ನಾನು ಓದಿದ1

Contributed byshubha.hegde@timesgroup.com|Vijaya Karnataka

ಉಷಾ ನರಸಿಂಹನ್‌ ಅವರ 'ಆರ್ಯಾವರ್ತ' ಕಾದಂಬರಿ ರಾಜ ಹರ್ಷವರ್ಧನನ ಜೀವನವನ್ನು ತೆರೆದಿಡುತ್ತದೆ. ಇದು ಕೇವಲ ಇತಿಹಾಸಕ್ಕೆ ಸೀಮಿತವಾಗದೆ, ಪಾತ್ರಗಳ ಭಾವನೆಗಳನ್ನೂ ಚಿತ್ರಿಸುತ್ತದೆ. ಕಾದಂಬರಿಯು ಸಂವಟ್ಟ, ಪಸಾರೋ, ವಿರಾಗೋ, ನಿಬ್ಬಾಣ ಎಂಬ ನಾಲ್ಕು ಭಾಗಗಳಲ್ಲಿ ಮೂಡಿಬಂದಿದೆ. ಅಂದಿನ ಭಾರತ ಮತ್ತು ಚೀನಾ ವ್ಯಾಪಾರ ಸಂಬಂಧಗಳನ್ನೂ ಉಲ್ಲೇಖಿಸುತ್ತದೆ. ಹರ್ಷವರ್ಧನನ ಲೌಕಿಕದಿಂದ ಆಧ್ಯಾತ್ಮದ ಪಯಣವನ್ನು ಕಾದಂಬರಿ ವಿವರಿಸುತ್ತದೆ.

aryavarta a new dimension of concept to harshavardhanas history

ಸುಮಾ ವೀಣಾ

ಇತಿಹಾಸ ನೆನಪಿಸುವ ಆರ್ಯಾವರ್ತ

ಉತ್ತರಾಪಥೇಶ್ವರ ಎಂದೇ ಖ್ಯಾತನಾದ ಹರ್ಷವರ್ಧನನ ಬದುಕನ್ನು ಅನಾವರಣಗೊಳಿಸುವ ಐತಿಹಾಸಿಕ ಕಾದಂಬರಿ ಆರ್ಯಾವರ್ತ.

ಉಷಾ ನರಸಿಂಹನ್ ಅವರ ಈ ಕಾದಂಬರಿ ಕೇವಲ ಶೈಕ್ಷಣಿಕ ಪಠ್ಯಗಳ ವಸ್ತುನಿಷ್ಠ ಇತಿಹಾಸಕ್ಕೆ ಸೀಮಿತವಾಗದೆ, ಇತಿಹಾಸದ ಪಾತ್ರಗಳ ಭಾವನಾತ್ಮಕ ತುಡಿತಗಳು ಮತ್ತು ಆಂತರ್ಯದ ಮಿಡಿತಗಳನ್ನು ತೆರೆದಿಡುತ್ತದೆ. ಇದನ್ನು ಲೇಖಕಿ ಇಲ್ಲಿಕಲಾತ್ಮಕವಾಗಿ ಚಿತ್ರಿಸಿದ್ದಾರೆ. ವಾಸ್ತವಕ್ಕೆ ಹತ್ತಿರವಾಗಿರುವ ಈ ಕಾದಂಬರಿಯು ಸಂವಟ್ಟ, ಪಸಾರೋ, ವಿರಾಗೋ ಮತ್ತು ನಿಬ್ಬಾಣ ಎಂಬ ನಾಲ್ಕು ವಿಶಿಷ್ಟ ಭಾಗಗಳಲ್ಲಿಮೂಡಿಬಂದಿದೆ. ಇತಿಹಾಸದ ಪ್ರಮುಖ ಪಾತ್ರಗಳ ಜೊತೆಗೆ ಲೇಖಕಿಯ ಕಲ್ಪಿತ ಪಾತ್ರಗಳು ಹರ್ಷವರ್ಧನನ ಜೀವನದ ಮುನ್ನಡೆಗೆ ಪೂರಕವಾಗಿ ನಿಂತಿವೆ. ಅಂದಿನ ಭಾರತ ಮತ್ತು ಚೀನಾ ನಡುವಿನ ವ್ಯಾಪಾರ ಸಂಬಂಧಗಳನ್ನು ಕಾದಂಬರಿ ಸಂದರ್ಭೋಚಿತವಾಗಿ ಉಲ್ಲೇಖಿಸುತ್ತದೆ.

‘ಉತ್ತರಾಪಥೇಶ್ವರ ಹರ್ಷವರ್ಧನ - ದಕ್ಷಿಣಾಪಥೇಶ್ವರ ಪುಲಿಕೇಶಿ’ ಎಂಬ ಸಾಲುಗಳಿಗೆ ಸೀಮಿತವಾಗಿದ್ದ ಹರ್ಷನ ವ್ಯಕ್ತಿತ್ವದ ಒಳಚಹರೆಗಳನ್ನು ಉಷಾ ನರಸಿಂಹನ್ ಅದ್ಭುತವಾಗಿ ತೆರೆದಿಟ್ಟಿದ್ದಾರೆ.

ಕಾದಂಬರಿಯು ಪ್ರವೇಶದಲ್ಲಿಕಾದಂಬರಿಯ ಮುಖ್ಯ ಪಾತ್ರ ರಾಜಶ್ರೀಯ ಮದುವೆಯ ಸಂಭ್ರಮವನ್ನು ಓದುಗಾಣಬಹುದು. ಮದುವೆಯ ಸಂಭ್ರಮದ ವರ್ಣನೆಯಲ್ಲಿಅಂದಿನ ಕಾಲದ ಸಂಪ್ರದಾಯಗಳು, ಆಭರಣಗಳು ಮತ್ತು ದುಕೂಲಗಳ ವಿವರಗಳು ಮನಸೆಳೆಯುತ್ತವೆ. ಲೇಖಕಿಯು ವಸ್ತ್ರಗಳ ವಿಧಗಳನ್ನು ಕೇವಲ ಪಟ್ಟಿ ಮಾಡದೆ, ಅವು ದೊರೆಯುವ ಪ್ರಾಂತ್ಯಗಳ ಆಧಾರದ ಮೇಲೆ ವಿವರಿಸಿದ್ದು ವಿಶೇಷ. ಅಂದಿನ ಕಾಲದ ವೈವಿಧ್ಯಮಯ ಖಾದ್ಯಗಳ ವಿವರಣೆ ಓದುಗರ ರುಚಿಮೊಗ್ಗುಗಳನ್ನು ಅರಳಿಸುವಂತಿದೆ. ಪತ್ರಗಳ ಮೂಲಕ ಸಾಗುವ ಕಥಾ ಸಂವಿಧಾನದ ಜೊತೆಗೆ ಆಯುರ್ವೇದ ಚಿಕಿತ್ಸಾ ಪದ್ಧತಿಗಳು ಹಾಗೂ ನಳಂದ, ತಕ್ಷಶಿಲೆಯಂತಹ ವಿಶ್ವವಿದ್ಯಾಲಯಗಳ ಪರಿಚಯವೂ ಇಲ್ಲಿದೆ.

ಲೌಕಿಕ ಬದುಕಿನಿಂದ ಅಧ್ಯಾತ್ಮದತ್ತ ಸಾಗುವ ಹರ್ಷವರ್ಧನನ ಪಯಣವು ಲೇಖಕಿಯ ವಿಸ್ತಾರವಾದ ಓದು ಮತ್ತು ಗ್ರಹಿಕೆಗೆ ಸಾಕ್ಷಿ. ಕಾದಂಬರಿಯಲ್ಲಿಬರುವ ‘ಸುರಿದುಕೊಳ್ಳುವ ಸುಖಕ್ಕಿಂತ ಅನುಭವಿಸುವ ಯಾತನೆಗಳೇ ಒಂದು ವೀಸೆ ಹೆಚ್ಚು’ ಎಂಬ ವಾಕ್ಯವು ಓದುಗರನ್ನು ದೀರ್ಘಕಾಲ ಕಾಡುತ್ತದೆ. ಒಟ್ಟಾರೆ ಇತಿಹಾಸದ ಪಾತ್ರಗಳಿಗೆ ಕಲ್ಪನೆಯ ರೆಕ್ಕೆಗಳನ್ನು ಜೋಡಿಸಿ, ಭಾವನೆಗಳ ಜೀವ ತುಂಬಿ, ರಾಜತಾಂತ್ರಿಕತೆ ಮತ್ತು ಸಂಸ್ಕೃತಿಯ ಲೇಪನದೊಂದಿಗೆ ಉಷಾ ನರಸಿಂಹನ್ ಅವರು ಒಂದು ಯಶಸ್ವಿ ಐತಿಹಾಸಿಕ ಕೃತಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.

ಆರ್ಯಾವರ್ತ

ಲೇ: ಉಷಾ ನರಸಿಂಹನ್

ಪ್ರ: ಅಂಕಿತ ಪ್ರಕಾಶನ, ಬೆಂಗಳೂರು

ಬೆಲೆ: 450ರೂ.