ಕೆರೆಗಳ ಹೂಳು ತೆಗೆದರೆ ಅಂತರ್ಜಲ ವೃದ್ಧಿ
ವಿಕ ಸುದ್ದಿಲೋಕ ತರೀಕೆರೆ
ಕೆರೆಗಳ ಹೂಳೆತ್ತುವುದರಿಂದ ಮೂಲಕ ಅಂತರ್ಜಲ ಮಟ್ಟ ಹಾಗೂ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಾಗಲಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಕುಸುಮಾಧರ್ ಹೇಳಿದರು.
ತಾಲೂಕಿನ ಕೊರಟೀಕೆರೆ ಗ್ರಾಮದ ಸರಸ್ವತಿಕಟ್ಟೆ ಕೆರೆಯಲ್ಲಿಅಭಿವೃದ್ಧಿ ಸಮಿತಿ, ಕೊರಟೀಕೆರೆ ಗ್ರಾ.ಪಂ. ಆಶ್ರಯದಲ್ಲಿಹೂಳೆತ್ತುವ ಕಾಮಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಧರ್ಮಸ್ಥಳ ಯೋಜನೆಯು ರೈತರಿಗೆ, ಗ್ರಾಮಗಳಿಗೆ ಅನುಕೂಲವಾಗುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡುತ್ತಿದೆ. ರಾಜ್ಯಾದ್ಯಂತ ಇದುವರೆಗೆ 929 ಕೆರೆಗಳನ್ನು ಪುನಶ್ಚೇತನಗೊಳಿಸಿ, ಹಸ್ತಾಂತರ ಮಾಡಲಾಗಿದೆ. ಬಡವರ, ಅಸಹಾಯಕರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣ, ಸಮುದಾಯದ ಅಭಿವೃದ್ಧಿಗೆ ಸಂಸ್ಥೆ ಶ್ರಮಿಸುತ್ತಿದೆ ಎಂದರು.
ಜಿಲ್ಲಾಜನಜಾಗೃತಿ ವೇದಿಕೆ ಸದಸ್ಯ ಕೆ.ಬಿ.ಮಲ್ಲಪ್ಪ ಮಾತನಾಡಿ, ಧರ್ಮಸ್ಥಳ ಯೋಜನೆಯು ವಾತ್ಸಲ್ಯ ಮನೆ ನಿರ್ಮಾಣ, ಮಾಸಾಶನ, ಸುಜ್ಞಾನನಿಧಿ, ಶಿಷ್ಯವೇತನ, ಮದ್ಯವರ್ಜನ ಶಿಬಿರ ಮತ್ತಿತರೆ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮಾದರಿಯಾಗಿದೆ ಎಂದರು.
ಮುಖಂಡ ಚಂದ್ರಶೇಖರ್ ಮಾತನಾಡಿದರು. ಗ್ರಾ.ಪಂ. ಮಾಜಿ ಅಧ್ಯಕ್ಷೆ ತನುಜಾ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ನೀಲಕಂಠಪ್ಪ, ಗ್ರಾಮಸ್ಥರಾದ ಶೇಖರಪ್ಪ, ಸ್ವಾಮಿ, ರಮೇಶ್ , ವಲಯ ಮೇಲ್ವಿಚಾರಕ ಮಂಜುನಾಥ್ , ಕೃಷಿ ಮೇಲ್ವಿಚಾರಕ ಸಂತೋಷ್ , ಸೇವಾಪ್ರತಿನಿಧಿ ಆಶಾ ಹಾಗೂ ಇತರರಿದ್ದರು.
7ತರೀಕೆರೆ1
ತರೀಕೆರೆ ತಾಲೂಕು ಕೊರಟೀಕೆರೆ ಗ್ರಾಮದಲ್ಲಿಕೆರೆ ಹೂಳೆತ್ತುವ ಕಾಮಗಾರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಕುಸುಮಾಧರ್ ಭೂಮಿಪೂಜೆ ನೆರವೇರಿಸಿದರು.

