ನವ ಭಾವದ ನವ ರಂಗಿನ ಗುಂಗಲಿ
-------
ಇಂಟ್ರೊ
ಹಳೆಯದನ್ನು ಮರೆತು ಹೊಸತನ್ನು ಸ್ವಾಗತಿಸುವ, ನಿನ್ನೆಯ ಕಹಿಯನ್ನು ಮರೆತು ಸಿಹಿ ನೆನಪುಗಳೊಂದಿಗೆ ನಾಳೆಯ ಸಿಹಿ-ಕಹಿ ತುಂಬಿದ ಬದುಕಿಗೆ ಸ್ವಾಗತ ಕೋರುವ ಯುಗಾದಿಯು ಮರಳಿ ಬಂದಿದೆ.
ಮೈತ್ರಿ ಭಟ್
ಕಾಲದಿಂದ ಕಾಲಕ್ಕೆ ನಾವು ಆಚರಿಸುವ ಹಬ್ಬಗಳ ಆಚರಣೆಯಲ್ಲಿ, ಅವುಗಳ ಸೊಗಸಿನಲ್ಲಿಅನೇಕ ಬದಲಾವಣೆಗಳು ನಿರೂಪಿತವಾಗುತ್ತಲೇ ಇರುತ್ತವೆ. ಆದರೆ ಹಬ್ಬಗಳು ಮನಸ್ಸಿಗೆ ನೀಡುವ ಮುದ ಅದಮ್ಯವಾದುದು. ನಮ್ಮ ನಿರೀಕ್ಷೆಗಳೆಲ್ಲವೂ ನನಸಾಗದಿದ್ದರೂ, ಹೊಸ ಸಂವತ್ಸರ ಹೊಸ ಹೊಂಗನಸುಗಳೊಂದಿಗೆ ಕಾಲಿಟ್ಟಿದೆ.
ನೆಲಮುಗಿಲ ಪ್ರೀತಿಯಿಂದ ಪಲ್ಲವಿಸಿದ ಪ್ರಕೃತಿಯಲ್ಲಿಹೂ-ಹಣ್ಣು ತರುಲತೆಗಳ ಕಂಪಿನಲ್ಲಿತೊನಲಾಡುತ ಪ್ರಕೃತಿ ತನ್ನ ತಾ ಮರೆತಿರುವಾಗ ಸಹಜವಾಗಿಯೇ ಮನಸು ಆನಂದದಲ್ಲಿಮುಳುಗಿರುತ್ತದೆ. ಆಗ ಹಬ್ಬದ ಆಚರಣೆಯು ಆ ಸೊಬಗಿಗೆ ಮಗದಷ್ಟು ಸೊಗಸನ್ನು ತುಂಬುತ್ತದೆ. ಯುಗಾದಿ ಎನ್ನುವುದು ಕೇವಲ ಒಂದು ನಿರ್ದಿಷ್ಟ ಸಮಯದ ಗಡುವಷ್ಟೇ ಆಗಿದ್ದಿದ್ದರೆ ಈ ಸಂಭ್ರಮ ಬಾಳಿನಲ್ಲಿತುಂಬುತ್ತಿತ್ತೋ ಇಲ್ಲವೋ... ಆದರೆ ಅದು ವರುಷವೊಂದು ಕಳೆದುದರ ಕೇವಲ ಲೆಕ್ಕಾಚಾರವಾಗಿರದೆ ಜೀವಕಳೆ(ಲೆ)ಯನು ತುಂಬಿ ಹುರುಪು-ಹೊನಲು-ಉತ್ಸಾಹವ ಪುಟಿದೇಳಿಸಿ, ಕಣ್ ಕಾಣ್ವ ಹೊಸತರೊಂದಿಗೆ ಅಂತರಂಗದಾಳದಲ್ಲೂಹೊಸರಾಗದ ನರುಗಂಪು ಮೂಡುವ ಸವಿ ಸಮಯ.
ಪ್ರಕೃತಿಯ ಜೊತೆಗೆ ನಮ್ಮ ಹೃದಯವನ್ನು ಹೃದ್ಯವಾಗಿಸುವ, ಗರಿಗೆದರಿಸುವ ಬಣ್ಣ-ಬೆಡಗಿನ ನಾಡಿಗೆ ಚೈತ್ರದ ಹಾದಿ ತೆರೆದುಕೊಳ್ಳುವ ಸಂಭ್ರಮದ ಕಾಲವಾದ ‘ಯುಗಾದಿ’ ಮತ್ತೆ ಬಂದಿದೆ. ಕಾಲ ಸಂವತ್ಸರವೊಂದರ ಸುತ್ತು ಮುಗಿಸಿ ಮತ್ತೆ ಮುನ್ನಡೆದಿದೆ. ಕಾಲ ಎಂದಿಗೂ ನಿಲ್ಲದು. ನಿತ್ಯ ನಡೆವುದೇ ಅದರ ರೀತಿ. ಆದರೆ ಅದರ ನಡೆಯ ಗತಿಯಲ್ಲಿಬದಲಾವಣೆಯಿರಬಹುದು. ಅದು ಪ್ರಕೃತಿಯಲ್ಲೂಜನಮಾನಸದಲ್ಲೂವ್ಯಕ್ತವಾಗುತ್ತದೆ. ತಾಯಿಯ ತೋಳಿನ ತೆಕ್ಕೆಯಲ್ಲಿಹೊಸ ಬೆರಗಿನಿಂದ ಸುತ್ತಲಿನ ಲೋಕವನ್ನು ದಿಟ್ಟಿಸುವ ಕಂದನಂತೆ ಯುಗಾದಿಯ ಆಗಮನವನ್ನು ಸಂತಸ, ಸಂಭ್ರಮದಿಂದ ನಿರುಕಿಸುವವರು ನಾವು. ಅಂತರಂಗದಲ್ಲಿಬೆರಗನ್ನು ತುಂಬಿ ದಿಟ್ಟಿಸುವವರು ನಾವು.
ಈ ಕ್ಷಣ ಗಿಡ, ಮರ, ಬಳ್ಳಿಗಳಲ್ಲಿಹೊಸತಾಗಿ ಅರಳುವ ಮೊಗ್ಗನ್ನು ನೋಡುವುದೇ ಒಂದು ಚಂದ. ನಸುಬಿಸಿಲಿಗೆ ಹೊಳೆಯುವ ಚಿಗುರೆಲೆಗಳು ಮೆಲ್ಲನೆ ಅಲುಗಿದಾಗ ಮೂಡುವ ಹೊಸ ಹುರುಪಿನೊಂದಿಗೆ ಮನವು ಗರಿಗೆದರುವುದು ಸಹಜ.
ಈ ಯುಗಾದಿಯೆಂಬುದು ಹಳೆಯದರ ಯಶಸ್ಸಿನಲ್ಲಿಮೈಮರೆಯದೆ ಹೊಸತನ್ನು ಕಟ್ಟುವ ಸಂಧಿಕಾಲ. ಹೊಸತು ಹಳತಾಗುವುದು ನಿತ್ಯದ ಅನುಭವ. ಹಳತನ್ನು ಹೊಸತಾಗಿಸುವ ಈ ನಿಸರ್ಗದ ಕ್ರಿಯೆಯಲ್ಲಿಮಹತ್ವದ ಸಂದೇಶವಿದೆ. ಬದುಕಿನ ಏಕತಾನತೆಯನ್ನು ನೀಗಿ ಚಲನಶೀಲವಾಗಿಸುವುದೇ ಅದರ ಉದ್ದೇಶವೂ ಆಗಿದೆ. ಒಟ್ಟಿನಲ್ಲಿ, ಹಳತು ಕಳೆಯದೆ ಹೊಸತು ಬರದು; ಹೊಸತು ಹುಟ್ಟದೆ ಹರುಷ ಸಿಗದು.

