Congress Senior Leaders Outburst Against Health Minister
ಸರಕಾರದ ವಿರುದ್ಧ ಹಿರಿಯ ಶಾಸಕರ ಅಪಸ್ವರ
Contributed by: Keerthi Prasad|Vijaya Karnataka•
ಬೆಂಗಳೂರಿನಲ್ಲಿ ನಡೆದ ಸರಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಕುರಿತ ಚರ್ಚೆಯಲ್ಲಿ ಕಾಂಗ್ರೆಸ್ ಹಿರಿಯ ಶಾಸಕರು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ಸಚಿವರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಬಿ.ಆರ್.ಪಾಟೀಲ್ ಆರೋಪಿಸಿದರು. ವೈದ್ಯರ ವರ್ಗಾವಣೆ ಆದೇಶ ಹಿಂಪಡೆಯುವಂತೆ ಒತ್ತಾಯಿಸಿದರು. ಮಹಾಂತೇಶ ಕೌಜಲಗಿ ಕೂಡ ತಜ್ಞ ವೈದ್ಯರ ವರ್ಗಾವಣೆಯಿಂದ ಗ್ರಾಮೀಣ ಪ್ರದೇಶದಲ್ಲಿ ತೊಂದರೆಯಾಗಲಿದೆ ಎಂದು ಮನವಿ ಮಾಡಿದರು. ಸಚಿವರು ಇದಕ್ಕೆ ಪ್ರತಿಕ್ರಿಯಿಸಿದರು.
ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ಕಾಂಗ್ರೆಸ್‌ನ ಹಿರಿಯ ಶಾಸಕರೇ ಸರ್ಕಾರದ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ಸಚಿವರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಶಾಸಕ ಬಿ.ಆರ್. ಪಾಟೀಲ್ ಆರೋಪಿಸಿದರು. ವೈದ್ಯರ ವರ್ಗಾವಣೆ ಮಾಡಿಲ್ಲ ಎಂದು ಸಚಿವರು ಹೇಳುತ್ತಿದ್ದಾರೆ, ಆದರೆ ವರ್ಗಾವಣೆ ಆದೇಶ ತೋರಿಸುತ್ತೇನೆ ಎಂದರು. ಕೂಡಲೇ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಆರೋಗ್ಯ ಸಚಿವರು ಬೆಂಗಳೂರಿನವರಾದ್ದರಿಂದ ಹಳ್ಳಿಗಳ ಆಸ್ಪತ್ರೆಗಳ ಪರಿಸ್ಥಿತಿ ಗೊತ್ತಿಲ್ಲ ಎಂದು ಪಾಟೀಲ್ ಹೇಳಿದರು. ವೈದ್ಯರ ವರ್ಗಾವಣೆ ಬಗ್ಗೆ ಸಾರ್ವಜನಿಕ ಅದಾಲತ್ ನಡೆಸಿ ನಿರ್ಧರಿಸಲಿ ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ತಮಗೂ ರಾಜಕೀಯ ಅನುಭವವಿದ್ದು ಗ್ರಾಮೀಣ ಚಿತ್ರಣ ಗೊತ್ತಿಲ್ಲ ಎನ್ನುವುದು ಸರಿಯಲ್ಲ ಎಂದರು. ಅದಕ್ಕೆ ಬಿ.ಆರ್. ಪಾಟೀಲ್, ನನಗೆ ರಾಜಕೀಯ ಮಾಡಲು ದೊಡ್ಡ ಕ್ಷೇತ್ರವಿದೆ ಎಂದು ತಿರುಗೇಟು ನೀಡಿದರು.ಕಾಂಗ್ರೆಸ್‌ನ ಮಹಾಂತೇಶ ಕೌಜಲಗಿ ಕೂಡ, ಪಿಎಚ್‌ಸಿ, ಸಿಎಚ್‌ಸಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರನ್ನು ವರ್ಗಾವಣೆ ಮಾಡಿದರೆ ಸ್ಥಳೀಯರು ಸಚಿವರನ್ನು ಕೇಳುವುದಿಲ್ಲ, ಶಾಸಕರನ್ನು ಪ್ರಶ್ನಿಸುತ್ತಾರೆ ಎಂದರು. ಎರಡು ವರ್ಷಗಳಿಂದ ಪ್ರಯತ್ನಿಸಿದರೂ ಒಬ್ಬ ಪ್ರಸೂತಿ ತಜ್ಞರನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು. ತಜ್ಞ ವೈದ್ಯರ ವರ್ಗಾವಣೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ತೊಂದರೆಯಾಗಲಿದೆ. ಆದೇಶವನ್ನು ಪುನರ್ ಪರಿಶೀಲಿಸಬೇಕು ಎಂದು ಮನವಿ ಮಾಡಿದರು.