿಷ್ಯರು). ಶ್ರೀ ವಿಜಯೀಂದ್ರರು ಜ್ಯೋತಿಷ, ಮೀಮಾಂಸ, ವ್ಯಾಕರಣ, ಅಲಂಕಾರ, ನ್ಯಾಯಶಾಸ್ತ್ರ, ಮುಂತಾದ ವಿಷಯಗಳ ಕುರಿತು ಶ್ರೇಷ್ಠ ಗ್ರಂಥಗಳನ್ನೂ, ಪ್ರಬಂಧಗಳನ್ನೂ ರಚಿಸಿದ್ದಾರೆ.

ತೀರ್ಥರ ಮಹಿಮೆ

‘ದೇಗುಲಗಳ ನಗರ’ ಎಂದೇ ಪ್ರಸಿದ್ಧವಾದ ಕುಂಭಕೋಣದಲ್ಲಿಸನ್ಯಾಸಿಯೊಬ್ಬ ತನ್ನ ವಾಮಾಚಾರ, ಮಾಂತ್ರಿಕ ವಿದ್ಯೆಯ ಪ್ರಭಾವದಿಂದ ಕುಂಬೇಶ್ವರ ದೇವಾಲಯವನ್ನು ಒಳಗೊಂಡಂತೆ ಎಲ್ಲಾದೇಗುಲಗಳ ಧರ್ಮದರ್ಶಿಗಳನ್ನೂ ಭಯಪಡಿಸಿ, ತಂತ್ರಗಳ ಪ್ರಯೋಗದಿಂದ ಆಡಳಿತ ಅಧಿಕಾರವನ್ನು ತನ್ನದಾಗಿಸಿಕೊಂಡು, ವಿಪ್ರವೃಂದಕ್ಕೆ ತೊಂದರೆಗಳನ್ನು ಕೊಡುತ್ತಿದ್ದುದನ್ನು ತಿಳಿದ ಶ್ರೀ ವಿಜಯೀಂದ್ರತೀರ್ಥರು, ಸನ್ಯಾಸಿಯನ್ನು ವಾಗ್ವಾದಕ್ಕೆ ಆಹ್ವಾನಿಸಿ ಅವನನ್ನು ಸೋಲಿಸಿ ಆಡಳಿತ ಅಧಿಕಾರ ಹಿಂಪಡೆದರು.

ಕುಂಬೇಶ್ವರ ಗೋಪುರದಿಂದ ಸಾರಂಗಪಾಣಿ ಗೋಪುರಕ್ಕೆ ಕಟ್ಟಿದ್ದ ಹೂವುಕಟ್ಟುವ ಎಳೆಯ ಬಾಳೆನಾರಿನ ಮೇಲೆ ನಡೆದು ದೊಂಬರನನ್ನು ಸೋಲಿಸಿ ತಮ್ಮ ದೊಂಬರವಿದ್ಯೆ ಪ್ರದರ್ಶಿಸಿದರು. ಕುಂಭಕೋಣದಲ್ಲೇ ನೆಲೆಸಿದ್ದರ ಪರಿಣಾಮವಾಗಿ, ಅವರ ನೇತೃತ್ವದಲ್ಲಿವಿದ್ಯಾನಗರಿಯಾಗಿ ಶೋಭಿಸಿ ಕುಂಭಕೋಣವು ‘ದಕ್ಷಿಣ ವಾರಾಣಸಿ’ ಎಂಬ ಹೆಸರನ್ನು ಸಾರ್ಥಕ ಪಡಿಸಿಕೊಂಡಿತು.

ಶ್ರೀ ಸುರೇಂದ್ರತೀರ್ಥರ ನಿರ್ಯಾಣದ ನಂತರ ಶ್ರೀ ವಿಜಯೀಂದ್ರತೀರ್ಥರು ಸುಮಾರು 40 ವರ್ಷಗಳ ಕಾಲ ಮಹಾಸಂಸ್ಥಾನವನ್ನು ಪಾಲಿಸಿದರು. ಅಪರೋಕ್ಷಿಗಳಾದ ಶ್ರೀ ವಿಜಯೀಂದ್ರತೀರ್ಥರಿಗೆ ಅಂತ್ಯಕಾಲ ಸಮೀಪಿಸುತ್ತಿರುವ ಅರಿವಾದಾಗ, ಶ್ರೀ ಸುಧೀಂದ್ರತೀರ್ಥರಿಗೆ ಹಿತೋಪದೇಶ ನೀಡಿ, ತಮ್ಮ ಭಕ್ತವೃಂದಕ್ಕೆ ಅನುಗ್ರಹ ಸಂದೇಶ ನೀಡಿ, 97ನೇ ವಯಸ್ಸಿನಲ್ಲಿಕ್ರಿ.ಶ.1614ರ ಜೇಷ್ಠ ಬಹುಳ ತ್ರಯೋದಶಿಯಂದು ಕುಂಭಕೋಣದಲ್ಲಿಹರಿಧ್ಯಾನದೊಂದಿಗೆ ತಮ್ಮ ಅವತಾರ ಕಾರ್ಯವನ್ನು ಸಮಾಪ್ತಗೊಳಿಸಿದರು. ಕ್ಷೇತ್ರ ಮೂರ್ತಿಯಾದ ಶ್ರೀಲಕ್ಷ್ಮಿನಾರಾಯಣ ಸನ್ನಿಧಿಯ ಎದುರು ಭಾಗದಲ್ಲಿಬೃಂದಾವನಸ್ಥರಾದರು. ಶಿಷ್ಯರಾದ ಶ್ರೀ ಸುಧೀಂದ್ರತೀರ್ಥರಿಂದ ರಚಿತವಾದ ಶ್ರೀ ವಿಜಯೀಂದ್ರತೀರ್ಥರ ಚರಮ ಶ್ಲೋಕ,

‘ಭಕ್ತನಾಂ ಮಾನಸಾಂಭೋಜ ಭಾನವೇ ಕಾಮಧೇನವೇ|

ನಮತಾಂ ಕಲ್ಪತರವೇ ಜಯೀಂದ್ರ ಗುರುವೇ ನಮಃ||’.

-------