ಬೇಸಿಗೆಗೆ ತಂಪು ಎಳನೀರು ಶರ್ಬತ್
ಇಂಟ್ರೊ
ಬೇಸಿಗೆಯ ನೈಸರ್ಗಿಕ ಪಾನೀಯವಾದ ಎಳನೀರು ಈ ಬಾರಿ ಫ್ಯೂಷನ್ ರುಚಿಯ ಶರ್ಬತ್ ಗಳಾಗಿ ಗಮನ ಸೆಳೆದಿದೆ.
ಲವಲವಿಕೆ ಸುದ್ದಿಲೋಕ
ಸಮ್ಮರ್ ಬಂದಾಗ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿಕೊಳ್ಳುವ ಎಳನೀರು ಜನರ ಪಾಲಿಗೆ ಸಂಜೀವಿನಿಯೇ ಹೌದು. ಒಂದು ಕಪ್ ಬಾಳೆಹಣ್ಣಿಗಿಂತ ಹೆಚ್ಚಿನ ಪೊಟಾಷಿಯಂ ನೀಡುವ ಇದು ನೈಸರ್ಗಿಕ ಸಕ್ಕರೆ, ದೇಹದ ತೇವಾಂಶ ಕಾಪಾಡುವ ಸೋಡಿಯಂ, ಮೆಗ್ನೀಷಿಯಂ ಮತ್ತು ಕ್ಯಾಲ್ಷಿಯಂ ಹೊಂದಿದೆ. ಎಲೆಕ್ಟ್ರೋಲೈಟ್ಸ್ ನಿಂದ ಸಮೃದ್ಧವಾಗಿರುವ ಹಾಗೂ ಕಡಿಮೆ ಕ್ಯಾಲೊರಿಯೊಂದಿಗೆ ದೇಹಕ್ಕೆ ಶಕ್ತಿ ನೀಡುವ ಎಳನೀರನ್ನು ನೇರವಾಗಿ ಕುಡಿಯುವುದರಿಂದ ಪ್ರಯೋಜನ ಹೆಚ್ಚು. ಆದರೆ ಪ್ರತಿಬಾರಿಯೂ ಈ ರೀತಿ ಕುಡಿಯುವುದು ಬೇಸರವೆನಿಸಿದರೆ ಇದಕ್ಕೆ ಕೆಲವು ವಸ್ತುಗಳನ್ನು ಬೆರೆಸಿ ಫ್ಯೂಷನ್ ರುಚಿಯ ಶರ್ಬತ್ ಗಳನ್ನು ಸವಿಯಬಹುದು.
ಎಳನೀರು-ನಿಂಬೆ ಶಿಕಂಜಿ: ನೀರಿನ ಬದಲಾಗಿ ಎಳನೀರಿನಿಂದ ತಯಾರಿಸುವ ನಿಂಬೆ ಪಾನೀಯ ಹೆಚ್ಚು ರುಚಿ ಮತ್ತು ಆರೋಗ್ಯಕರವಾಗಿದೆ. ಎಳನೀರಿಗೆ ನಿಂಬೆ ರಸ, ಸ್ವಲ್ಪ ಉಪ್ಪು, ಜೀರಿಗೆ ಪುಡಿ, ಜೇನುತುಪ್ಪ ಅಥವಾ ಬೆಲ್ಲದ ಸಿರಪ್ , ಪುದೀನ ಎಲೆ, ಐಸ್ ಕ್ಯೂಬ್ ಹಾಕಿ ತಯಾರಿಸಲಾಗುವ ಈ ಪಾನೀಯ ಉತ್ತಮ ಪರಿಮಳದ ಜತೆಗೆ ದೇಹವನ್ನು ಹೈಡ್ರೇಟ್ ಮಾಡುತ್ತದೆ.
ಕಲ್ಲಂಗಡಿ-ಎಳನೀರು ಸ್ಲಶ್ : ಸೆಮಿ ಫ್ರೋಝನ್ ರೂಪದ ಈ ಪಾನೀಯ ನೋಡಲು ಕೂಡ ಆಕರ್ಷಕ. ಎಳನೀರಿಗೆ ಫ್ರೋಝನ್ ಮಾಡಿದ ಕಲ್ಲಂಗಡಿ, ನಿಂಬೆ ರಸ, ಚಿಟಿಕೆ ಉಪ್ಪು ಸೇರಿಸಿ ತಯಾರಿಸಲಾಗುವ ಈ ಪಾನೀಯ ಬೀಚ್ ಹಾಲಿಡೇ ಭಾವನೆ ನೀಡುವ ರುಚಿ ಹೊಂದಿರುತ್ತದೆ.
ಎಳನೀರು-ಚಿಯಾ ಫ್ರೆಸ್ಕಾ: ಮೆಕ್ಸಿಕೊ ಮತ್ತು ಭಾರತದ ವೆಲ್ನೆಸ್ ವಲಯಗಳಲ್ಲಿಹೆಚ್ಚು ಜನಪ್ರಿಯವಾಗಿರುವ ಪಾನೀಯವಿದು. ಎಳನೀರಿನಲ್ಲಿನೆನೆಸಿದ ಚಿಯಾ ಬೀಜಗಳಿಗೆ ನಿಂಬೆ ರಸ, ಜೇನುತುಪ್ಪ, ಅಗತ್ಯವಿದ್ದರೆ ಸೌತೆಕಾಯಿಯ ಹೋಳುಗಳನ್ನು ಸೇರಿಸಿ ತಯಾರಿಸಲಾಗುವ ಈ ಪಾನೀಯ ಫಲೂದಾ ಸವಿದಂತೆ ಭಾಸವಾಗುತ್ತದೆ.
ಎಳನೀರು-ಪೈನಾಪಲ್ -ಜಿಂಜರ್ ಕೂಲರ್ : ಅನಾನಸ್ ಮತ್ತು ಶುಂಠಿಯನ್ನು ಎಳನೀರಿಗೆ ಬೆರೆಸಿ ಮಾಡಲಾಗುವ ಈ ಕೂಲರ್ ಸರಳ ಎಳನೀರು ಪಾನೀಯಕ್ಕಿಂತ ಹೆಚ್ಚು ವಿಶೇಷತೆ ಹೊಂದಿದೆ.
ಎಳನೀರು-ರೋಸ್ ಶರ್ಬತ್ : ಗುಲಾಬಿ ಹೂವಿನ ಸಿಹಿ ಮತ್ತು ಎಳನೀರಿನ ಸಿಹಿಯಿರುವ ಈ ಕೂಲ್ ಪಾನೀಯ ಅದ್ಭುತ ಬಣ್ಣ ಮತ್ತು ಪರಿಮಳ ಹೊಂದಿರುತ್ತದೆ. ಎಳನೀರಿಗೆ ಸ್ವಲ್ಪ ರೋಸ್ ಶರ್ಬತ್ , ನಿಂಬೆ ರಸ, ನೆನೆಸಿದ ಕಾಮಕಸ್ತೂರಿ ಬೀಜಗಳನ್ನು ಹಾಕಿ ತಯಾರಿಸುವ ಈ ಪಾನೀಯ ಬೇಸಿಗೆ ಕಾಲಕ್ಕೆ ಉತ್ತಮ.
ಬಾಕ್ಸ್
ಎಳನೀರು ಬಳಸುವ ಮುನ್ನ
-ಶರ್ಬತ್ ಗೆ ತಾಜಾ ಎಳನೀರು ಬಳಸಿದರೆ ರುಚಿ ಅದ್ಭುತವಾಗಿರುತ್ತದೆ.
-ಪ್ಯಾಕ್ ಮಾಡಿದ ಎಳನೀರು ಬಳಸುವ ಮುನ್ನ ಅದರ ಲೇಬಲನ್ನು ಎಚ್ಚರಿಕೆಯಿಂದ ಓದಿ.
-ಎಳನೀರನ್ನು ಕೆತ್ತಿದ ನಂತರ 24 ಗಂಟೆಗಳೊಳಗೆ ಬಳಸಿ ಮತ್ತು ಫ್ರಿಜ್ ನಲ್ಲಿಡಿ.
-ಎಳನೀರನ್ನು ಕುದಿಸಬೇಡಿ ಅಥವಾ ಬಿಸಿ ಮಾಡಬೇಡಿ. ಶಾಖದಿಂದ ಇದರಲ್ಲಿರುವ ಎಲೆಕ್ಟ್ರೋಲೈಟ್ ಮತ್ತು ತಾಜಾ ಪರಿಮಳ ನಷ್ಟವಾಗುತ್ತದೆ.

