ಮಾಗಡಿ ಗ್ರಾಮಾಂತರ: ನಾಡಪ್ರಭು ಕೆಂಪೇಗೌಡ ಅವರ 517ನೇ ಜಯಂತಿ ಅಂಗವಾಗಿ ಜೂನ್ 27ರಂದು ನಡೆಯಲಿರುವ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿಮಾಗಡಿ ತಾಲೂಕಿನ ಕೆಂಪಾಪುರದಲ್ಲಿರುವ ವೀರ ಸಮಾಧಿ ಆವರಣದಲ್ಲಿಚಿಲುಮೆ ರವಿಕುಮಾರ್ ಫೌಂಡೇಶನ್ ವತಿಯಿಂದ ಸ್ವಚ್ಛತಾ ಕಾರ್ಯ ನಡೆಸಲಾಯಿತು.ಈ ಸಂದರ್ಭದಲ್ಲಿಮಾತನಾಡಿದ ಚಿಲುಮೆ ರವಿಕುಮಾರ್ , ಇಂದು ಇಡೀ ಪ್ರಪಂಚವೇ ಬೆಂಗಳೂರಿನತ್ತ ಗಮನ ಹರಿಸುತ್ತಿರುವುದಕ್ಕೆ ಕೆಂಪೇಗೌಡರ ದೂರದೃಷ್ಟಿಯೇ ಕಾರಣ ಎಂದು ಹೇಳಿದರು. ಕರ್ನಾಟಕದ ಸಾವಿರಾರು ಹಳ್ಳಿಗಳ ಜನರು ಬೆಂಗಳೂರಿನಲ್ಲಿಜೀವನ ಕಟ್ಟಿಕೊಳ್ಳಲು ಕೆಂಪೇಗೌಡರ ಕೊಡುಗೆ ಪ್ರಮುಖವಾಗಿದೆ ಎಂದು ಅವರು ತಿಳಿಸಿದರು.
ಮುಖಂಡ ಕೆನಾಲಿಗೌಡ ಮಾತನಾಡಿ, ಬೆಂಗಳೂರನ್ನು ನಿರ್ಮಿಸಿದ ಮಹಾಪುರುಷನ ಸಮಾಧಿ ಸ್ಥಳ ಇನ್ನೂ ಸಮರ್ಪಕ ಅಭಿವೃದ್ಧಿ ಕಾಣದಿರುವುದು ವಿಷಾದನೀಯ ಸಂಗತಿ ಎಂದು ಹೇಳಿದರು. ಈ ಸಮಾಧಿ ಬೇರೆ ರಾಜ್ಯದಲ್ಲಿದ್ದರೆ ಈಗಾಗಲೇ ಭವ್ಯ ಐತಿಹಾಸಿಕ ಸ್ಮಾರಕವಾಗಿ ರೂಪುಗೊಂಡಿರುತ್ತಿತ್ತು. ಹಿಂದಿನ ಹಾಗೂ ಇಂದಿನ ಸರಕಾರಗಳು ಸಮಾಧಿ ಪ್ರದೇಶವನ್ನು ಪವಿತ್ರ ಸ್ಮಾರಕ ತಾಣವನ್ನಾಗಿ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದರೂ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲಎಂದು ಬೇಸರ ವ್ಯಕ್ತಪಡಿಸಿದರು.
ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ರಾಜ್ಯ ಸರಕಾರ ವಿಶೇಷ ರಜಾದಿನವಾಗಿ ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿಕಾರ್ಯಕರ್ತರು, ಕನ್ನಡಾಭಿಮಾನಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ಸಮಾಧಿ ಸುತ್ತಮುತ್ತಲಿನ ಕಸ-ಕಡ್ಡಿಗಳನ್ನು ತೆರವುಗೊಳಿಸಿ ಪರಿಸರವನ್ನು ಶುಚಿಗೊಳಿಸಿದರು. ಬಳಿಕ ಸಮಾಧಿಗೆ ರಂಗೋಲಿ ಹಾಕಿ, ದೀಪ ಬೆಳಗಿಸುವ ಮೂಲಕ ನಾಡಪ್ರಭುಗಳಿಗೆ ನಮನ ಸಲ್ಲಿಸಿದರು.
ಇದೇ ವೇಳೆ ಬಸವಣ್ಣ ದೇವಸ್ಥಾನ ಹಾಗೂ ಗ್ರಾಮ ದೇವತೆ ಶ್ರೀಮಾರಮ್ಮ ದೇವಿ ಅವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿಗೋಪಾಲ್ , ಕೊಟ್ರೇಶ್ , ಮಧುಸುಧನ್ , ಪ್ರೊ. ಮನುಗೌಡ ಹುಲ್ಲೇನಹಳ್ಳಿ, ಜಯಲಕ್ಷ್ಮಿ, ಯಶೋದಮ್ಮ, ಅನಿಲ್ ಕುಮಾರ್ ಸೇರಿದಂತೆ ಚಿಲುಮೆ ಸಂಸ್ಥೆಯ ಸದಸ್ಯರು, ಕನ್ನಡಪರ ಒಕ್ಕೂಟದ ಕಾರ್ಯಕರ್ತರು, ನಾನಾ ಸಂಘಟನೆಗಳ ಮುಖಂಡರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
23ಎಸ್ ಎಲ್ ಆರ್ 1:
ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಪ್ರಯುಕ್ತ ಕೆಂಪಾಪುರ ಸಮಾಧಿ ಆವರಣದಲ್ಲಿಸ್ವಚ್ಛತಾ ಕಾರ್ಯಕ್ರಮ.