ಡ್ರೈವ್ ಲೀಡ್ : ಯುದ್ಧಕ್ಕೆ ನಲುಗಿದ ವಾಹನೋದ್ಯಮ

Contributed byDHEERAJ K|Vijaya Karnataka

ಜಾಗತಿಕ ಯುದ್ಧದ ಪರಿಣಾಮ ಭಾರತದ ವಾಹನೋದ್ಯಮಕ್ಕೆ ತಟ್ಟಿದೆ. ರಫ್ತು ಕುಂಠಿತಗೊಂಡಿದೆ. ಕಚ್ಚಾ ವಸ್ತುಗಳ ಕೊರತೆ ಎದುರಾಗಿದೆ. ಇಂಧನ ಬೆಲೆ ಏರಿಕೆಯಾಗಿದೆ. ಇದರಿಂದಾಗಿ ವಾಹನಗಳ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ವಿದ್ಯುತ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದ್ದರೂ, ಬ್ಯಾಟರಿ ವಸ್ತುಗಳ ಆಮದಿನ ಮೇಲೆ ಅವಲಂಬನೆ ಬೆಲೆ ಏರಿಕೆಗೆ ಕಾರಣವಾಗಬಹುದು.

automobile industry crisis price hike in india due to war
ಯುದ್ಧದ ಕರಿನೆರಳು: ಭಾರತದ ವಾಹನೋದ್ಯಮ ಕ್ಕೆ ದೊಡ್ಡ ಹೊಡೆತ! ಅಮೆರಿಕ, ಇಸ್ರೇಲ್, ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ ಜಾಗತಿಕವಾಗಿ ಬಿಕ್ಕಟ್ಟು ಎದುರಾಗಿದ್ದು, ಭಾರತದ ವಾಹನೋದ್ಯಮ ಕೂಡ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ರಷ್ಯಾ-ಉಕ್ರೇನ್ ಯುದ್ಧ ಇನ್ನೂ ಮುಗಿದಿಲ್ಲ, ಇದರ ಬೆನ್ನಲ್ಲೇ ಇಸ್ರೇಲ್-ಹಮಾಸ್ ಸಂಘರ್ಷ ಇರಾನ್ ಯುದ್ಧವಾಗಿ ಮಾರ್ಪಟ್ಟಿದೆ. ಈ ಜಾಗತಿಕ ಅಶಾಂತಿ ಭಾರತದ ವಾಹನಗಳ ಬೆಲೆ ಏರಿಕೆಗೆ ಕಾರಣವಾಗಿದ್ದು, ಏಪ್ರಿಲ್ 1ರಿಂದ ಶೇ.23ರಷ್ಟು ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ರಫ್ತು ಕುಸಿತ, ಕಚ್ಚಾ ವಸ್ತುಗಳ ಕೊರತೆ, ಇಂಧನ ಸಂಕಟ, ಮತ್ತು ವಿದ್ಯುತ್ ವಾಹನಗಳ ಮೇಲೆ ಮಿಶ್ರ ಪರಿಣಾಮ - ಇವೆಲ್ಲವೂ ವಾಹನೋದ್ಯಮದ ಮೇಲೆ ಯುದ್ಧದ ಕರಿನೆರಳನ್ನು ಬೀರಿವೆ.

ರಷ್ಯಾ ಮತ್ತು ಉಕ್ರೇನ್ ನಡುವೆ 2022ರ ಫೆಬ್ರವರಿಯಲ್ಲಿ ಆರಂಭವಾದ ಯುದ್ಧ ಇನ್ನೂ ಮುಗಿದಿಲ್ಲ. 2023ರಲ್ಲಿ ಆರಂಭವಾಗಿದ್ದ ಇಸ್ರೇಲ್ ಮತ್ತು ಹಮಾಸ್ ನಡುವಿನ ಕಾದಾಟ ಈಗ ಇನ್ನೊಂದು ಹಂತ ಮುಂದೆ ಹೋಗಿ, ಇರಾನ್ ಯುದ್ಧವಾಗಿ ಬದಲಾಗಿದೆ. ಈ ಯುದ್ಧವೀಗ ಜಗತ್ತಿನ ನಿದ್ದೆಗೆಡಿಸಿದೆ. ಭಾರತದ ವಾಹನೋದ್ಯಮಕ್ಕೂ ಇದರ ಬಿಸಿ ತಟ್ಟಿದೆ. ಯುದ್ಧದ ಪರಿಣಾಮವಾಗಿ ಭಾರತದಲ್ಲಿ ಏಪ್ರಿಲ್ 1ರಿಂದ ವಾಹನಗಳ ಬೆಲೆ ಶೇ.23ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ರಫ್ತಿನ ಮೇಲೆ ದೊಡ್ಡ ಹೊಡೆತ: ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಪ್ರದೇಶಗಳು ಭಾರತದ ವಾಹನ ತಯಾರಕರಿಗೆ ಬಹಳ ಮುಖ್ಯವಾದ ಮಾರುಕಟ್ಟೆಗಳಾಗಿವೆ. ಇರಾನ್ ಯುದ್ಧವು ಇಲ್ಲಿನ ಮಾರುಕಟ್ಟೆಯ ಮೇಲೆ ಗಂಭೀರ ಏಟನ್ನೇ ನೀಡಿದೆ. ಹುಂಡೈ ಇಂಡಿಯಾ ತನ್ನ ಉತ್ಪಾದನೆಯ ಶೇ.4ರಷ್ಟು ವಾಹನಗಳನ್ನು ದಕ್ಷಿಣ ಮಧ್ಯಪ್ರಾಚ್ಯಕ್ಕೆ ಕಳುಹಿಸುತ್ತದೆ. ಇನ್ನು ಮಾರುತಿ ಸುಜುಕಿ ತನ್ನ ಶೇ.15ರಷ್ಟು ವಾಹನಗಳನ್ನು ಅಲ್ಲಿಗೆ ಪೂರೈಕೆ ಮಾಡುತ್ತಿದೆ. ಬಜಾಜ್ ಕೂಡ ಇಲ್ಲಿನ ಮಾರುಕಟ್ಟೆಯನ್ನು ಅವಲಂಬಿಸಿದೆ. ಬಹುತೇಕ ಗಲ್ಫ್ ಬಂದರುಗಳಿಗೆ ಭಾರತದಿಂದ ರಫ್ತು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಹರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನ ವಾತಾವರಣ ಇರುವುದರಿಂದ ಹಡಗುಗಳನ್ನು ಕೇಪ್ ಆಫ್ ಗುಡ್ ಹೋಪ್ ಮೂಲಕ ಸಾಗಿಸಲಾಗುತ್ತಿದೆ. ಇದರಿಂದಾಗಿ ಹಡಗು ಗಮ್ಯ ತಲುಪಲು 14ರಿಂದ 20 ದಿನಗಳು ಹೆಚ್ಚುವರಿಯಾಗಿ ಪ್ರಯಾಣಿಸಬೇಕಾಗುತ್ತದೆ. ಇದರಿಂದಾಗಿ ಪ್ರತಿ ಶಿಪ್‌ಮೆಂಟ್‌ಗೆ ಕನಿಷ್ಠ 1.39 ಲಕ್ಷ ರೂ.ಗಳಷ್ಟು ಹೆಚ್ಚುವರಿ ಖರ್ಚು ಬೀಳುತ್ತದೆ. ಇದೇ ವೇಳೆ ಯುದ್ಧದಿಂದಾಗಿ ಸಮುದ್ರ ವಿಮಾ ಪ್ರೀಮಿಯಂಗಳು ಕೂಡ ಶೇ.15ರಿಂದ ಶೇ.50ರಷ್ಟು ಹೆಚ್ಚಳವಾಗಿದೆ. ಇದರಿಂದಾಗಿ ಅನೇಕ ರಫ್ತು ಒಪ್ಪಂದಗಳು ಅಸಾಧ್ಯವಾಗಿವೆ.

ಕಚ್ಚಾವಸ್ತುಗಳ ಕೊರತೆ: ಗಲ್ಫ್ ದಾರಿಯಾಗಿ ಬರುವ ಲೋಹ ಮೊದಲಾದ ಕಚ್ಚಾ ವಸ್ತುಗಳ ಮೇಲಿನ ಅವಲಂಬನೆಯಿಂದಾಗಿ ಭಾರತದ ವಾಹನೋದ್ಯಮ ಇಕ್ಕಟ್ಟಿಗೆ ಸಿಲುಕಿದೆ. ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಮುಂತಾದ ಪ್ರಮುಖ ಕಂಪನಿಗಳು ಅಲ್ಯುಮಿನಿಯಂ ಅಲಾಯ್‌ಗಳು, ತಾಮ್ರ ಮತ್ತಿತರ ಸರಕುಗಳನ್ನು ಬೇರೆ ದಾರಿಯಲ್ಲಿ ಕಳುಹಿಸುವಂತೆ ವಿತರಕರನ್ನು ಕೇಳಿಕೊಂಡಿವೆ. ಪ್ಲಾಸ್ಟಿಕ್, ರಾಳ, ಪಾಲಿಮರ್ ಮತ್ತು ಸಿಂಥೆಟಿಕ್ ರಬ್ಬರ್ ತಯಾರಿಕೆಗೆ ಅಗತ್ಯವಿರುವ ಕಚ್ಚಾ ತೈಲದ ಬೆಲೆ ಹೆಚ್ಚಾಗಿರುವುದರಿಂದ ಟೈರ್ ತಯಾರಕರು ತೊಂದರೆಗೆ ಒಳಗಾಗಿದ್ದಾರೆ.

ಇಂಧನ ಸಂಕಟ: ಯುದ್ಧವು ಕಚ್ಚಾತೈಲದ ಬೆಲೆಯನ್ನು ನೂರು ಡಾಲರ್ ದಾಟುವಂತೆ ಮಾಡಿದೆ. ಇದು ಭಾರತದ ಕಾರ್ಖಾನೆಗಳಲ್ಲಿ ವೆಚ್ಚವನ್ನು ಹೆಚ್ಚಿಸಿದೆ. ಭಾರತಕ್ಕೆ ಬರುವ ಗ್ಯಾಸ್‌ನ ಶೇ.90ರಷ್ಟು ಹರ್ಮುಜ್ ಜಲಸಂಧಿಯ ಮೂಲಕವೇ ಬರುತ್ತದೆ. ಇರಾನ್ ಹಾಗೂ ಭಾರತದ ನಡುವೆ ರಾಜತಾಂತ್ರಿಕ ಮಾತುಕತೆಗಳು ಫಲಪ್ರದವಾಗಿದ್ದರೂ, ಮಾರುಕಟ್ಟೆಯಲ್ಲಿರುವ ಆತಂಕ ಇನ್ನೂ ಕಡಿಮೆಯಾಗಿಲ್ಲ. ಅದಾನಿ ಟೋಟಲ್ ಗ್ಯಾಸ್‌ನಂತಹ ಕಂಪನಿಗಳು ಕೈಗಾರಿಕಾ ಬಳಕೆದಾರರು ಗ್ಯಾಸ್ ಬಳಕೆಯನ್ನು ಶೇ.40ರಷ್ಟು ಕಡಿಮೆ ಮಾಡಿಕೊಳ್ಳುವಂತೆ ಕೇಳಿಕೊಂಡಿವೆ. ಇದು ಉಕ್ಕಿನ ಫೌಂಡ್ರಿಗಳು, ವೆಲ್ಡಿಂಗ್ ಶಾಪ್‌ಗಳು ಮತ್ತು ಪೇಂಟ್ ಲೈನ್‌ಗಳಂತಹ ಕ್ಷೇತ್ರಗಳ ಮೇಲೆ ಹೊಡೆತವನ್ನು ನೀಡಿದೆ. ಸಹಜವಾಗಿಯೇ ಈ ಪ್ರತಿಕೂಲ ಪರಿಸ್ಥಿತಿ ಬೆಲೆ ಏರಿಕೆಗೆ ಕಾರಣವಾಗಲಿದೆ.

ವಿದ್ಯುತ್ ವಾಹನಗಳಿಗೆ ಬೇಡಿಕೆ: ಇರಾನ್ ಯುದ್ಧವು ವಿದ್ಯುತ್ ಚಾಲಿತ ವಾಹನಗಳ ಮೇಲೆ ಭಿನ್ನ ಪರಿಣಾಮವನ್ನು ಉಂಟು ಮಾಡಿದೆ. ಇಂಧನ ದರ ಹೆಚ್ಚಳದಿಂದಾಗಿ ಜನರು ವಿದ್ಯುತ್ ಚಾಲಿತ ವಾಹನಗಳ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ. 2025ರಲ್ಲಿ ಭಾರತದಲ್ಲಿ ಇವಿ ವಾಹನಗಳ ಮಾರಾಟ 22.7 ಲಕ್ಷಗಳಷ್ಟಿತ್ತು. ಇದು ಈ ವರ್ಷ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಆದರೆ, ಲಿಥಿಯಂ, ಕೋಬಾಲ್ಟ್ ಮತ್ತು ನಿಕಲ್‌ನಂತಹ ಬ್ಯಾಟರಿ ವಸ್ತುಗಳಿಗೆ ಆಮದನ್ನು ಅವಲಂಬಿಸಿರುವುದರಿಂದ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

ರಷ್ಯಾದಿಂದ ತೈಲ ಆಮದು: ಭಾರತದ ತೈಲ ಉದ್ಯಮಗಳು ಮಾರ್ಚ್‌ನಲ್ಲಿ ರಷ್ಯಾದ ತೈಲ ಖರೀದಿಯನ್ನು ಶೇ.45ರಷ್ಟು ಹೆಚ್ಚಿಸಿವೆ. ಅಮೆರಿಕವು ತಾತ್ಕಾಲಿಕ 30 ದಿನಗಳ ವಿನಾಯಿತಿಯನ್ನು ನೀಡಿದ ನಂತರ ಮೂರು ಕೋಟಿ ಬ್ಯಾರೆಲ್ ಕಚ್ಚಾ ತೈಲವನ್ನು ಭಾರತಕ್ಕೆ ತರಲಾಗಿದೆ. ಇದು ಇಂಧನ ಬಿಕ್ಕಟ್ಟನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆಯಾದರೂ, ಸರಕು ಆಮದು ವಿಚಾರದಲ್ಲಿ ಅತಂತ್ರ ಸ್ಥಿತಿ ಇನ್ನೂ ಮುಂದುವರಿದಿದೆ.