Railway Promotion Exam Special Demand For Kannada Language
ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲೂಕಧಿನ್ನಧಿಡಕ್ಕೆ ಕೊಕ್
Contributed by: DHANANJAYAGOWDA|Vijaya Karnataka•
ನೈಋುತ್ಯ ರೈಲ್ವೆಯ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶವಿಲ್ಲ. ಹಿಂದಿ ಮತ್ತು ಇಂಗ್ಲಿಷ್‌ಗೆ ಮಾತ್ರ ಸೀಮಿತಗೊಳಿಸಿರುವುದಕ್ಕೆ ಕನ್ನಡ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಮಾ. 17ರಂದು ನಡೆಯುವ ಪರೀಕ್ಷೆಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆದಿದೆ. ರೈಲ್ವೆ ಇಲಾಖೆಯ ಈ ನಿರ್ಧಾರಕ್ಕೆ ಅಭ್ಯರ್ಥಿಗಳು ಅಸಮಾಧಾನಗೊಂಡಿದ್ದಾರೆ.
ಬೆಂಗಳೂರು: ನೈಋುತ್ಯ ರೈಲ್ವೆಯು ಮಾರ್ಚ್ 17ರಂದು ನಡೆಸಲಿರುವ ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡವನ್ನು ಹೊರತುಪಡಿಸಿ ಕೇವಲ ಹಿಂದಿ ಮತ್ತು ಇಂಗ್ಲಿಷ್‌ಗೆ ಮಾತ್ರ ಅವಕಾಶ ನೀಡಿರುವುದಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈ ನಿರ್ಧಾರವನ್ನು ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ), ಪರೀಕ್ಷೆಗಳನ್ನು ಯಾವುದೇ ಕಾರಣಕ್ಕೂ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ಈ ಹಿಂದೆ ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶವಿದ್ದರೂ, ಪರೀಕ್ಷೆಗೆ ಕೆಲವೇ ದಿನಗಳು ಇರುವಾಗ ಹೊಸ ಅಧಿಸೂಚನೆ ಹೊರಡಿಸಿ ಕನ್ನಡವನ್ನು ಕಡೆಗಣಿಸಿರುವುದು ಅಭ್ಯರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ನೈಋುತ್ಯ ರೈಲ್ವೆಯು ಮೈಸೂರು ವಿಭಾಗದಲ್ಲಿ ಗೂಡ್ಸ್ ಟ್ರೈನ್ ಮ್ಯಾನೇಜರ್‌ನ 194 ಹುದ್ದೆಗಳಿಗೆ ಮತ್ತು ಹುಬ್ಬಳ್ಳಿ ವಿಭಾಗದಲ್ಲಿ ಎಲ್‌ಡಿಸಿಇ (ಲಿಮಿಟೆಡ್ ಡಿಪಾರ್ಟ್‌ಮೆಂಟಲ್ ಕಾಂಪಿಟಿಟಿವ್ ಎಕ್ಸಾಮಿನೇಷನ್) 101 ಮುಂಬಡ್ತಿ ಹುದ್ದೆಗಳಿಗೆ 2025ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಆಗ ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶವಿತ್ತು. ಆದರೆ, ಈಗ ಪರೀಕ್ಷೆಗೆ ಕೇವಲ ನಾಲ್ಕೈದು ದಿನಗಳು ಇರುವಾಗ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಿ ಹೊಸ ಅಧಿಸೂಚನೆ ಹೊರಡಿಸಿದೆ. ಇದು ಕನ್ನಡದಲ್ಲಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದ ಅಭ್ಯರ್ಥಿಗಳಿಗೆ ದೊಡ್ಡ ಆಘಾತ ನೀಡಿದೆ.ರೈಲ್ವೆ ಇಲಾಖೆಯ ಅಧಿಕಾರಿಗಳು, ಮುಂಬಡ್ತಿ ಪರೀಕ್ಷೆಗಳು ಕಂಪ್ಯೂಟರ್ ಆಧಾರಿತವಾಗಿ ನಡೆಯುವುದರಿಂದ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ಮಾರ್ಚ್ 17ರಂದು ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ನಡೆಯಬೇಕಿರುವ ಪದೋನ್ನತಿ ಪರೀಕ್ಷೆಗಳನ್ನು ಯಾವುದೇ ಕಾರಣಕ್ಕೂ ನಡೆಸಲು ಬಿಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ವಿಭಾಗೀಯ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಕರವೇ ತಿಳಿಸಿದೆ. ಪೊಲೀಸರು ಪ್ರತಿಭಟನೆ ನಡೆಸದಂತೆ ನೋಟಿಸ್ ನೀಡಿದ್ದರೂ, ತಾವು ಅದಕ್ಕೆ ಹೆದರುವುದಿಲ್ಲ ಎಂದು ನಾರಾಯಣಗೌಡ ಹೇಳಿದ್ದಾರೆ. ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರೆ ರೈಲ್ವೆ ಅಧಿಕಾರಿಗಳಿಗೆ ತಮ್ಮ ಕೂಗು ತಲುಪುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪರೀಕ್ಷಾ ಕೇಂದ್ರಗಳ ಬಳಿ ಸಾವಿರಾರು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ಇದರಿಂದ ಉಂಟಾಗುವ ಎಲ್ಲ ಅನಾಹುತಗಳಿಗೆ ರೈಲ್ವೆ ಇಲಾಖೆಯೇ ಹೊಣೆ ಎಂದು ಅವರು ಎಚ್ಚರಿಸಿದ್ದಾರೆ.
ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದ್ದರೂ ಕರ್ನಾಟಕದ ಕೇಂದ್ರ ಸಚಿವರು ಸುಮ್ಮನಿರುವುದು ಸರಿಯಲ್ಲ ಎಂದು ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ದೊಡ್ಡ ಹುದ್ದೆಗಳಲ್ಲಿ ಇರುವುದು ಒಳಿತಲ್ಲ. ಕನ್ನಡಿಗರು ನೀಡಿದ ಅಧಿಕಾರವನ್ನು ಅವರಿಗೆ ಋುಣ ತೀರಿಸಲು ಬಳಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
"ಏಕಾಏಕಿ ಕನ್ನಡದಲ್ಲಿ ಪರೀಕ್ಷೆಯ ಅವಕಾಶ ತೆಗೆಯಲಾಗಿದೆ. ಕನ್ನಡದಲ್ಲಿ ಪರೀಕ್ಷಾ ಸಿದ್ಧತೆ ಮಾಡಿಕೊಂಡಿದ್ದ ನಾವು ಈಗೇನು ಮಾಡಬೇಕು? ಉತ್ತರ ಭಾರತೀಯರಿಗೆ ಈ ಪರೀಕ್ಷೆಯಿಂದ ಅನುಕೂಲವಾಗಲಿದೆ," ಎಂದು ಹೆಸರು ಹೇಳಲಿಚ್ಛಿಸದ ಕನ್ನಡದ ಅಭ್ಯರ್ಥಿಯೊಬ್ಬರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರದಿಂದಾಗಿ ಅಭ್ಯರ್ಥಿಗಳು ಪರೀಕ್ಷೆಯನ್ನು ಬಹಿಷ್ಕರಿಸುವ ಬಗ್ಗೆಯೂ ಚಿಂತಿಸಿದ್ದಾರೆ.