ವಿಕ ಸುದ್ದಿಲೋಕ ತರೀಕೆರೆ ನಮ್ಮ ಪೂರ್ವಿಕರಿಂದ ಬಂದಿರುವ ಜನಪದ ಸಾಹಿತ್ಯ ತನ್ನದೇ ಆದ ಇತಿಹಾಸ, ಪರಂಪರೆ ಹೊಂದಿದೆ. ಜನಪದ ಸಾಹಿತ್ಯ, ಸಂಸ್ಕೃತಿ ಉಳಿಸಿ, ಬೆಳೆಸುವುದು ನಮ್ಮೆಲ್ಲರ ಹೊಣೆ ಎಂದು ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಲೀಲಾ ಸೋಮಶೇಖರಯ್ಯ ಹೇಳಿದರು. ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ವತಿಯಿಂದ ಪಟ್ಟಣದ ಶ್ರೀಅನ್ನಪೂರ್ಣೇಶ್ವರಿ ದೇವಾಲಯದಲ್ಲಿಶನಿವಾರ ಆಯೋಜಿಸಿದ್ದ ಕನ್ನಡ ಜಾನಪದ ಪರಿಷತ್ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಹಿಂದಿನ ಕಾಲದಲ್ಲಿಜನರು ಕೃಷಿ ಚಟುವಟಿಕೆ, ಹಬ್ಬ, ಹರಿದಿನಗಳಲ್ಲಿ, ಸಮಾರಂಭಗಳಲ್ಲಿಜನಪದ ಹಾಡುಗಳನ್ನು ಹಾಡುತ್ತಿದ್ದರು. ಇಂದಿನ ಆಧುನಿಕ ಭರಾಟೆಯಲ್ಲಿಈ ಸಾಹಿತ್ಯ ಮರೆಯಾಗುತ್ತಿದೆ. ಜಾನಪದ ಉಳಿಯಬೇಕಾದರೆ ಶಾಲಾ- ಕಾಲೇಜುಗಳಲ್ಲಿ, ಮನೆಗಳಲ್ಲಿಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಎಸ್ .ವಿಶಾಲಾಕ್ಷಮ್ಮ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಜಾನಪದದ ಬಗ್ಗೆ ಆಸಕ್ತಿ, ಕಾಳಜಿ ಬೆಳೆಯಬೇಕು ಎಂದು ಹೇಳಿದರು. ಶ್ರೀಪತಿ ಭಜನಾ ಮಂಡಳಿ ಅಧ್ಯಕ್ಷೆ ರತ್ನಮ್ಮ, ಶ್ರೀಕೃಷ್ಣ ಭಜನಾ ಮಂಡಳಿ ಅಧ್ಯಕ್ಷೆ ವೀಣಾ, ಯಶೋಧ, ಚಂದ್ರಕಲಾ, ದಾಕ್ಷಾಯಿಣಿ ಬಾಯಿ, ವಸಂತ, ಲೋಕಮಾತೆ ಇತರರಿದ್ದರು.

