ತಾಲೂಕಿನ ಉಳೆನೂರು ಗ್ರಾಮದ 2ನೇ ವಾರ್ಡ್ ನ ಮಡ್ದೆರ್ ಓಣಿಯ 200ಕ್ಕೂ ಹೆಚ್ಚು ಕುಟುಂಬಗಳು ಕಳೆದ ಎರಡು ತಿಂಗಳಿನಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಸಂಕಷ್ಟದಲ್ಲಿದಿನ ಕಳೆಯುತ್ತಿದ್ದಾರೆ. ಗ್ರಾಪಂನಿಂದ ನೀರು ಸರಬರಾಜು ಮಾಡಿದರೂ ಅರ್ಧ ಕೊಡದಷ್ಟು ನೀರು ಬರುತ್ತಿಲ್ಲ. ದೈನಂದಿನ ಅಗತ್ಯ ಪೂರೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸಮಸ್ಯೆ ಕುರಿತು ಗ್ರಾಪಂ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ದೂರವಾಣಿ ಕರೆ ಮಾಡಿದಾಗಲೂ ಸ್ಪಂದನೆ ನೀಡದೇ, ಉಡಾಫೆಯಾಗಿ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಡಿಯುವ ನೀರಿನ ಜತೆಗೆ ದನ-ಕರುಗಳಿಗೆ ಸಹ ನೀರಿನ ಕೊರತೆ ಉಂಟಾಗಿದ್ದು, ಬೋರ್ ವೆಲ್ ಇರುವ ಮನೆಗಳಿಂದ ನೀರು ತಂದು ಕಳೆದ ಎರಡು ತಿಂಗಳಿಂದ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಗ್ರಾಪಂ ಕಚೇರಿ ಮುಂದೆ ಕೊಡ ಹಿಡಿದು ಪ್ರತಿಭಟನೆ ನಡೆಸಿದಾಗ ಸಿಬ್ಬಂದಿ ಕಚೇರಿಗೆ ಬೀಗ ಹಾಕಿಕೊಂಡು ತೆರಳಿದ್ದರು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ತಕ್ಷಣ ಸಮರ್ಪಕ ನೀರು ಸರಬರಾಜು ವ್ಯವಸ್ಥೆ ಕಲ್ಪಿಸದಿದ್ದರೆ ತಾಲೂಕು ಪಂಚಾಯಿತಿ ಕಚೇರಿ ಹಾಗೂ ಶಾಸಕ ಶಿವರಾಜ ತಂಗಡಗಿ ಅವರ ನಿವಾಸದ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
* ಕೋಟ್
ಉಳೆನೂರು ಗ್ರಾಮದಲ್ಲಿನೀರಿನ ಸಮಸ್ಯೆ ಬಗ್ಗೆ ಮಾಹಿತಿ ಇಲ್ಲ. ಕೂಡಲೇ ಪಿಡಿಒ ಅವರನ್ನು ಸ್ಥಳಕ್ಕೆ ಕಳಿಸಿ ಸಮಸ್ಯೆ ಪರಿಹರಿಸಲು ಸೂಚಿಸುತ್ತೇನೆ.
-ಲಕ್ಷ್ಮಿದೇವಿ, ತಾಪಂ ಇಒ, ಕಾರಟಗಿ
* ಫೋಟೋ ಕ್ಯಾಪ್ಷನ್ : 23 ಕೆಆರ್ ಟಿ 1
ಕಾರಟಗಿ ತಾಲೂಕಿನ ಉಳೆನೂರು ಗ್ರಾಮದ 2ನೇ ವಾರ್ಡ್ ನಲ್ಲಿಮಹಿಳೆಯರು ನೀರಿಗಾಗಿ ಖಾಲಿ ಕೊಡ ಇಟ್ಟು ಕಾಯುತ್ತಿರುವುದು.