Uber Driver Robs Passenger Of Gold Jewelry And Iphone
ಉಬರ್ ಚಾಲಕನಿಂದ ಪ್ರಯಾಣಿಕನ ಲೂಟಿ
Contributed by: MANJUNATHA S|Vijaya Karnataka•
ಬೆಂಗಳೂರಿನಲ್ಲಿ ಉಬರ್ ಚಾಲಕನೊಬ್ಬ ಪ್ರಯಾಣಿಕನ ಚಿನ್ನಾಭರಣ ಹಾಗೂ ಐಫೋನ್ ದೋಚಿ ಅರ್ಧದಾರಿಯಲ್ಲೇ ಇಳಿಸಿ ಪರಾರಿಯಾಗಿದ್ದಾನೆ. ಪಾರ್ಟಿ ಮುಗಿಸಿ ನಶೆಯಲ್ಲಿದ್ದ ಪ್ರಯಾಣಿಕನನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗಿದೆ. ಚಾಲಕ ಪ್ರಯಾಣದ ಟ್ರಿಪ್ ಅನ್ನು ಬೇರೆ ಕಡೆ ಅಂತ್ಯಗೊಳಿಸಿ ಮೋಸ ಮಾಡಿದ್ದಾನೆ. ಪೊಲೀಸರು ಆರೋಪಿ ಚಾಲಕನ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪಾರ್ಟಿ ನಶೆಯಲ್ಲಿದ್ದ ಪ್ರಯಾಣಿಕನಿಗೆ ಮೋಸ ಮಾಡಿ, ಚಿನ್ನಾಭರಣ ಹಾಗೂ ಐಫೋನ್ ದೋಚಿ, ಅರ್ಧ ದಾರಿಯಲ್ಲೇ ಇಳಿಸಿ ಪರಾರಿಯಾದ ಉಬರ್ ಚಾಲಕನೊಬ್ಬನ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸಕೋಟೆಯ ಮೋಹನ್ ಎಂಬುವರು ನೀಡಿದ ದೂರಿನ ಮೇರೆಗೆ ಪೊಲೀಸರು ಚಾಲಕನ ಶೋಧ ನಡೆಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಮೋಹನ್ ಅವರು ಐವರು ಸ್ನೇಹಿತರೊಂದಿಗೆ ಬೂದಿಗೆರೆ ಸಮೀಪದ ಡಾಬಾವೊಂದರಲ್ಲಿ ಪಾರ್ಟಿ ಮಾಡಿದ್ದರು. ರಾತ್ರಿ 10.30ರ ಸುಮಾರಿಗೆ ಮನೆಗೆ ತೆರಳಲು ಸಿದ್ಧರಾದಾಗ, ಸ್ನೇಹಿತರೊಬ್ಬರು ಮೋಹನ್ ಅವರ ಮನೆಗೆ ಉಬರ್ ಕ್ಯಾಬ್ ಬುಕ್ ಮಾಡಿದ್ದರು. ಕ್ಯಾಬ್ ಚಾಲಕ ಮುಂಗಡ ಹಣ ಪಡೆದು ಮೋಹನ್ ಅವರನ್ನು ಹತ್ತಿಸಿಕೊಂಡಿದ್ದಾನೆ.ಪ್ರಯಾಣದ ವೇಳೆ ನಶೆಯಲ್ಲಿದ್ದ ಮೋಹನ್ ನಿದ್ದೆಗೆ ಜಾರಿದ್ದರು. ಈ ಸಂದರ್ಭವನ್ನು ಬಳಸಿಕೊಂಡ ಚಾಲಕ, ಕಾಟಂನಲ್ಲೂರಿನ ಓರಿಯನ್ ಅಪ್‌ಟೌನ್ ಬಳಿ ಕ್ಯಾಬ್ ನಿಲ್ಲಿಸಿ, ಲೊಕೇಶನ್ ಬಂದಿದೆ ಎಂದು ಮೋಹನ್ ಅವರನ್ನು ಅಲ್ಲಿಯೇ ಇಳಿಸಿ ಪರಾರಿಯಾಗಿದ್ದಾನೆ.
ಕ್ಯಾಬ್‌ನಿಂದ ಇಳಿದ ಸ್ವಲ್ಪ ಹೊತ್ತಿನ ಬಳಿಕ ಮೋಹನ್ ತಮ್ಮ ಮೊಬೈಲ್ ಮತ್ತು ಕುತ್ತಿಗೆಯಲ್ಲಿದ್ದ 40 ಗ್ರಾಂ ಚಿನ್ನದ ಸರ ನಾಪತ್ತೆಯಾಗಿರುವುದನ್ನು ಅರಿತುಕೊಂಡಿದ್ದಾರೆ. ಬಳಿಕ, ಅದೇ ಮಾರ್ಗದಲ್ಲಿ ಬಂದ ವಾಹನ ಸವಾರರ ಸಹಾಯದಿಂದ ಸ್ನೇಹಿತರಿಗೆ ಕರೆ ಮಾಡಿ, ತಾನು ಬೇರೆ ಕಡೆ ಇಳಿದಿರುವುದಾಗಿ ತಿಳಿಸಿದ್ದಾರೆ. ಸ್ನೇಹಿತರು ಬಂದು ಮೋಹನ್ ಅವರನ್ನು ಮನೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲಕ, ಅನುಮಾನ ಬಾರದಿರಲು ಒಂದು ಪ್ಲಾನ್ ಮಾಡಿದ್ದ. ಮೋಹನ್ ಅವರನ್ನು ಕಾಟಂನಲ್ಲೂರಿನ ಬಳಿ ಇಳಿಸಿದ್ದರೂ, ಪ್ರಯಾಣದ ಟ್ರಿಪ್ ಅನ್ನು ಅವರ ಮನೆಯ ಬಳಿ ಅಂತ್ಯಗೊಳಿಸಿದ್ದಾನೆ. ಇದರಿಂದ ಕಂಪನಿಗೆ ಗೊತ್ತಾಗುವುದಿಲ್ಲ ಎಂದು ಲೆಕ್ಕಾಚಾರ ಹಾಕಿದ್ದ.
ಆಭರಣ ಹಾಗೂ ಮೊಬೈಲ್ ದೋಚಿರುವ ಬಗ್ಗೆ ಉಬರ್ ಕಂಪನಿಗೂ ದೂರು ನೀಡಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಚಾಲಕ ಉಬರ್ ಸಂಪರ್ಕ ಕಡಿತಗೊಳಿಸಿ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಆರೋಪಿ ಚಾಲಕ ಉಬರ್ ಸಂಸ್ಥೆಗೆ ನೀಡಿದ್ದ ಚಾಲನಾ ಪರವಾನಗಿ ಸೇರಿದಂತೆ ಇತರ ದಾಖಲೆಗಳ ಮಾಹಿತಿ ಆಧರಿಸಿ ಬಂಧಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.