ಮನದಂಗಳದ ಹೊಸ ಚಿಗುರು..!
ಹೊಸ್ಮನೆ ಮುತ್ತು
ಕಾಲಚಕ್ರ ಉರುಳಿದಂತೆಲ್ಲಾ ಒಂದೊಂದು ಋುತುವು ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸುತ್ತದೆ. ಆದರೆ ವಸಂತ ಋುತು ಬಂತೆಂದರೆ ಸಾಕು, ಇಡೀ ಸೃಷ್ಟಿಯಲ್ಲೇ ಒಂದು ಮಾಂತ್ರಿಕ ಬದಲಾವಣೆ ಗೋಚರಿಸುತ್ತದೆ. ಮರಗಳ ಕೊಂಬೆಗಳಿಂದ ಹಳೆಯ, ಒಣಗಿದ ಎಲೆಗಳು ಉದುರಿ ಮೌನವಾಗಿ ನೆಲ ಸೇರಿದರೆ, ಆ ಜಾಗದಲ್ಲಿಮಂದಹಾಸ ಬೀರುವ ಹಸಿರು ಬಣ್ಣದ ಚಿಗುರುಗಳು ಮೂಡುತ್ತವೆ. ಈ ದೃಶ್ಯ ಕೇವಲ ನಿಸರ್ಗದ ಬಾಹ್ಯ ಬದಲಾವಣೆಯಲ್ಲ; ಅದು ಬದುಕಿನ ಪುನರುತ್ಥಾನದ ಒಂದು ಸಶಕ್ತ ಸಂಕೇತ.
ಹಳೆಯದು ಉದುರಲಿ, ಹೊಸದು ಚಿಗುರಲಿ: ‘ಯುಗಾದಿ’ ಎಂದರೆ ಯುಗದ ಆರಂಭ. ಇದು ಕೇವಲ ಪಂಚಾಂಗದ ಹೊಸ ವರ್ಷದ ಆರಂಭವಲ್ಲ, ಅದು ಬದುಕಿನ ಹೊಸ ಪ್ರಾರಂಭ. ಬದುಕಿನ ನವಚೈತನ್ಯದ ಹರಿಕಾರ. ಹಳೆಯ ನೋವು, ವಿಫಲತೆ ಮತ್ತು ಹತಾಶೆಗಳನ್ನು ಮರೆತು ಹೊಸ ಕನಸುಗಳತ್ತ ಹೆಜ್ಜೆ ಹಾಕುವ ಒಂದು ಪವಿತ್ರ ಕ್ಷಣ. ಗಿಡಮರಗಳು ಹೇಗೆ ತಮ್ಮ ಹಳೆಯ ಎಲೆಗಳನ್ನು ನಿರ್ಮೋಹದಿಂದ ತ್ಯಜಿಸಿ ಹೊಸ ಹಸಿರನ್ನು ಉಸಿರಾಡುತ್ತವೆಯೋ, ಹಾಗೆಯೇ ಮನುಷ್ಯನೂ ತನ್ನ ಹಳೆಯ ನೋವು, ಸೋಲು, ಹತಾಶೆಗಳನ್ನು ಕಳೆದುಕೊಂಡಾಗ ನವಚೈತನ್ಯಕ್ಕೆ ದಾರಿಯಾಗುತ್ತದೆ. ಚೈತ್ರದ ಚಿಗುರು ಸೋತ ಬದುಕಿನಲ್ಲೂಮತ್ತೆ ಪುಟಿದೇಳುವ ಶಕ್ತಿ ಇದೆ ಎಂಬ ಭರವಸೆಯನ್ನು ನಮಗೆ ನೀಡುತ್ತದೆ. ಈ ಲವಲವಿಕೆ ಕೇವಲ ಮರಗಿಡಗಳಿಗೆ ಸೀಮಿತವಾಗದೆ ನಮ್ಮ ಆಲೋಚನೆಗಳಲ್ಲೂಪ್ರತಿಫಲಿಸಬೇಕು. ಪ್ರಕೃತಿ ತನ್ನನ್ನು ತಾನು ನವೀಕರಿಸಿಕೊಳ್ಳುವಂತೆ, ನಾವೂ ನಮ್ಮ ವ್ಯಕ್ತಿತ್ವವನ್ನು ಸುಧಾರಿಸಿಕೊಳ್ಳಬೇಕು. ಇದು ಕೇವಲ ಪ್ರಕೃತಿಯ ನಿಯಮವಲ್ಲ, ಅದು ಜೀವನದ ಅನಿವಾರ್ಯ ಸತ್ಯವೂ ಹೌದು.
ಹೊಸ ಸಂಕಲ್ಪಗಳತ್ತ ಹೆಜ್ಜೆ: ಇಂದಿನ ಒತ್ತಡದ ಹಾಗೂ ಸ್ಪರ್ಧಾತ್ಮಕ ಜೀವನದಲ್ಲಿಮಾನಸಿಕ ಸಮತೋಲನವು ಒಂದು ಶಕ್ತಿಯಾಗಿದೆ. ಧ್ಯಾನ, ಆತ್ಮಪರಿಶೀಲನೆ ಮತ್ತು ಕೃತಜ್ಞತೆಯ ಭಾವನೆಗಳು ನಮ್ಮನ್ನು ಸಮಸ್ಥಿತಿಯಲ್ಲಿರಿಸುತ್ತವೆ. ಯುಗಾದಿಯ ಈ ಸಂದರ್ಭದಲ್ಲಿನಾವು ನಮ್ಮೊಳಗಿನ ದ್ವೇಷ, ಅಸೂಯೆಗಳನ್ನು ಒಣಗಿದ ಎಲೆಯಂತೆ ತೊರೆದು, ಕೃತಜ್ಞತೆಯ ಭಾವದೊಂದಿಗೆ ಸದ್ಗುಣಗಳನ್ನು ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣ. ಪ್ರಕೃತಿ ತನ್ನನ್ನು ತಾನು ನವೀಕರಿಸಿಕೊಳ್ಳುವಂತೆ, ನಾವೂ ನಮ್ಮ ವ್ಯಕ್ತಿತ್ವವನ್ನು ಸುಧಾರಿಸಿಕೊಂಡು ಹೊಸ ಚೈತನ್ಯ ತುಂಬಿಕೊಳ್ಳೋಣ.
ಯುಗಾದಿ ಎಂಬುದು ಜೀವನದ ತತ್ವ ಬೋಧಿಸುವ ಮಾರ್ಗದರ್ಶಿ. ಈ ಹಬ್ಬವು ನಮಗೆ ಬೇವು-ಬೆಲ್ಲದ ಸಮನ್ವಯವನ್ನೂ ತಿಳಿಸುತ್ತದೆ. ಬದಲಾವಣೆ ಜಗದ ನಿಯಮ; ಆ ಬದಲಾವಣೆಯನ್ನು ಆನಂದದಿಂದ ಸ್ವೀಕರಿಸುವುದೇ ಯುಗಾದಿಯ ನಿಜವಾದ ಸಾರ. ಬರುವ ವರ್ಷದ ಎಲ್ಲಾ ಸ್ಥಿತಿ-ಗತಿಗಳನ್ನು ಸಮಭಾವದಿಂದ ಸ್ವೀಕರಿಸುವ ಸಂಕಲ್ಪ ಮಾಡೋಣ. ಯುಗಾದಿಯ ಫಲ ಎಂತಹುದೇ ಇರಲಿ, ನಿಜವಾದ ಫಲ ನಮ್ಮ ಕೈಯಲ್ಲಿದೆ. ನಮ್ಮ ಸಣ್ಣ ಪ್ರಯತ್ನಗಳೇ ಸುಂದರ ಭವಿಷ್ಯವನ್ನು ಬರೆಯುತ್ತವೆ. ಚೈತ್ರದ ಲವಲವಿಕೆ ಮರಗಿಡಗಳಿಗೆ ಸೀಮಿತವಾಗದೆ, ನಮ್ಮ ಆಲೋಚನೆಗಳಲ್ಲೂಪ್ರತಿಫಲಿಸಿದಾಗ ಮಾತ್ರ ಉಗಾದಿ ಅರ್ಥಪೂರ್ಣವಾಗುತ್ತದೆ. ಈ ಹೊಸ ವರ್ಷವು ಬದುಕಿನಲ್ಲಿಹೊಸ ಆಶಯಗಳನ್ನು ಚಿಗುರಿಸಲಿ, ಚೈತ್ರದ ಚಿಗುರಿನಂತೆ ನಿಮ್ಮ ಕನಸುಗಳು ಅರಳಲಿ. ಹೊಸ ನಿರೀಕ್ಷೆ ಮತ್ತು ಪ್ರೀತಿಯೊಂದಿಗೆ ಈ ವರ್ಷವನ್ನು ಅರ್ಥಪೂರ್ಣವಾಗಿಸೋಣ.

