10 ಕೋಟಿ ಮತದಾರರನ್ನು ಕೈಬಿಡುವ ಸಾಧ್ಯತೆ

Contributed byPunith AR|Vijaya Karnataka

ಚುನಾವಣಾ ಆಯೋಗದ ವಿಶೇಷ ಪರಿಷ್ಕರಣೆಯಿಂದ 10 ಕೋಟಿಗೂ ಹೆಚ್ಚು ಮತದಾರರು ಪಟ್ಟಿಯಿಂದ ಹೊರಬೀಳುವ ಆತಂಕವಿದೆ. ವಲಸೆ ಕಾರ್ಮಿಕರ ಹೆಸರುಗಳು ಕೈಬಿಟ್ಟು, ಅವರು ದೇಶದ ನಾಗರಿಕರಲ್ಲ ಎನ್ನಬಹುದು. ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು ಎಂದು ಆಗ್ರಹಿಸಲಾಗಿದೆ. ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡನೆಯಿಂದ ಕೆಲವು ರಾಜ್ಯಗಳಲ್ಲಿ ಸ್ಥಾನಗಳು ಕಡಿಮೆಯಾಗುವ ಸಾಧ್ಯತೆ ಇದೆ.

possibility of excluding 10 crore voters political revisions
ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ಮಾಡುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (Special Intensive Revision - SIR) ಯಿಂದ ದೇಶಾದ್ಯಂತ ಸುಮಾರು 10 ಕೋಟಿಗೂ ಹೆಚ್ಚು ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಹಾಕುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕ ಪ್ರೊ. ಯೋಗೇಂದ್ರ ಯಾದವ್‌ ಆತಂಕ ವ್ಯಕ್ತಪಡಿಸಿದ್ದಾರೆ. ‘ಜಾಗೃತ ಕರ್ನಾಟಕ’ ಸಂಘಟನೆ ನಗರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಈ ಪ್ರಕ್ರಿಯೆಯಿಂದ ವಲಸೆ ಕಾರ್ಮಿಕರು ಮತ್ತು ಇತರ ಅರ್ಹ ಮತದಾರರು ತಮ್ಮ ಹಕ್ಕನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.

ಪ್ರೊ. ಯೋಗೇಂದ್ರ ಯಾದವ್‌ ಅವರು ಮಾತನಾಡಿ, ಈಗಾಗಲೇ ಎರಡು ಕೋಟಿಗೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಪಶ್ಚಿಮ ಬಂಗಾಳದ ಅಂತಿಮ ಪಟ್ಟಿ ಇನ್ನೂ ಬರಬೇಕಿದೆ. ಈಗ ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ಈ ಎಸ್‌ಐಆರ್‌ ಪ್ರಕ್ರಿಯೆ ನಡೆಯುತ್ತಿದೆ. ಇದು ಪೂರ್ಣಗೊಳ್ಳುವ ಹೊತ್ತಿಗೆ ಸುಮಾರು 10 ಕೋಟಿ ಮತದಾರರು ಪಟ್ಟಿಯಿಂದ ಹೊರಗುಳಿಯಬಹುದು ಎಂದು ಅವರು ತಿಳಿಸಿದರು. "ಈಗಾಗಲೇ 15 ಚುನಾವಣೆಗಳಲ್ಲಿ ಮತ ಚಲಾಯಿಸಿದರೂ, ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಭಾಗವಹಿಸದಿದ್ದರೆ ನಿಮ್ಮ ಹೆಸರನ್ನು ಪಟ್ಟಿಯಿಂದ ತೆಗೆಯಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, 'ನನ್ನ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ' ಎಂದು ಅರ್ಜಿ ಕೊಡದಿದ್ದರೆ, ಅವರ ಹೆಸರನ್ನೂ ಪಟ್ಟಿಯಿಂದ ತೆಗೆಯುತ್ತಾರೆ," ಎಂದು ಅವರು ಉದಾಹರಣೆ ನೀಡಿದರು.
ಚುನಾವಣಾ ಆಯೋಗವು ವಿದೇಶಿಯರನ್ನು ಮಾತ್ರ ಪಟ್ಟಿಯಿಂದ ತೆಗೆದುಹಾಕುವುದಾಗಿ ಹೇಳಿತ್ತು. ಆದರೆ, ಇದುವರೆಗೆ ಪಟ್ಟಿಯಿಂದ ತೆಗೆದುಹಾಕಲಾದವರಲ್ಲಿ ಎಷ್ಟು ಮಂದಿ ವಿದೇಶಿಯರು ಎಂಬ ಬಗ್ಗೆ ಆಯೋಗ ಉತ್ತರಿಸಿಲ್ಲ ಎಂದು ಪ್ರೊ. ಯಾದವ್‌ ದೂರಿದರು. ವಲಸೆ ಕಾರ್ಮಿಕರ ಹೆಸರುಗಳು ಅವರು ವಾಸಿಸುವ ಸ್ಥಳದ ಮತದಾರರ ಪಟ್ಟಿಯಲ್ಲಿ ಇರುವುದಿಲ್ಲ. ಅವರ ಹುಟ್ಟೂರಿನ ಪಟ್ಟಿಯಿಂದಲೂ ಅವರ ಹೆಸರನ್ನು ತೆಗೆದುಹಾಕಲಾಗುತ್ತದೆ. ಹೀಗಾಗಿ, ಮುಂದೊಂದು ದಿನ ಇವರು ದೇಶದ ನಾಗರಿಕರೇ ಅಲ್ಲ ಎಂದು ಹೇಳುವ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಜಾಗೃತ ಕರ್ನಾಟಕ’ದ ಮುಖಂಡ ಬಿ.ಸಿ. ಬಸವರಾಜ್‌ ಅವರು ಮಾತನಾಡಿ, ಚುನಾವಣಾ ಆಯೋಗ ಯಾವುದೇ ರೀತಿಯ ಪರಿಶೀಲನೆ ಮಾಡಲಿ, ಆದರೆ ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಆಗ್ರಹಿಸಿದರು. ಈ ಕಾರ್ಯಕ್ರಮದಲ್ಲಿ ಭಾರತ್‌ ಜೋಡೋ ಅಭಿಯಾನದ ಮುಖಂಡ ಡಾ. ರಾಹುಲ್‌ ಶಾಸ್ತ್ರಿ, ಜೈ ಕಿಸಾನ್‌ ಆಂದೋಲನದ ಅವಿಕ್‌ ಸಹಾ, ಜನಜಾಗರಣ್‌ ಶಕ್ತಿ ಸಂಘಟನೆಯ ಆಶಿಶ್‌ ರಂಜನ್‌ ಅವರು ಉಪಸ್ಥಿತರಿದ್ದರು.

ಇನ್ನು, ಎಸ್‌ಐಆರ್‌ ಪ್ರಕ್ರಿಯೆಯ ನಂತರ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ನಡೆದರೆ, ಬಿಜೆಪಿ ಅಧಿಕಾರದಲ್ಲಿಲ್ಲದ ರಾಜ್ಯಗಳಲ್ಲಿ ಲೋಕಸಭಾ ಸೀಟುಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ಪ್ರೊ. ಯೋಗೇಂದ್ರ ಯಾದವ್‌ ವಿವರಿಸಿದರು. ಉದಾಹರಣೆಗೆ, ಕೇರಳದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ 12ಕ್ಕೆ ಇಳಿಯಬಹುದು. ತಮಿಳುನಾಡು 29ರಿಂದ 21ಕ್ಕೆ, ಆಂಧ್ರ ಮತ್ತು ತೆಲಂಗಾಣಗಳು ಹಲವು ಕ್ಷೇತ್ರಗಳನ್ನು ಕಳೆದುಕೊಳ್ಳಬಹುದು. ಕರ್ನಾಟಕವೂ ಎರಡು ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಆದರೆ, ಉತ್ತರ ಭಾರತದ ಹಿಂದಿ ಭಾಷಿಕ ರಾಜ್ಯಗಳು ಮತ್ತು ಗುಜರಾತ್‌ನಲ್ಲಿ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಅವರು ತಿಳಿಸಿದರು.