ತೆರವಾಗದ ಬ್ರಿಟಿಷ್ ಕಾಲದ ಕಬ್ಬಿಣದ ವಿದ್ಯುತ್ ಕಂಬಗಳು

Contributed byvenki_dhreporter@rediffmail.com|Vijaya Karnataka
danger of old british era iron electric poles in kgf city
ಹಳೆ ಕಂಬ ತೆರವುಗೊಳಿಸಿ ಸಿಮೆಂಟ್ ಕಂಬ ಅಳವಡಿಸಬೇಕೆಂಬ ಸರಕಾರದ ಆದೇಶ ಅನುಷ್ಠಾನವಾಗಿಲ್ಲ

ಬಾಲವೆಂಕಟೇಶ್ ಕೆ.ಎಂ. ಕೆಜಿಎಫ್
ನಗರದಲ್ಲಿಬ್ರಿಟಿಷರ ಕಾಲದಲ್ಲಿಅಳವಡಿಸಿರುವ ಕಬ್ಬಿಣದ ವಿದ್ಯುತ್ ಕಂಬಗಳು, ರಸ್ತೆಗಳ ಪಕ್ಕದಲ್ಲಿನೇತಾಡುವ ತಂತಿಗಳು, ಸ್ವಿಚ್ ಬೋರ್ಡ್ ಗಳು ಸಾರ್ವಜನಿಕರ ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸಿವೆ.

ನಗರ ಭಾಗದಲ್ಲಿರುವ ಕಬ್ಬಿಣದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಸುರಕ್ಷತೆ ದೃಷ್ಟಿಯಿಂದ ಸಿಮೆಂಟ್ ವಿದ್ಯುತ್ ಕಂಬಗಳನ್ನು ಅಳವಡಿಸಿ, ತಂತಿಗಳನ್ನು ತೆಗೆದು ಕೇಬಲ್ ವೈರ್ ಗಳನ್ನು ಅಳವಡಿಸಬೇಕೆಂದು ಸರಕಾರದ ಆದೇಶವಿದ್ದರೂ ಕೆಜಿಎಫ್ ನಗರದಲ್ಲಿಮಾತ್ರ ಪಾಲನೆಯಾಗದಿರುವುದು ವಿಪರ್ಯಾಸದ ಸಂಗತಿ.

ಕೈಗೆಟ್ಟುವ ರೀತಿಯಲ್ಲಿವಿದ್ಯುತ್ ಪರಿಕರಗಳು: ಶಾಲಾ ಕಾಲೇಜುಗಳ ಬಳಿ, ನಗರದ ಪ್ರಮುಖ ರಸ್ತೆ ಹಾಗೂ ಬಡಾವಣೆಗಳಲ್ಲಿಪಾದಚಾರಿ ಮಾರ್ಗಗಳ ಬಳಿಯ ಟ್ರಾನ್ಸ್ ಫಾರ್ಮರ್ , ಬೀದಿ ದೀಪಗಳ ಸ್ವಿಚ್ ಗಳನ್ನು ಅಳವಡಿಸಿದ್ದಾರೆ. ಸ್ವಿಚ್ ಬೋರ್ಡ್ ಗಳನ್ನು ಕಾಲ ಕಾಲಕ್ಕೆ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಹಾಳಾಗಿ ವೈರ್ ಗಳು ಕಿತ್ತು ಬಂದು ಕೈಗೆಟುವಷ್ಟು ಹತ್ತಿರದಲ್ಲಿರುವ ಕಾರಣ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಸಾರ್ವಜನಿಕರು ಇವುಗಳ ಪಕ್ಕದಲ್ಲಿಹಾದುಹೋಗುವ ವೇಳೆ ತಗುಲಿದರೆ ಪ್ರಾಣಕ್ಕೆ ಕುತ್ತು ಬರುವುದು ಗ್ಯಾರಂಟಿ. ಮಳೆ ಬೀಳುವ ಸಮಯದಲ್ಲಂತೂ ಇದರಿಂದಾಗುವ ಅಪಾಯ ಇನ್ನೂ ಜಾಸ್ತಿ. ಪ್ರತಿದಿನ ಸ್ವಿಚ್ ಹಾಕುವ ಮಂದಿ ಕೂಡ ಜೀವಭಯದಲ್ಲೇ ತಮ್ಮ ಕೆಲಸ ಮಾಡಬೆಕಾದ ಅನಿವಾರ್ಯತೆ ಇದೆ.

ಬೇಲಿ ಇಲ್ಲದ ಟ್ರಾನ್ಸ್ ಫ್ಮಾರ್ಮರ್ : ನಗರದಲ್ಲಿಬಹುತೇಕ ಟ್ರಾನ್ಸ್ ಫಾರ್ಮರ್ ಗಳನ್ನು ನೆಲಮಟ್ಟದಲ್ಲಿಬೆಸ್ಕಾಂ ಇಲಾಖೆ ಅಳವಡಿಸಿದೆ. ಬಹುತೇಕ ಟ್ರಾನ್ಸ್ ಫ್ಮಾರ್ಮರ್ ಗಳಿಗೆ ಯಾವುದೇ ತಂತಿ ಬೇಲಿ ಅಳವಡಿಸಿಲ್ಲ. ಹಲವು ಕಡೆ ಜಾನುವಾರುಗಳು ಸಾವನ್ನಪ್ಪಿರುವ ಉದಾಹರಣೆಗಳು ಇವೆ. ಅದೇ ರೀತಿ ಶಾಲಾ ಮಕ್ಕಳು ಸಹ ತಿಳಿಯದೆ ಮುಟ್ಟಿ ವಿದ್ಯುತ್ ಶಾಕ್ ಗೆ ಒಳಗಾಗಿರುವುದು ಉದಾಹರಣೆಯೂ ಇದೆ. ನಗರದ ಹಲವು ಪ್ರಮುಖ ರಸ್ತೆಗಳಲ್ಲಿಕಬ್ಬಿಣದ ವಿದ್ಯುತ್ ಕಂಬಗಳು ಹಾಗೆ ಇದ್ದು, ಒಂದು ವೇಳೆ ವಾಹನಗಳು ಕಬ್ಬಿಣದ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಅನಾಹುತ ಸಂಭಸಿದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಅನಾಹುತ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ: ಬ್ರಿಟಿಷರ ಕಾಲದ ಕಬ್ಬಿಣದ ಕಂಬಗಳನ್ನು ತೆರವುಗೊಳಿಸಬೇಕು, ಅಲ್ಲದೆ ತಂತಿಗಳನ್ನು ಬದಲಾಯಿಸಿ ಕೇಬಲ್ ವೈರ್ ಗಳನ್ನು ಅಳವಡಿಸಿ ವಿದ್ಯುತ್ ಅವಘಡಗಳನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಬೆಸ್ಕಾಂ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ನಗರಸಭೆ ಅಧಿಕಾರಿಗಳು ಕುಡಿಯುವ ನೀರಿಗಾಗಿ ಕೊಳವೆಬಾವಿಗಳನ್ನು ಕೊರೆಸಿದ್ದು, ಕೊಳವೆಬಾವಿಗಳಿಗೆ ಅಳವಡಿಸಿರುವ ಸ್ವಿಚ್ ಬೋರ್ಡ್ ಗಳು ತೆರೆದ ರೀತಿಯಲ್ಲಿನಗರದಲ್ಲಿಬಹುತೇಕ ವಾರ್ಡ್ ಗಳಲ್ಲಿಕಾಣಿಸುತ್ತವೆ. ಅಂತಹ ಸ್ವಿಚ್ ಬೋರ್ಡ್ ಗಳಿಗೆ ಬಾಕ್ಸ್ ಅಳವಡಿಸಿ ಜನರ ಸುರಕ್ಷತೆಯ ಬಗ್ಗೆ ಗಮನ ಹರಿಸಬೇಕೆಂದು ನಗರದ ನಿವಾಸಿ ಶ್ರೀನಿವಾಸ್ ತಿಳಿಸಿದರು.

ಕೆಲ ಕಡೆಗಳಲ್ಲಿಮಾತ್ರ ಸಿಬ್ಬಂದಿ ಬಂದು ಸ್ವಿಚ್ ಗಳನ್ನು ಹಾಕುವುದು ಆಫ್ ಮಾಡುವುದು ಮಾಡುತ್ತಾರೆ ಬಿಟ್ಟರೆ ಬಹುತೇಕ ಕಡೆಗಳಲ್ಲಿಸ್ಥಳೀಯರೇ ಇದನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಎಷ್ಟು ಸಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜವಿಲ್ಲವಾಗಿದೆ. ಹಲವು ಕಡೆಗಳಲ್ಲಿಈ ಸಮಸ್ಯೆಯಿದ್ದು ಅಸುರಕ್ಷತೆಯ ಹಾಗೂ ಜೀವ ಭಯ ಕಾಡುತ್ತಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಲಿ.

-ರಮೇಶ್ , ಬಡಾವಣೆಯ ನಿವಾಸಿ

ಕೆಲವು ಕಡೆಗಳಲ್ಲಿಸಿಬ್ಬಂದಿ ಈ ಕೆಲಸ ಮಾಡುತ್ತಿದ್ದು, ಇನ್ನೂ ಹಲವಡೆ ಸ್ಥಳೀಯ ನಿವಾಸಿಗಳು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಗಮನಹರಿಸುತ್ತಿದ್ದು, ಹಾಳಾಗಿರುವ ಸ್ವಿಚ್ ಬೋರ್ಡ್ ಗಳನ್ನು ದುರಸ್ತಿಗೊಳಿಸಿ ನೇತಾಡುತ್ತಿರುವ, ಹೊರ ಬಂದಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಲು ಸಿಬ್ಬಂದಿಗೆ ಸೂಚನೆ ನೀಡಲಾಗುವುದು.

-ಶ್ರೀಧರ್ , ಪೌರಾಯುಕ್ತ

23ಕೆಜಿಎಫ್ 1,2,: ರಸ್ತೆ ಬದಿಯಲ್ಲಿರುವ ಅಪಾಯದ ವಿದ್ಯುತ್ ಟ್ರಾನ್ಸ್ ಫಾರ್ಮರ್ .