ಚುನಾವಣೆ ವೇಳೆ ತಡೆಗೋಡೆ ಕುಸಿತ *ಮೂವರಿಗೆ ಆಸ್ಪತ್ರೆಯಲ್ಲಿಚಿಕಿತ್ಸೆ
ವಿಕ ಸುದ್ದಿಲೋಕ ಮಂಗಳೂರುನಗರದ ಎಮ್ಮೆಕೆರೆ ಕ್ರಾಸ್ ನ ರಮಾಲಕ್ಷ್ಮೀ ನಾರಾಯಣ ಕನ್ವೆನ್ಶನ್ ಸಭಾಂಗಣದಲ್ಲಿಶನಿವಾರ ನಡೆದ ಸರ್ವ ಕಾಲೇಜು ವಿದ್ಯಾರ್ಥಿಗಳ ಚುನಾವಣೆ ಹಾಗೂ ಪದಗ್ರಹಣ ಕಾರ್ಯಕ್ರಮದ ವೇಳೆ ಪ್ಯಾಸೇಜ್ ನ ತಡೆಗೋಡೆ ಕುಸಿದು ಗಂಭೀರವಾಗಿ ಗಾಯಗೊಂಡಿದ್ದ 16 ವರ್ಷದ ವಿದ್ಯಾರ್ಥಿ ಮೊಹಿದ್ದೀನ್ ಶಮ್ಮಾಸ್ ಚಿಕಿತ್ಸೆ ಫಲಿಸದೆ ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿ ಕಟ್ಟಡ ಮಾಲೀಕ ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಸೂರಿಂಜೆ ನಿವಾಸಿ ಮಹಮ್ಮದ್ ಶನಾನ್ ಅಹಮ್ಮದ್ (18), ಅಡ್ಯಾರ್ ನಿವಾಸಿ ಹನೀಫ್ (23) ಹಾಗೂ ಕಾವೂರು ಗಾಂಧಿನಗರದ ದಾವೂದ್ ಫರ್ಸಿನ್ ಅಹಮ್ಮದ್ (18) ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ.
ಪಾಂಡೇಶ್ವರ ಎಮ್ಮೆಕೆರೆಯ ರಮಾಲಕ್ಷ್ಮೀ ನಾರಾಯಣ ಹಾಲ್ ನಲ್ಲಿಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಮುಖ್ಯಸ್ಥ ದಿನಕರ ಶೆಟ್ಟಿ ಎಂಬವರು ಸಂಘದ ಅಧ್ಯಕ್ಷರು, ಉಪಾಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳ ಚುನಾವಣೆಯ ಬಳಿಕ ಪದಗ್ರಹಣ ಹಾಗೂ ಪ್ರಮಾಣ ವಚನ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಏಕಾಏಕಿ ಪ್ಯಾಸೇಜ್ ನ ತಡೆಗೋಡೆ ಕುಸಿದಿದೆ. ಗೋಡೆಯ ಮೇಲಿದ್ದ ಮೂವರು ವಿದ್ಯಾರ್ಥಿಗಳು ಕೆಳಗೆ ಬಿದ್ದಿದ್ದು, ಕೆಳಗೆ ನಿಂತಿದ್ದ ಶಮ್ಮಾಸ್ ಗೂ ಗಂಭೀರ ಗಾಯಗಳಾಗಿವೆ. ಶಮ್ಮಾಸ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ರಾತ್ರಿ 11.33ರ ವೇಳೆಗೆ ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿ ಕಾರ್ಯಕ್ರಮ ಆಯೋಜಕ ದಿನಕರ ಶೆಟ್ಟಿ ಹಾಗೂ ಶಿಥಿಲಾವಸ್ಥೆಯ ಕಟ್ಟಡದಲ್ಲಿಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಟ್ಟ ಆರೋಪದಡಿ ಕಟ್ಟಡ ಮಾಲೀಕ ಪರೀಕ್ಷಿತ್ ರೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.