ಮಾಡಬಾರದ 10 ತಪ್ಪುಗಳು ಯಾವುವು?ಮ್ಯೂಚುವಲ್ ಫಂಡ್ ಹೂಡಿಕೆ ಕುರಿತು ಹೆಚ್ಚಿನ ಜನರಿಗೆ ಮಾಹಿತಿ ಇರುವುದಿಲ್ಲ. ಅದರಲ್ಲೂ, ಹೂಡಿಕೆದಾರರು ಕೆಲವು ತಪ್ಪು ಕಲ್ಪನೆಗಳನ್ನೂ ಹೊಂದಿರುತ್ತಾರೆ. ಹೂಡಿಕೆ ಮಾಡಿದ ತಕ್ಷಣ ಹೆಚ್ಚಿನ ರಿಟನ್ಸ್ ರ್ ಬಯಸುವುದು, ಯಾವುದೇ ಹಣಕಾಸು ಗುರಿ ಇಲ್ಲದೆ ಹೂಡಿಕೆ ಮಾಡುವುದು, ತಜ್ಞರ ಸಲಹೆ ಪಡೆಯದಿರುವುದೂ ಸೇರಿ ಹಲವು ತಪ್ಪು ಹೆಜ್ಜೆಗಳನ್ನು ಇರಿಸುತ್ತಾರೆ. ಇದನ್ನು ಗಮನದಲ್ಲಿಇಟ್ಟುಕೊಂಡು, ಹೂಡಿಕೆದಾರರು ಮ್ಯೂಚುವಲ್ ಫಂಡ್ ಹೂಡಿಕೆ ವೇಳೆ ಮಾಡುವ ಸಾಮಾನ್ಯ 10 ತಪ್ಪುಗಳು ಯಾವುವು? ಏನು ಮಾಡಬೇಕು ಎಂಬುದರ ಗೈಡೆನ್ಸ್ ಇಲ್ಲಿದೆ.
=========
ಡಿಜಿಟಲ್ ಯುಗದಲ್ಲಿಮ್ಯೂಚುವಲ್ ಫಂಡ್ ಗಳಲ್ಲಿಹೂಡಿಕೆ ಮಾಡುವುದು ತುಂಬ ಸುಲಭ. ಹಾಗೆಯೇ, ಹೂಡಿಕೆದಾರರಿಗೆ ಈಗ ಹತ್ತಾರು ಆಯ್ಕೆಗಳು ಕೂಡ ಇವೆ. ಹೂಡಿಕೆ ಮಾಡುವ ಅಗ್ರಿಗೇಟರ್ ಗಳಿಂದ ಹಿಡಿದು ನೂರಾರು ಫಂಡ್ ಗಳವರೆಗೆ ಆಯ್ಕೆಗಳ ಪಟ್ಟಿಯೇ ಹೂಡಿಕೆದಾರರ ಮುಂದಿದೆ. ಇದಕ್ಕೆ ತಕ್ಕಂತೆ, ಹೂಡಿಕೆದಾರರ ಸಂಖ್ಯೆಯೂ ದಿನೇದಿನೆ ಜಾಸ್ತಿಯಾಗುತ್ತಿದೆ. ಆದರೆ, ಹೂಡಿಕೆ ಮಾಡುವ ವೇಳೆ ಹೂಡಿಕೆದಾರರು ಇರಿಸುವ ಸಣ್ಣ ತಪ್ಪು ಹೆಜ್ಜೆ ಕೂಡ ದೊಡ್ಡ ನಷ್ಟಕ್ಕೆ ಕಾರಣವಾಗುತ್ತದೆ ಎಂಬುದು ಗಮನಾರ್ಹ ಸಂಗತಿ. ಹಾಗಾಗಿ, ಹೂಡಿಕೆದಾರರು ಯಾವ ತಪ್ಪುಗಳನ್ನು ಮಾಡಬಾರದು ಎಂಬುದರ ಕುರಿತು ಮಾಹಿತಿ ನೀಡುವ ದೃಷ್ಟಿಯಿಂದ ಈ ಲೇಖನವನ್ನು ನಿಮ್ಮ ಮುಂದಿರಿಸಲಾಗಿದೆ.
1. ಸ್ಪಷ್ಟ ಗುರಿ ಇಲ್ಲದೆ ಹೂಡಿಕೆ ಮಾಡುವುದು
ಹಣಕಾಸು ಗುರಿಗಳು ಇಲ್ಲದೆ ಹೂಡಿಕೆ ಮಾಡುವುದು ಮೊದಲ ತಪ್ಪಾಗಿದೆ. ಮನೆ ಖರೀದಿ, ಮಕ್ಕಳ ಶಿಕ್ಷಣ, ಮದುವೆ ಸೇರಿ ಸ್ಪಷ್ಟ ಹಣಕಾಸು ಗುರಿ ಇಟ್ಟುಕೊಂಡು ಹೂಡಿಕೆ ಮಾಡಿದರೆ ನಿಖರವಾದ ಸಂಪತ್ತು ಸೃಷ್ಟಿ ಸಾಧ್ಯವಾಗುತ್ತದೆ. ಇಲ್ಲದಿದ್ದರೆ, ಯಾವ ಸಂದರ್ಭದಲ್ಲಿಹೂಡಿಕೆಯ ಹಣ ಹಿಂಪಡೆಯಬೇಕು ಎಂಬುದರ ಕುರಿತು ಸ್ಪಷ್ಟತೆಯೇ ಇರುವುದಿಲ್ಲ. ಇದರಿಂದ ಪೋರ್ಟ್ ಫೋಲಿಯೊ ಅಪಾಯಕ್ಕೆ ಸಿಲುಕುವ ಸಾಧ್ಯತೆಯೂ ಇರುತ್ತದೆ.
ಪರಿಹಾರ:
ನಿಮ್ಮ ಹಣಕಾಸು ಗುರಿ ಏನು? 7 ವರ್ಷದ ಬಳಿಕ ಮಗ ಅಥವಾ ಮಗಳ ಉನ್ನತ ಶಿಕ್ಷಣಕ್ಕೆ ನಿಧಿ ಸೃಷ್ಟಿಸಬೇಕಾ? ನಾಲ್ಕು ವರ್ಷಗಳ ಬಳಿಕ ಖರೀದಿಸುವ ಮನೆಗಾಗಿ ಡೌನ್ ಪೇಮೆಂಟ್ ಸೃಷ್ಟಿಸಬೇಕಾ? 60 ವರ್ಷಕ್ಕೆ ಮೊದಲೇ ನಿವೃತ್ತಿ ಹೊಂದಿ ಇಷ್ಟದ ಕೆಲಸ ಮಾಡಿಕೊಂಡಿರಬೇಕಾ? ಹೀಗೆ, ಸ್ಪಷ್ಟ ಗುರಿಯೊಂದಿಗೆ ಹೂಡಿಕೆ ಮಾಡಿದರೆ ಮಾತ್ರ ನಿಗದಿತ ಮೊತ್ತವನ್ನು ಯಾವುದೇ ಅಡೆತಡೆ ಇಲ್ಲದೆ ಸೃಷ್ಟಿಸಬಹುದು.
2. ರಿಟನ್ಸ್ ರ್ ಲೆಕ್ಕಾಚಾರದ ಮೇಲೆ ಹೂಡಿಕೆ
ಕಳೆದ 3 ಅಥವಾ 5 ವರ್ಷಗಳಲ್ಲಿಯಾವುದಾದರೂ ಒಂದು ಫಂಡ್ ಎಷ್ಟು ರಿಟನ್ಸ್ ರ್ ನೀಡಿದೆ ಎಂಬ ಲೆಕ್ಕಾಚಾರ ಹಾಕಿ, ಅದೇ ಫಂಡ್ ನಲ್ಲಿಹೂಡಿಕೆ ಮಾಡುವುದು ಪ್ರಮುಖ ಪ್ರಮಾದ. ಇಲ್ಲಿಹೂಡಿಕೆದಾರರನ್ನು ಅಪಾಯಕ್ಕೆ ತಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಪರಿಹಾರ:
ಫಂಡ್ ಗಳು, ಮಾರುಕಟ್ಟೆ ಕುರಿತು ಅಧ್ಯಯನ ಮಾಡಿ. ಪರಿಣತರ ಸಲಹೆ ಪಡೆದು ಮುಂದುವರಿಯಿರಿ.
3. ಅಸೆಟ್ ಅಲೊಕೇಷನ್ ಮಾಡದಿರುವುದು
ಅಸೆಟ್ ಅಲೊಕೇಷನ್ ಪ್ರಮುಖ ಸಂಗತಿ. ನೀವು ಹೂಡಿಕೆ ಮಾಡಿದಂತೆಲ್ಲಫಂಡ್ ಜಾಸ್ತಿಯಾಗುತ್ತದೆ. ನೀವೊಂದು ವೇಳೆ 70:30 ‘ಈಕ್ವಿಟಿ ಟು ಡೆಟ್ ’ ರೇಷಿಯೋದಲ್ಲಿಹೂಡಿಕೆ ಮಾಡಿದ್ದರೂ, ಮಾರುಕಟ್ಟೆಯ ಸತತ ಏರಿಕೆಯಿಂದ ಈಕ್ವಿಟಿಯಲ್ಲಿಹೂಡಿದ ಪ್ರಮಾಣವು ಶೇ.85ಕ್ಕೆ ಏರಿಕೆಯಾಗಬಹುದು. ಆಗ ಮಾರುಕಟ್ಟೆ ಕುಸಿದರೆ ನಿಮ್ಮ ಹೂಡಿಕೆ ಮೊತ್ತವು ದಿಢೀರನೆ ಕುಸಿಯುವ ಅಪಾಯವಿರುತ್ತದೆ.
ಪರಿಹಾರ:
ಈ ನಿಟ್ಟಿನಲ್ಲಿನಿಮ್ಮ ಅಸೆಟ್ ಅಲೊಕೇಷನ್ ಬಹಳ ಮುಖ್ಯ. ವಿವರಕ್ಕೆ ಕೆಳಗಿನ ಟೇಬಲ್ ಗಮನಿಸಿ.
ನಿಮ್ಮ ಅಸೆಟ್ ಅಲೊಕೇಷನ್
ಪೋರ್ಟ್ ಫೋಲಿಯೊ ವಿಭಾಗ ನಿಗದಿತ ಹೂಡಿಕೆ ಪ್ರಮಾಣ ಬ್ಯಾಲೆನ್ಸ್ ಆಗದಿದ್ದರೆ ಪಾಲಿಸಬೇಕಾದ ಕ್ರಮ
ಈಕ್ವಿಟಿ ಫಂಡ್ ಗಳು 70% 85% (ಹೂಡಿಕೆ ಪ್ರಮಾಣ ಅಧಿಕ) ಹೆಚ್ಚು ಲಾಭ ನೀಡಿದ ಈಕ್ವಿಟಿ ಫಂಡ್ ಗಳ ಲಾಭ ಹಿಂಪಡೆಯುವುದು
ಡೆಟ್ ಫಂಡ್ ಗಳು 30% 15% (ಹೂಡಿಕೆ ಪ್ರಮಾಣ ಕುಸಿತ) ಈಕ್ವಿಟಿಯಿಂದ ಪಡೆದ ಲಾಭವನ್ನು ಡೆಟ್ ಫಂಡ್ ಗಳಿ ವರ್ಗಾಯಿಸುವುದು
4. ಕುಸಿತದ ವೇಳೆ ಹೂಡಿಕೆ ಹಿಂಪಡೆಯುವುದು
ಮಾರುಕಟ್ಟೆ ಸತತವಾಗಿ ಕುಸಿದ ಕೂಡಲೇ ಹೂಡಿಕೆದಾರರು ಆತಂಕ್ಕೀಡಾಗಿ ಎಸ್ ಐಪಿಯನ್ನು ನಿಲ್ಲಿಸುತ್ತಾರೆ. ಇಲ್ಲವೇ ಹೂಡಿಕೆ ಹಿಂಪಡೆಯುತ್ತಾರೆ. ಇದರಿಂದ ಕಂಪೌಂಡಿಂಗ್ ಲಾಭವನ್ನು ಕಳೆದುಕೊಳ್ಳುತ್ತಾರೆ.
ಪರಿಹಾರ:
ಮಾರುಕಟ್ಟೆ ಕುಸಿಯುತ್ತಿದೆ ಎಂದರೆ, ನಿಮಗೆ ರಿಯಾಯಿತಿ ದರದಲ್ಲಿಯೂನಿಟ್ ಗಳು ಸಿಗುತ್ತಿವೆ ಹಾಗೂ ಅವು ಮುಂದೆ ಹೆಚ್ಚು ಲಾಭ ಗಳಿಸುತ್ತವೆ ಎಂದು ಅರ್ಥ. ಹೂಡಿಕೆ ನಿಲ್ಲಿಸದಿರಿ.
5. ಅತಿಯಾದ ವೈವಿಧ್ಯತೆ
ಮನಸ್ಸಿಗೆ ಇಷ್ಟವಾದ, ಹೆಚ್ಚು ರಿಟನ್ಸ್ ರ್ ನೀಡುತ್ತದೆ ಎಂದಕೂಡಲೇ ಆ ಫಂಡ್ ಗಳಲ್ಲಿಹೂಡಿಕೆ ಮಾಡುವುದು ತುಂಬಾ ಜನರ ರೂಢಿ. 10, 12, 15 ಫಂಡ್ ಗಳಲ್ಲಿಹೂಡಿಕೆ ಮಾಡುತ್ತಾರೆ. ಆದರೆ, ಹೆಚ್ಚಿನ ಫಂಡ್ ಗಳಲ್ಲಿಹೂಡಿಕೆ ಮಾಡುವುದು ಎಂದರೆ ಅಪಾಯದ ಪ್ರಮಾಣ ಕಡಿಮೆ ಮಾಡಿದಂತೆ ಅಲ್ಲ. ಇದರಿಂದ ಅಗ್ರಿಗೇಟರ್ ಗಳಿಗೆ ಹೆಚ್ಚಿನ ನಿರ್ವಹಣಾ ಶುಲ್ಕ ನೀಡಿದಂತೆ ಆಗುತ್ತದೆ.
ಪರಿಹಾರ:
5-8 ಫಂಡ್ ಗಳಲ್ಲಿಹೂಡಿಕೆ ಮಾಡುವುದು ಒಳ್ಳೆಯದು. ಇದು 20 ಫಂಡ್ ಗಳಲ್ಲಿಹೂಡಿಕೆ ಮಾಡುವುದಕ್ಕಿಂತ ಹೆಚ್ಚು ಲಾಭದಾಯಕ.
6. ಡೈರೆಕ್ಟ್ ವರ್ಸಸ್ ರೆಗ್ಯುಲರ್ ಪ್ಲಾನ್
ಸಾಂಪ್ರದಾಯಿಕ ಬ್ರೋಕರೇಜ್ ಗಳ ಮೂಲಕ ರೆಗ್ಯುಲರ್ ಪ್ಲಾನ್ ಗಳಲ್ಲಿಹೂಡಿಕೆ ಮಾಡುವುದರಿಂದ 15-20 ವರ್ಷಗಳ ಹೂಡಿಕೆ ಬಳಿಕ ಹೆಚ್ಚಿನ ಕಮಿಷನ್ ನೀಡಬೇಕಾಗುತ್ತದೆ. ಇದರಿಂದ ಕಂಪೌಂಡಿಂಗ್ ಲಾಭಕ್ಕೆ ಕುತ್ತು ಬರುತ್ತದೆ.
ಪರಿಹಾರ:
ನಿಮ್ಮ ಸ್ಟೇಟ್ ಮೆಂಟ್ ಚೆಕ್ ಮಾಡಿಕೊಳ್ಳಿ. ರೆಗ್ಯುಲರ್ ಪ್ಲಾನ್ ಗಳ ಬದಲಾಗಿ ಡೈರೆಕ್ಟ್ ಪ್ಲಾನ್ ನಲ್ಲಿಅದೇ ಫಂಡ್ ನಲ್ಲಿಹೂಡಿಕೆ ಮಾಡಿ.
7. ಗೌಪ್ಯ ವೆಚ್ಚಗಳನ್ನು ನಿರ್ಲಕ್ಷಿಸುವುದು
ಯಾವುದಾದರೂ ಒಂದು ಫಂಡ್ ನ ವೆಚ್ಚದ ಅನುಪಾತ ಹಾಗೂ ಎಕ್ಸ್ ಪೆನ್ಸ್ ರೇಷಿಯೊ ನೋಡಿಕೊಳ್ಳದೆ ಹೂಡಿಕೆ ಮಾಡುವುದು, ಎಕ್ಸಿಲ್ ಲೋಡ್ ಶುಲ್ಕಗಳನ್ನು ಗಮನಿಸದಿರುವುದು ದೀರ್ಘಾವಧಿಯಲ್ಲಿಲಕ್ಷಾಂತರ ರೂ. ನಷ್ಟಕ್ಕೆ ಕಾರಣವಾಗುತ್ತದೆ. ಅವಧಿಗೂ ಮುನ್ನ ಹೂಡಿಕೆ ಹಿಂಪಡೆದರೆ ಹೆಚ್ಚಿನ ಎಕ್ಸಿಟ್ ಲೋಡ್ , ಅಲ್ಪಾವಧಿ ಬಂಡವಾಳ ಲಾಭ ತೆರಿಗೆ ಪಾವತಿಸಬೇಕಾಗುತ್ತದೆ.
ಪರಿಹಾರ:
ನೇರವಾಗಿ ಮ್ಯೂಚುವಲ್ ಫಂಡ್ ಗಳ ವೆಬ್ ಸೈಟ್ , ಪ್ಲಾಟ್ ಫಾಮ್ ರ್ ಮೂಲಕ ಹೂಡಿಕೆ ಮಾಡಿದರೆ ಲಾಭದಾಯಕ. ಶೇ.0.5ರಷ್ಟು ಉಳಿತಾಯ ಕೂಡ ಕಂಪೌಂಡಿಂಗ್ ನಲ್ಲಿಹೆಚ್ಚು ಲಾಭದಾಯಕ ಎನಿಸುತ್ತದೆ.
8. ತೆರಿಗೆ ಪರಿಣಾಮದ ನಿರ್ಲಕ್ಷ್ಯ
ಹೂಡಿಕೆದಾರರು ಬಂಡವಾಳ ಲಾಭ ತೆರಿಗೆ ಬಗ್ಗೆ ಜಾಗೃತರಾಗಿರಬೇಕು. ಹೂಡಿಕೆ ಮಾಡಿದ 12 ತಿಂಗಳೊಳಗೆ ಹಣ ಹಿಂಪಡೆದರೆ ಅಲ್ಪಾವಧಿ ಬಂಡವಾಳ ಲಾಭ ತೆರಿಗೆ (ಎಸ್ ಟಿಸಿಜಿ) ಕಟ್ಟಬೇಕಾಗುತ್ತದೆ. ಆಗ ನೀವು, ಹೂಡಿಕೆಯಿಂದ ಹೆಚ್ಚು ಲಾಭ ಗಳಿಸದೆಯೇ ತೆರಿಗೆ ಪಾವತಿಸಬೇಕಾಗುತ್ತದೆ. ದೀರ್ಘಾವಧಿಯಲ್ಲಿಹೂಡಿಕೆ ಹಿಂಪಡೆದಾಗ ದೀರ್ಘಾವಧಿ ಬಂಡವಾಳ ಲಾಭ (ಎಲ್ ಟಿಸಿಜಿ) ಕಟ್ಟಿದರೂ ಲಾಭದ ಪ್ರಮಾಣ ಜಾಸ್ತಿಯಾಗಿರುತ್ತದೆ. ಆಗ, ಸಿಸ್ಟಮ್ಯಾಟಿಕ್ ವಿತ್ ಡ್ರಾವಲ್ ಪ್ಲಾನ್ (ಎಸ್ ಡಬ್ಲ್ಯೂಪಿ) ಮೂಲಕ ಹಣವನ್ನು ಮಾಸಿಕ ವಿತ್ ಡ್ರಾ ಮಾಡಿದರೆ ಇನ್ನೂ ಲಾಭದಾಯಕ.
9. ಎನ್ ಎಫ್ ಒ ಬಲೆಗೆ ಬೀಳುವುದು
ಅಸೆಟ್ ಮ್ಯಾನೇಜ್ ಮೆಂಟ್ ಕಂಪನಿಗಳು ಆಗಾಗ ನ್ಯೂ ಫಂಡ್ ಆಫರ್ ಗಳನ್ನು (ಎನ್ ಎಫ್ ಒ) ಆರಂಭಿಸುತ್ತಲೇ ಇರುತ್ತವೆ. ಇವುಗಳ ಬಲೆಗೆ ಬಿದ್ದರೆ ಕಡಿಮೆ ನೆಟ್ ಅಸೆಟ್ ವ್ಯಾಲ್ಯೂಗೆ (ಎನ್ ಎವಿ) ಫಂಡ್ ಗಳು ಸಿಕ್ಕಿವೆ ಎಂದಾದರೂ ಲಾಭದಾಯಕವಲ್ಲ. ಅಸೆಟ್ ಗಳ ಆಧಾರದ ಮೇಲೆ ಮ್ಯೂಚುವಲ್ ಫಂಡ್ ಗಳು ಲಾಭ ನೀಡುತ್ತವೆ.
ಪರಿಹಾರ:
ಅತಿಯಾದ ಪ್ರಚಾರ, ಕಡಿಮೆ ಎನ್ ಎವಿ ಆಸೆಗೆ ಬಿದ್ದು ಎನ್ ಎಫ್ ಒಗಳನ್ನು ಖರೀದಿಸಬಾರದು. ದೀರ್ಘಾವಧಿ ಯಶಸ್ಸು ಪರಿಗಣಿಸಿ ಹೂಡಿಕೆ ಮಾಡುವುದು ಒಳ್ಳೆಯದು.
10. ಪ್ರತಿದಿನ ಪರಿಶೀಲನೆ
ಪ್ರತಿದಿನ ಬೆಳಗ್ಗೆ ಎದ್ದಕೂಡಲೇ ಪೋರ್ಟ್ ಫೋಲಿಯೊ ನೋಡುವ ಮೂಲಕ ಲಾಭ-ನಷ್ಟದ ಲೆಕ್ಕಾಚಾರ ಹಾಕುವುದು ಸರಿಯಾದ ಕ್ರಮವಲ್ಲ. ಮ್ಯೂಚುವಲ್ ಫಂಡ್ ಹೂಡಿಕೆಯು ದೀರ್ಘಾವಧಿ ಹೂಡಿಕೆಯಾದ ಕಾರಣ ಪದೇಪದೆ ನೋಡಬಾರದು. ಇದರಿಂದ, ಮಾರುಕಟ್ಟೆ ಏರಿಳಿತದ ಆತಂಕಕ್ಕೆ ಸಿಲುಕಿ ಹೂಡಿಕೆ ಹಿಂಪಡೆಯುವ ಸಾಧ್ಯತೆ ಇರುತ್ತದೆ.
ಪರಿಹಾರ:
6 ತಿಂಗಳು ಅಥವಾ ವರ್ಷಕ್ಕೊಮ್ಮೆ ಮಾತ್ರ ಪರಿಶೀಲನೆ ಮಾಡುವುದು ಉತ್ತಮ. ಘ್ಕಿ
===========
ಡಿಸ್ ಕ್ಲೇಮರ್
ಹೂಡಿಕೆ ಬಗ್ಗೆ ಮಾಹಿತಿ ನೀಡುವ ದೃಷ್ಟಿಯಿಂದ ಮಾತ್ರ ಲೇಖನ ಪ್ರಕಟಿಸಲಾಗಿದೆ. ಲೇಖನದಲ್ಲಿಪ್ರಕಟಿಸಿರುವ ಮಾಹಿತಿಯು ವೈಯಕ್ತಿಕ ಅಧ್ಯಯನ ಹಾಗೂ ಸಂಶೋಧನೆ ಆಧಾರದ ಮೇಲೆ ನೀಡಲಾಗಿದೆ. ಹಾಗಾಗಿ, ಹೂಡಿಕೆದಾರರು ಲೇಖನದಲ್ಲಿನೀಡಿದ ಅಂಶಗಳನ್ನು ಹೂಡಿಕೆಗೆ ಶಿಫಾರಸು, ಮಾರ್ಗಸೂಚಿ ಎಂದು ಭಾವಿಸಬಾರದು. ಹಾಗಾಗಿ, ಓದುಗರು ಯಾವುದೇ ಮಾದರಿಯ ಹೂಡಿಕೆ ಮಾಡುವ ಮೊದಲು ಪರಿಣತರನ್ನು ಸಂಪರ್ಕಿಸುವುದು ಉತ್ತಮ.
ಮ್ಯೂಚುವಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಏರಿಳಿತದ ಅಪಾಯಗಳಿಗೆ ಒಳಪಟ್ಟಿರುತ್ತವೆ. ಯೋಜನೆಗೆ ಸಂಬಂಧಿಸಿದ ಎಲ್ಲದಾಖಲೆಗಳನ್ನು ಗಮನವಿಟ್ಟು ಓದಿಕೊಳ್ಳಿ.