ಭವಿಷ್ಯನಿಧಿ ಪಿಂಚಣಿ ಹೆಚ್ಚಳಕ್ಕೆ ಸಂಸದೀಯ ಸಮಿತಿ ಶಿಫಾರಸು

Contributed byVenkat K|Vijaya Karnataka

ಭವಿಷ್ಯನಿಧಿ ಪಿಂಚಣಿ 1,000 ರೂ. ಇದ್ದು, ಇದನ್ನು ತುರ್ತಾಗಿ ಹೆಚ್ಚಳ ಮಾಡಬೇಕೆಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ. ಕಾರ್ಮಿಕ ಸಂಘಟನೆಗಳು ಕನಿಷ್ಠ ಪಿಂಚಣಿ 7,500 ರೂ.ಗೆ ಏರಿಸುವಂತೆ ಒತ್ತಾಯಿಸುತ್ತಿವೆ. ಜೀವನ ವೆಚ್ಚ ಹೆಚ್ಚಾಗಿದ್ದರೂ ಪಿಂಚಣಿ ಮೊತ್ತ ಅತ್ಯಲ್ಪವಾಗಿದೆ. ಕೇಂದ್ರ ಬಜೆಟ್ ಮೂಲಕ ಇಪಿಎಸ್-95 ಯೋಜನೆಗೆ ನೆರವು ನೀಡುವ ಸಾಧ್ಯತೆ ಪರಿಶೀಲಿಸಬೇಕು ಎಂದು ಸಮಿತಿ ವರದಿ ತಿಳಿಸಿದೆ.

parliamentary committee recommends increase in provident fund pension demand for 7500 inr
ಸದ್ಯ 1,000 ರೂ. ಇರುವ ಭವಿಷ್ಯನಿಧಿ ಪಿಂಚಣಿದಾರರ ಕನಿಷ್ಠ ಮಾಸಿಕ ಪಿಂಚಣಿಯನ್ನು ಕೂಡಲೇ ಹೆಚ್ಚಿಸಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ. ಕಾರ್ಮಿಕ ಸಂಘಟನೆಗಳು ಹಲವು ವರ್ಷಗಳಿಂದ ಇಪಿಎಸ್‌-95 ಅಡಿಯಲ್ಲಿ ಕನಿಷ್ಠ ಪಿಂಚಣಿ ಮೊತ್ತವನ್ನು 7,500 ರೂ.ಗೆ ಏರಿಸಬೇಕೆಂದು ಒತ್ತಾಯಿಸುತ್ತಿವೆ. ಜೀವನ ವೆಚ್ಚ ಹೆಚ್ಚಾಗಿದ್ದರೂ ಪಿಂಚಣಿ ಮೊತ್ತ ಹೆಚ್ಚಾಗಿಲ್ಲ, ಇದು ಅತ್ಯಲ್ಪವಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಕಾರ್ಮಿಕರು, ಜವಳಿ ಮತ್ತು ಕೌಶಲ ಅಭಿವೃದ್ಧಿ ಕುರಿತ ಸಂಸತ್ತಿನ ಸ್ಥಾಯಿ ಸಮಿತಿಯು ತನ್ನ ವರದಿಯಲ್ಲಿ ಈ ಶಿಫಾರಸು ಮಾಡಿದೆ. "ಈಗಿರುವ ಮೊತ್ತ ವಾಸ್ತವಕ್ಕೆ ದೂರವಾಗಿದೆ. ಇದನ್ನು ತುರ್ತಾಗಿ ಮರುಪರಿಶೀಲಿಸಬೇಕಿದೆ," ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಇಂದಿನ ಜೀವನ ವೆಚ್ಚಕ್ಕೆ ಅನುಗುಣವಾದ ಕನಿಷ್ಠ ಪಿಂಚಣಿ ದೊರೆಯುವಂತೆ ಮಾಡಲು ಇಪಿಎಸ್‌-95 ಯೋಜನೆಗೆ ಕೇಂದ್ರದ ಬಜೆಟ್ ಮೂಲಕ ನೆರವು ಒದಗಿಸುವುದು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು ಎಂದು ಸಮಿತಿ ಹೇಳಿದೆ.
ಇಪಿಎಸ್‌-95 (Employees' Pension Scheme 1995) ಯೋಜನೆಯಡಿ, ನೌಕರರು ನಿವೃತ್ತರಾದ ನಂತರ ಮಾಸಿಕ ಪಿಂಚಣಿ ಪಡೆಯುತ್ತಾರೆ. ಆದರೆ, ಸದ್ಯ ಇರುವ ಕನಿಷ್ಠ ಪಿಂಚಣಿ ಮೊತ್ತವು ಜನರ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಹೀಗಾಗಿ, ಈ ಮೊತ್ತವನ್ನು ಹೆಚ್ಚಿಸುವುದು ಅತ್ಯಗತ್ಯ ಎಂದು ಸಮಿತಿ ಒತ್ತಿ ಹೇಳಿದೆ. ಕಾರ್ಮಿಕ ಸಂಘಟನೆಗಳು ಕೂಡ ಈ ಬಗ್ಗೆ ಹಲವು ಬಾರಿ ಸರ್ಕಾರದ ಗಮನ ಸೆಳೆದಿದ್ದವು.