ವಿಕ ಸುದ್ದಿಲೋಕ ಚನ್ನಟಪಟ್ಟಣ
ಶಾಂತವೇರಿ ಗೋಪಾಲಗೌಡರು ಮೌಲ್ಯಯುತ ಹಾಗೂ ಪ್ರಬುದ್ಧ ರಾಜಕಾರಣಕ್ಕೆ ಹೆಸರಾಗಿದ್ದವರು ಎಂದು ಜಾನಪದ ವಿದ್ವಾಂಸ ಎಂ. ಬೈರೇಗೌಡ ಸ್ಮರಿಸಿದರು.
ಸಿಂ.ಲಿಂ. ನಾಗರಾಜು ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಪಟ್ಟಣದ ಜೆ.ಸಿ. ರಸ್ತೆಯ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯ ವಿದ್ಯಾಸಂಸ್ಥೆಯ ದೇವಮ್ಮ-ಚಿಕ್ಕಣ್ಣ ಸಭಾಂಗಣದಲ್ಲಿಆಯೋಜಿಸಿದ್ದ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಜಯಂತಿ ಹಾಗೂ ಗ್ರಾಮೀಣ ಯುವ ಕವಿ ಮೇದರದೊಡ್ಡಿ ಹನುಮಂತ ಅವರ ನೆಲದಲ್ಲಿಯೂ ನಕ್ಷತ್ರಗಳಿವೆ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜವಾದಿ ಚಿಂತನೆ, ಮೌಲ್ಯಾಧಾರಿತ ರಾಜಕಾರಣಕ್ಕೆ ಶಾಂತವೇರಿ ಗೋಪಾಲಗೌಡರು ಹೆಸರುವಾಸಿಯಾಗಿದ್ದು, ಅವರ ತತ್ವಾದರ್ಶಗಳು ಸಮಾಜದಲ್ಲಿಸದಾ ಜೀವಂತವಾಗಿರುವುದರ ಜತೆಗೆ ಮಾದರಿಯಾಗಿರಲಿವೆ ಎಂದರು.
ಕನ್ನಡ ಸೇವೆಯಲ್ಲಿವಿಶಿಷ್ಟ ಗುರುತನ್ನು ಮೂಡಿಸಿದ ಸಿಂ.ಲಿಂ. ನಾಗರಾಜು ಅವರು ಜಿಲ್ಲೆಯಲ್ಲಿಮಾತ್ರವಲ್ಲದೆ ರಾಜ್ಯಮಟ್ಟದಲ್ಲಿಯೂ ಹೆಸರು ಮಾಡಿದ ವ್ಯಕ್ತಿ ಎಂದು ಪ್ರಶಂಸಿಸುತ್ತಾ ಕನ್ನಡ ಭಾಷೆಯನ್ನು ಉಸಿರಿನಂತೆ ಪ್ರೀತಿಸಿ ಸರಳ ಜೀವನ ನಡೆಸಿದ ಮಹನೀಯರನ್ನು ಸ್ಮರಿಸುವ ಕಾರ್ಯಕ್ರಮಗಳು ಸಮಾಜಕ್ಕೆ ಮಾರ್ಗದರ್ಶಕವಾಗುತ್ತವೆ ಎಂದು ಅವರು ಹೇಳಿದರು.
ಸಂಸ್ಕೃತಿ ಚಿಂತಕ ಹಾಗೂ ವಿಚಾರವಾದಿ ಬಂಜಗೆರೆ ಜಯಪ್ರಕಾಶ್ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಶಾಂತವೇರಿ ಗೋಪಾಲಗೌಡರು ಪ್ರಬುದ್ಧ ರಾಜಕಾರಣದ ಪ್ರತೀಕವಾಗಿದ್ದವರು ಎಂದು ಹೇಳಿದರು. ವೋಟನ್ನು ನೀವೇ ಕೊಡಿ, ನೋಟನ್ನು ನೀವೇ ಕೊಡಿ, ನಿಮ್ಮ ಸೇವೆಗೆ ಅವಕಾಶ ನೀಡಿ ಎಂದು ಜನತೆಯ ಬಳಿ ವಿನಯದಿಂದ ಕೇಳಿಕೊಂಡಂತಹ ಅಪರೂಪದ ರಾಜಕಾರಣಿ ಗೋಪಾಲಗೌಡರು ಎಂದು ಅವರು ಸ್ಮರಿಸಿದರು.
ಅವರ ವ್ಯಕ್ತಿತ್ವ ಮತ್ತು ಚಿಂತನೆಗಳಿಂದ ರಾಷ್ಟ್ರಕವಿ ಕುವೆಂಪು, ಡಾ. ಪೂರ್ಣಚಂದ್ರ ತೇಜಸ್ವಿ, ಲಂಕೇಶ್ ಸೇರಿದಂತೆ ಆ ಕಾಲದ ಅನೇಕ ಸಾಹಿತಿಗಳು ಪ್ರಭಾವಿತರಾಗಿದ್ದು, ಅವರೊಡನೆ ಆತ್ಮೀಯ ಒಡನಾಟ ಹೊಂದಿದ್ದರು ಎಂದು ತಿಳಿಸಿದರು. ಶಾಂತವೇರಿ ಗೋಪಾಲಗೌಡರಂತೆಯೇ ರಾಜಕೀಯದಲ್ಲಿದ್ದು ಶುದ್ಧ ಹಸ್ತರಾಗಿದ್ದವರಲ್ಲಿಸಿಂ.ಲಿಂ. ನಾಗರಾಜು ಕೂಡ ಪ್ರಮುಖರು. ಮತದಾರರಿಗೆ ಯಾವುದೇ ಆಸೆ-ಆಮಿಷಗಳನ್ನು ಒಡ್ಡದೆ ಜನಸೇವೆಗೆ ಬದ್ಧರಾಗಿದ್ದ ಅವರು ಮೌಲ್ಯಾಧಾರಿತ ರಾಜಕಾರಣಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಸಾಮಾಜಿಕ ಚಿಂತಕ ವಿವೇಕಾನಂದ ಎಚ್ .ಕೆ. ಅವರು ಶಾಂತವೇರಿ ಗೋಪಾಲಗೌಡರ ಜೀವನ ಹಾಗೂ ಚಿಂತನೆಗಳ ಕುರಿತು ಪ್ರಧಾನ ಭಾಷಣ ಮಾಡಿ, ಅವರ ರಾಜಕೀಯ ಜೀವನವು ಇಂದಿನ ಪೀಳಿಗೆಗೆ ಆದರ್ಶದ ದಾರಿ ತೋರಿಸುವಂತದ್ದು ಎಂದು ಅಭಿಪ್ರಾಯಪಟ್ಟರು.
ಇನ್ನೊಬ್ಬ ಸಾಮಾಜಿಕ ಚಿಂತಕ ರೂಪೇಶ್ ಪುತ್ತೂರು ಅವರು ನೆಲದಲ್ಲಿಯೂ ನಕ್ಷತ್ರಗಳಿವೆ ಕವನ ಸಂಕಲನದ ಬಗ್ಗೆ ಮಾತನಾಡಿ, ಗ್ರಾಮೀಣ ಬದುಕಿನ ಸ್ಪಂದನೆ, ಬದುಕಿನ ಹೋರಾಟ ಮತ್ತು ಮಾನವೀಯ ಮೌಲ್ಯಗಳನ್ನು ಸ್ಪರ್ಶಿಸುವ ಕವನಗಳು ಓದುಗರ ಮನಸ್ಸಿಗೆ ಹತ್ತಿರವಾಗುತ್ತವೆ ಎಂದು ಹೇಳಿದರು.
ಟ್ರಸ್ಟ್ ಸಂಚಾಲಕ ಆದರ್ಶ ಕುಮಾರ್ ಎಸ್ .ಎನ್ . ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶ ವಿವರಿಸಿದರು.
ಸಿಂ.ಲಿಂ. ನಾಗರಾಜು ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಶಂಭೂಗೌಡ ನಾಗವಾರ ಅಧ್ಯಕ್ಷತೆ ವಹಿಸಿದ್ದರು.
ಬೆಂಗಳೂರು ದಕ್ಷಿಣ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಟಿ. ನಾಗೇಶ್ , ಸಾರ್ವಜನಿಕ ಒಕ್ಕಲಿಗರ ವಿದ್ಯಾರ್ಥಿ ನಿಲಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಿ. ಚನ್ನಪ್ಪ, ಎಸ್ ಡಿಎಂಸಿ ಸಮನ್ವಯ ವೇದಿಕೆ ರಾಜ್ಯಾಧ್ಯಕ್ಷ ಉಮೇಶ್ ಗಂಗವಾಡಿ, ಸಿಂ.ಲಿಂ. ಪ್ರತಿಷ್ಠಾನ ಟ್ರಸ್ಟ್ ಉಪಾಧ್ಯಕ್ಷ ಹಾಗೂ ಹಿರಿಯ ಸಾಹಿತಿ ಡಾ. ಕೂ.ಗಿ. ಗಿರಿಯಪ್ಪ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು.
ಪೋಟೊ16ಸಿಪಿಟಿ1: ಶಾಂತವೇರಿ ಗೋಪಾಲಗೌಡರ ಜಯಂತಿ ನೆಲದಲ್ಲಿಯೂ ನಕ್ಷತ್ರಗಳಿವೆ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿಪಾಲ್ಗೂಂಡ ಗಣ್ಯರು.

